ರಾಜ್ಯ ಸರಕಾರ ಉತ್ತಮ ವೈದ್ಯಕೀಯ ಸೌಲಭ್ಯ ನೀಡಿದೆ: ಸಚಿವ ದಿನೇಶ ಗುಂಡೂರಾವ

Sandeep Malannavar
ರಾಜ್ಯ ಸರಕಾರ ಉತ್ತಮ ವೈದ್ಯಕೀಯ ಸೌಲಭ್ಯ ನೀಡಿದೆ: ಸಚಿವ ದಿನೇಶ ಗುಂಡೂರಾವ
WhatsApp Group Join Now
Telegram Group Join Now
50 ಹಾಸಿಗೆಗಳ ತೀವ್ರ ನಿಗಾ ಘಟಕ ನಿರ್ಮಾಣಕ್ಕೆ ಶಂಕುಸ್ಥಾಪಣೆ.
ಬೆಳಗಾವಿ : ರಾಜ್ಯದಲ್ಲಿ ಅತ್ಯಂತ ಉತ್ತಮವಾಗಿ ನಿರ್ವಹಿಸುತ್ತಿರುವ ಆಸ್ಪತ್ರೆಗಳಲ್ಲಿ ಬೈಲಹೊಂಗಲ ಆಸ್ಪತ್ರೆ ಮುಂಚೂಣಿಯಲ್ಲಿದೆ. ಪ್ರತಿ ತಾಲೂಕಿನ ಆಸ್ಪತ್ರೆಗಳು ಇದೇ ರೀತಿಯಲ್ಲಿ ನಿರ್ವಹಿಸಿದರೆ ರೋಗಿಗಳ ಬಹುತೇಕ ಸಮಸ್ಯೆಗಳು ಪರಿಹಾರವಾಗುತ್ತವೆ. ಸ್ಥಳೀಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಾಲೂಕಾ ಆಸ್ಪತ್ರೆ ಮೇಲ್ದರ್ಜೆಗೆರಿಸುವ ಉದ್ದೇಶದಿಂದ ನೂತನವಾಗಿ 50 ಹಾಸಿಗೆಗಳ ತೀವ್ರ ನಿಗಾ ಘಟಕ ಮಂಜೂರು ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ ಗುಂಡುರಾವ್  ಹೇಳಿದರು.
ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಬೈಲಹೊಂಗಲ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ನಡೆದ 50 ಹಾಸಿಗೆಗಳ ತೀವ್ರ ನಿಗಾ ಘಟಕ (ಕ್ರಿಟಿಕಲ್ ಕೇರ್ ಯೂನಿಟ್) ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಬಡತನ ನಿವಾರಣೆ, ಸಾಮಾಜಿಕ ನ್ಯಾಯ ಕಲ್ಪಿಸಲು ಗ್ಯಾರಂಟಿ ಯೋಜನೆಗಳ ಮೂಲಕ ಮಾದರಿ ರಾಜ್ಯ ನಿರ್ಮಾಣಕ್ಕೆ ಸರಕಾರ  ಮುಂದಾಗಿದೆ. ಆರೋಗ್ಯ ಇಲಾಖೆಯ ವಿವಿಧ ಕಾಮಗಾರಿಗಳಿಗೆ ಬೆಳಗಾವಿ ಜಿಲ್ಲೆಗೆ ಸುಮಾರು 300 ಕೋಟಿ ಅನುದಾನ ಈಗಾಗಲೇ ಸರಕಾರ ಒದಗಿದ್ದು, ರಾಜ್ಯಕ್ಕೆ ಸರಕಾರ ಸಾಕಷ್ಟು ವೈದ್ಯಕೀಯ ಸೇವೆ ಕೊಡುಗೆಯಾಗಿ ನೀಡಿದೆ ಎಂದರು.
