ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವಿದ್ಯಾರ್ಥಿನಿ, ಕಿರಿಯ ವೈದ್ಯೆ ಮೇಲಿನ ಅತ್ಯಾಚಾರ, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಂಗಾಳ ಪೊಲೀಸರಿಗೆ ಗಡುವು ನೀಡಿದ್ದಾರೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಸೋಮವಾರ ತಿಳಿಸಿದರು.
ಭಾನುವಾರದೊಳಗೆ ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಸಾಧ್ಯವಾಗದಿದ್ದರೆ, ನಾವು ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುತ್ತೇವೆ ಎಂದಿದ್ದಾರೆ. ಕೋಲ್ಕತ್ತಾ ಪೊಲೀಸ್ ಕಮಿಷನರ್ ಅವರಿಂದ ಘಟನೆಯ ಬಗ್ಗೆ ನನಗೆ ತಿಳಿದಾಗ, ತಕ್ಷಣ ಮತ್ತು ಕ್ಷಿಪ್ರ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಆಸ್ಪತ್ರೆಯಲ್ಲಿ ನರ್ಸ್‌ಗಳು ಮತ್ತು ಭದ್ರತಾ ಸಿಬ್ಬಂದಿ ಇದ್ದರೂ ಘಟನೆ ಹೇಗೆ ನಡೆಯಿತು ಎಂಬುದು ಅರ್ಥವಾಗುತ್ತಿಲ್ಲ. ಪ್ರಕರಣ ಸಂಬಂಧ ತ್ವರಿತ ನ್ಯಾಯಾಲಯ ಸ್ಥಾಪಿಸಲಾಗುವುದು ಎಂದರು. ಪೊಲೀಸರು, ಶ್ವಾನ ದಳ, ವಿಧಿವಿಜ್ಞಾನ ವಿಭಾಗ ಹಾಗೂ ಇತರೆ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಲಾಗಿದೆ. ಭಾನುವಾರದೊಳಗೆ ಪ್ರಕರಣವನ್ನು ಇತ್ಯರ್ಥಪಡಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಇದು ಆಗದಿದ್ದರೆ ಈ ಪ್ರಕರಣವನ್ನು ನಾವು ನಮ್ಮ ಕೈಯಲ್ಲಿ ಇಟ್ಟುಕೊಳ್ಳುವುದಿಲ್ಲ. ಅದನ್ನು ಸಿಬಿಐಗೆ ಒಪ್ಪಿಸುತ್ತೇವೆ.