ಮಂಡ್ಯ, ಜೂನ್.13: ವಿಧಾನಸಭೆ ಚುನಾವಣೆ ಗೆಲ್ಲಲು ಕಾಂಗ್ರೆಸ್ ಉಪಯೋಗಿಸಿದ್ದ ಪಂಚ ಗ್ಯಾರಂಟಿ ಯೋಜನೆ ಎಫೆಕ್ಟ್ನಿಂದಾಗಿ ಮಂಡ್ಯ ಜಿಲ್ಲೆಯ ಅನ್ನದಾತರು ಸಂಕಷ್ಟ ಎದುರಿಸುವಂತಾಗಿದೆ. ಹೈನುಗಾರಿಕೆ ನಂಬಿಕೊಂಡ ರೈತರಿಗೆ ಕಳೆದ ಐದು ತಿಂಗಳಿಂದ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಆಗದ ಸಮಸ್ಯೆಯಾಗಿದೆ. ಹೈನುಗಾರಿಕೆ ಉತ್ತೇಜಿಸುವ ಸಲುವಾಗಿ ರಾಜ್ಯ ಸರ್ಕಾರ ಕ್ಷೀರಸಿರಿ ಯೋಜನೆ ಅಡಿ ಪ್ರತಿ ಲೀಟರ್ಗೆ ಐದು ರೂ ಪ್ರೋತ್ಸಾಹ ಧನ ನೀಡುತ್ತಿತ್ತು. ಆದರೆ ಇದುವರೆಗೆ ಐದು ತಿಂಗಳ ಪ್ರೋತ್ಸಾಹ ಧನ ರೈತರ ಕೈಗೆ ಸಿಕ್ಕಿಲ್ಲ. ಹೀಗಾಗಿ ರೈತರು ಅಸಮಾಧಾನ ಹೊರ ಹಾಕಿದ್ದಾರೆ.
ಮಂಡ್ಯ ಜಿಲ್ಲೆಯ ಮನ್ ಮುನ್(ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟ) ವ್ಯಾಪ್ತಿಯಲ್ಲಿ 67 ಕೋಟಿ 91 ಲಕ್ಷ ರೂ ಬಾಕಿ ಇದೆ. ಅಕ್ಟೋಬರ್, ನವೆಂಬರ್, ಡಿಸೆಂಬರ್, ಜನವರಿ ಹಾಗೂ ಫೆಬ್ರವರಿ ತಿಂಗಳ ಪ್ರೋತ್ಸಾಹ ಧನ ಬಾಕಿ ಇದೆ. ವಾರದ ಹಿಂದೆ ಮಾರ್ಚ್ ಹಾಗೂ ಏಪ್ರಿಲ್ ತಿಂಗಳ ಪ್ರೋತ್ಸಾಹ ಧನವನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಸದ್ಯ ಈಗ ಇನ್ನೂ 5 ತಿಂಗಳ ಪ್ರೋತ್ಸಾಹ ಧನ ಬಾಕಿ ಇದೆ. ಜಿಲ್ಲೆಯಲ್ಲಿ 98 ಸಾವಿರ ರೈತ ಫಲಾನುಭವಿಗಳು ಇದ್ದಾರೆ. ಮೇ ತಿಂಗಳ ಪ್ರೋತ್ಸಾಹ ಧನ ಸೇರಿದರೆ 80 ಕೋಟಿ ಹಣ ಬಾಕಿ ಇದೆ. ಪ್ರತಿ ತಿಂಗಳು ಕ್ಷೀರ ಸಿರಿ ಪೋರ್ಟಲ್ ಮೂಲಕ ಮನ್ ಮುಲ್ ಮಾಹಿತಿ ನೀಡುತ್ತಿದೆ. ಪ್ರೋತ್ಸಾಹ ಧನ ನಂಬಿಕೊಂಡ ರೈತರಿಗೆ ಸರ್ಕಾರ ಬರೆ ಎಳೆದಿದೆ ಎಂದು ಸರ್ಕಾರದ ವಿರುದ್ಧ ರೈತರು, ಕನ್ನಡ ಸಂಘಟನೆಗಳು ಆಕ್ರೋಶ ಹೊರ ಹಾಕಿವೆ.