ಸಿಕ್ಕಿಂ,30:ಇನ್ಮುಂದೆ ಹೈಕೋರ್ಟ್ನಲ್ಲಿ ಮಹಿಳಾ ಸಿಬ್ಬಂದಿಗೆ ಮುಟ್ಟಿನ ರಜೆ ಸಿಗಲಿದೆ. ಸಿಕ್ಕಿಂ ಹೈಕೋರ್ಟ್ ಈ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದು, ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದೆ. ಹೈಕೋರ್ಟ್ನ ಮಹಿಳಾ ಉದ್ಯೋಗಿಗಳು ತಿಂಗಳಲ್ಲಿ 2-3 ದಿನ ಮುಟ್ಟಿನ ರಜೆ ಪಡೆಯಬಹುದು ಎಂದು ಹೇಳಲಾಗಿದ್ದು, ಇದರಿಂದ ಮಹಿಳಾ ಸಿಬ್ಬಂದಿ ಸಂತಸಪಟ್ಟಿದ್ದಾರೆ.
ಆದರೆ ಈ ರಜೆಯನ್ನು ಹೈಕೋರ್ಟ್ನ ವೈದ್ಯಾಧಿಕಾರಿಗಳ ಶಿಫಾರಸಿನ ಮೇರೆಗೆ ನೀಡಲಾಗುತ್ತದೆ. ಇದನ್ನು ಒಟ್ಟಾರೆ ರಜೆ ಜತೆಗೆ ಪರಿಗಣಿಸಲಾಗುವುದಿಲ್ಲ.
ಸಿಕ್ಕಿಂ ಹೈಕೋರ್ಟ್ ದೇಶದ ಅತ್ಯಂತ ಚಿಕ್ಕ ಹೈಕೋರ್ಟ್ ಆಗಿದ್ದು ದೊಡ್ಡ ನಿರ್ಧಾರವನ್ನೇ ಕೈಕೊಂಡಿದೆ. ಇದರಲ್ಲಿ ಮೂವರು ನ್ಯಾಯಮೂರ್ತಿಗಳು ಇದ್ದಾರೆ, ಒಬ್ಬರು ಮಹಿಳಾ ಅಧಿಕಾರಿ ಸೇರಿದಂತೆ ಕೇವಲ 9 ಮಂದಿ ಇದ್ದಾರೆ.
ಸಿಕ್ಕಿಂ ಹೈಕೋರ್ಟ್ ಮುಟ್ಟಿನ ರಜೆ ನೀತಿಯನ್ನು ಪರಿಚಯಿಸಿದ ಮೊದಲ ಹೈಕೋರ್ಟ್ ಆಗಿದೆ. ಪ್ರಸ್ತುತ, ಮುಟ್ಟಿನ ರಜೆಗೆ ಯಾವುದೇ ರಾಷ್ಟ್ರೀಯ ನೀತಿ ಅಥವಾ ಕಾನೂನು ಇಲ್ಲ.