ಬೆಂಗಳೂರು: ಪ್ರಜ್ವಲ್ ರೇವಣ್ಣ ಭಾರತಕ್ಕೆ ವಾಪಸ್ಸು ಬಂದು ಎಸ್ಐಟಿಗೆ ಸರೆಂಡರ್ ಆಗಿದ್ದು ಯಾಕೆ ಅಂತ ರಾಜ್ಯ ಗೃಹ ಸಚಿವ ಜಿ ಪರಮೇಶ್ವರ್ ವಿವರಿಸಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಪ್ರಜ್ವಲ್ ವಿದೇಶದ್ಲಲಿದ್ದಾಗ ರಾಜ್ಯದ ಪೊಲೀಸ್ ಅಧಿಕಾರಿಗಳನ್ನು ಕಳಿಸಿ ವಶಕ್ಕೆ ಪಡೆದು ವಾಪಸ್ಸು ಕರೆತರುವುದು ಸಾಧ್ಯವಿರಲಿಲ್ಲ, ಯಾಕೆಂದರೆ, ಅಂಥ ನಡೆಗೆ ಅದರದ್ದೇ ಆದ ಪ್ರಕ್ರಿಯೆಗಳಿರುತ್ತವೆ, ಬೇರೆ ರಾಷ್ಟ್ರಗಳೊಂದಿಗೆ ನಾವು ಮಾಡಿಕೊಂಡಿರುವ ಒಪ್ಪಂದಗಳನ್ನು ಮಾನ್ಯ ಮಾಡಬೇಕಾಗುತ್ತದೆ ಎಂದರು.
ಅರೋಪಿಯೊಬ್ಬ ವಿದೇಶದಲ್ಲಿ ತಲೆಮರೆಸಿಕೊಂಡಿದ್ದರೆ ಕೇಂದ್ರೀಯ ತನಿಖಾ ದಳದ ಮೂಲಕ ಇಂಟರ್ ಪೋಲ್ ಗೆ ಮಾಹಿತಿ ರವಾನಿಸಿ ಬ್ಲ್ಯೂ ಕಾರ್ನರ್ ನೋಟೀಸ್ ಜಾರಿ ಮಾಡಿಸಬೇಕಾಗುತ್ತದೆ ಎಂದು ಹೇಳಿದ ಪರಮೇಶ್ವರ್, ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದ ಫಲಿತಾಂಶ ತಮ್ಮ ಅನುಕೂಲಕ್ಕೆ ತಕ್ಕಂತೆ ಬರಲಾರದು ಎಂದೆನಿಸಿದ್ದರಿಂದ ಪ್ರಜ್ವಲ್ ವಾಪಸ್ಸು ಬಂದು ಸರೆಂಡರ್ ಆಗಿದ್ದಾರೆ ಎಂದರು. ಒಂದು ಪಕ್ಷ ಪ್ರಜ್ವಲ್ ಸೋತರೆ ಅವರ ಡಿಪ್ಲೊಮ್ಯಾಟಿಕ್ ಪಾಸ್ಪೋರ್ಟ್ ಆಟೋಮ್ಯಾಟಿಕ್ ಆಗಿ ರದ್ದಾಗುತ್ತದೆ, ಹಾಗಾಗಿ ಅವರಿಗೆ ವಾಪಸ್ಸು ಬಾರದೆ ಬೇರೆ ದಾರಿಯಿರಲಿಲ್ಲ ಎಂದು ಪರಮೇಶ್ವರ್ ಹೇಳಿದರು.