ನುಡಿದಂತೆ ನಡೆದ ಸರಕಾರ ಜನಪರ ಕಾರ್ಯಕ್ರಮಗಳನ್ನು ನೀಡುತ್ತಿದೆ. 50 ಹಾಸಿಗೆಗಳ ತೀವ್ರ ನಿಗಾ ಘಟಕ ನಿರ್ಮಾಣ ಬೈಲಹೊಂಗಲ ತಾಲೂಕಿಗೆ ಅತ್ಯವಶ್ಯವಾಗಿದೆ. ಆಸ್ಪತ್ರೆಯಲ್ಲಿ ತಿಂಗಳಿಗೆ ಸುಮಾರು 200 ಹೆರಿಗೆಗಳಾಗುತ್ತಿವೆ. ಸಾರ್ವಜನಿಕರಿಂದ ಯಾವುದೇ ಸಮಸ್ಯೆ ಕೇಳಿಬರುತ್ತಿಲ್ಲ. ಸ್ಥಳೀಯವಾಗಿ ಹೆಚ್ಚಿನ ವೈದ್ಯಕೀಯ ಸೇವೆ ಸಾರ್ವಜನಿಕರಿಗೆ ಸಿಗುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಸಾಕಷ್ಟು ಹೊಸ ಬಸ್ ಬಿಡುಗಡೆ ಮಾಡಲಾಗಿದೆ. ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜೊತೆಗೆ ಎಲ್ಲಾ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಪುನೀತ್ ರಾಜಕುಮಾರ ಹೃದಯ ಜ್ಯೋತಿ, ಟೆಲಿ ಐಸಿಯು, ಗೃಹ ಆರೋಗ್ಯ ಯೋಜನೆ ಕೂಡ ಜಾರಿಯಲ್ಲಿದೆ. ಸ್ಥಳೀಯ ಶಾಸಕರ ಬೇಡಿಕೆಯಂತೆ ಆಸ್ಪತ್ರೆ ಕಂಪೌಂಡ್ ನಿರ್ಮಿಸಲು ಅಗತ್ಯವಿರುವ 2 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು..                 ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ  50 ಹಾಸಿಗೆಗಳ ತೀವ್ರ ನಿಗಾ ಘಟಕ (ಕ್ರಿಟಿಕಲ್ ಕೇರ್ ಯೂನಿಟ್) ಕಟ್ಟಡ ನಿರ್ಮಾಣ ಕಾಮಗಾರಿಗೆ ಸುಮಾರು 23 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಬೈಲಹೊಂಗಲ ಆಸ್ಪತ್ರೆಯ ಸಿಬ್ಬಂದಿಗಳು ಅತ್ಯಂತ ಒಳ್ಳೆಯ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಸುಮಾರು 7 ವರ್ಷಗಳ ಹಿಂದೆ 110 ಒಪಿಡಿ ಗಳು ಮಾತ್ರ ನೋಂದಣಿಯಾಗುತ್ತಿದ್ದವು. ಈಗ 800 ಕ್ಕೂ ಅಧಿಕ ಒಪಿಡಿ ನೋಂದಣಿಯಾಗುತ್ತಿವೆ. ಸಾರ್ವಜನಿಕರಿಂದ ಆಸ್ಪತ್ರೆಯ ನಿರ್ವಹಣೆ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿಬರುತ್ತಿವೆ. ಬೈಲಹೊಂಗಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಉಪಕರಣಗಳು, ವೈದ್ಯರ ನೇಮಕಾತಿ ಸೇರಿದಂತೆ ಯಾವುದೇ ಕೊರತೆ ಇರುವುದಿಲ್ಲ. ರಕ್ಷಣಾತ್ಮಕ ಹಿತ ದೃಷ್ಟಿಯಿಂದ ಆಸ್ಪತ್ರೆ ಕಾಂಪೌಂಡ್ ನಿರ್ಮಾಣಕ್ಕೆ 2 ಕೋಟಿ ಅನುದಾನ ಬಿಡುಗಡೆ ಮಾಡಬೇಕು.
ಅದೇ ರೀತಿಯಲ್ಲಿ ಆಂಬ್ಯುಲೆನ್ಸ್ ಸುತ್ತುವ ವ್ಯಾಪ್ತಿ ದೊಡ್ಡದಾಗಿದ್ದು, ತಿಂಗಳ ಇಂಧನ ವೆಚ್ಚ ಮಿತಿ ಹೆಚ್ಚಿಸಬೇಕು. ಈಗಾಗಲೇ ಕ್ರಿಟಿಕಲ್ ಕೇರ್ ಯೂನಿಟ್ ಕಟ್ಟಡ ನಿರ್ಮಾಣದ ಗುತ್ತಿಗೆದಾರಿಗೆ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಸೂಚಿಸಲಾಗಿದೆ ಎಂದು ಶಾಸಕ ಮಹಾಂತೇಶ ಕೌಜಲಗಿ ತಿಳಿಸಿದರು.
   ಕಾರ್ಯಕ್ರಮದಲ್ಲಿ  ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ, ಕೆ.ಎಸ್.ಆರ್.ಟಿ.ಸಿ ರಾಜ್ಯ ಉಪಾಧ್ಯಕ್ಷ ಸುನೀಲ ಹನುಮಣ್ಣವರ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಈಶ್ವರ ಗಡಾದಿ, ಬೈಲಹೊಂಗಲ ತಹಶೀಲ್ದಾರ್ ಹನುಮಂತ ಶಿರಹಟ್ಟಿ, ಬೈಲಹೊಂಗಲ ತಾಲೂಕಾ ವೈದ್ಯಾಧಿಕಾರಿ ಸಂಜಯ ಸಿದ್ದಣ್ಣವರ ಸೇರಿದಂತೆ ಆರೋಗ್ಯ ರಕ್ಷಣಾ ಸಮಿತಿಯ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article