ಧಾರವಾಡ : ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಈ ವರ್ಷದ ಗಣೇಶೋತ್ಸವ ಪರಿಸರಸ್ನೇಹಿ ಗಣೇಶೋತ್ಸವಾಗಬೇಕು. ಭಾರತೀಯ ಸಂಸ್ಕೃತಿಯ ಆಧಾರಿತ ವಾದ್ಯ ಮತ್ತು ವಾದ್ಯಮೇಳಗಳಿಗೆ ಹೆಚ್ಚಿನ ಆಧ್ಯತೆ ನೀಡಬೇಕು ಎಂದು ಮೇಯರ್ ಜ್ಯೋತಿ ಪಾಟೀಲ ಹೇಳಿದರು.
ಧಾರವಾಡದ ಪಾಲಿಕೆ ಕಚೇರಿಯ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿವರ್ಷಕ್ಕಿಂತ ಈ ವರ್ಷ ಅತೀ ಹೆಚ್ಚು ಜನರು ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಮಾಡುವಂತೆ ಮಾಡುವ ಗುರಿ ನಮ್ಮದಾಗಿದೆ. ಅದಕ್ಕಾಗಿ ಒಂದು ಲಕ್ಷ ಜನರಿಗೆ ಡಿಜಿಟಿಲ್ ಪ್ರಮಾಣ ಪತ್ರ ನೀಡುತ್ತೇವೆ ಎಂದರು.
ಇಕೋಭಕ್ತಿ ಸಂಭ್ರಮ ಎನ್ನುವ ವಿನೂತನ ಕಾರ್ಯಕ್ರಮ ಮಾಡುತ್ತಿದ್ದು, ಇದರಡಿಯಲ್ಲಿ ಗಣೇಶೋತ್ಸವದ ಎಲ್ಲ ಕಾರ್ಯಕ್ರಮಗಳು ಪರಿಸರ ಸ್ನೇಹಿಯಾಗಿ ನಡೆಯುವಂತೆ ನೋಡಿಕೊಳ್ಳುವ ವ್ಯವಸ್ಥೆ ಮಾಡಿದ್ದೇವೆ. ಈಗಾಗಲೇ ಅವಳಿ ನಗರದಲ್ಲಿ 350 ಸ್ಥಳಗಳಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅರ್ಜಿ ಬಂದಿವೆ. ಎಲ್ಲರಿಗೂ ಅವಕಾಶ ನೀಡಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಗಣೇಶನ ಸಂಭ್ರಮಾಚರಣೆ ಮಾಡುವಂತೆ ಕೋರುವುದಾಗಿ ಹೇಳಿದರು.
ಗಣೇಶ ವಿಸರ್ಜನೆಗೆ ಅನುಕೂಲವಾಗುವ ದೃಷ್ಟಿಯಿಂದ ಈಗಾಗಲೇ ಮೆರವಣಿಗೆ ಸಂಚರಿಸುವ ರಸ್ತೆಗಳಲ್ಲಿನ ಗಿಡಗಳ ಕೊಂಬೆರೆಂಬೆಗಳನ್ನು ಕತ್ತರಿಸಲಾಗಿದೆ. ಗುಂಡಿಗಳನ್ನು ತುಂಬಲಾಗಿದ್ದು, ರಸ್ತೆ ಸ್ವಚ್ಛತೆ ಕಾರ್ಯಕೂಡ ಮಾಡಲಾಗಿದೆ. ಅಷ್ಟೇಯಲ್ಲ, ಪ್ರತಿ ವಲಯವಾರು ಐದಾರು ಕೃತಕ ಬಾವಿಗಳು ಅಂದರೆ ನೀರಿನ ಟ್ಯಾಂಕರ್‌ಗಳನ್ನು ಗಣೇಶ ವಿಸರ್ಜನೆಗೆ ಬಳಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದರು.
ಪಾಲಿಕೆ ಆಯುಕ್ತರಾದ ರುದ್ರೇಶ ಗಾಳಿ ಮಾತನಾಡಿ, ಅತ್ಯುತ್ತಮವಾಗಿ ಪರಿಸರ ಸ್ನೇಹಿ ಎನಿಸಿಕೊಳ್ಳುವ ಮನೆ ಗಣಪತಿಗಳಿಗೆ ಈ ಬಾರಿ ಪಾಲಿಕೆಯಿಂದ ವಿಶೇಷ ಬಹುಮಾನ ನೀಡುತ್ತೇವೆ. ಗಣೇಶಮೂರ್ತಿ, ಮಂಟಪ ಮತ್ತು ಒಟ್ಟಾರೆ ಅಲಂಕಾರವೆಲ್ಲವೂ ಪರಿಸ್ನೇಹಿಯಾಗಿರುವ ಹತ್ತು ಮನೆಗಳಿಗೆ ವಿಶೇಷ ಬಹುಮಾನ ನೀಡುತ್ತೇವೆ ಎಂದು ಹೇಳಿದರು.
ಪಾಲಿಕೆ ಆಯುಕ್ತ ರುದ್ರೇಶ ಗಾಳಿ. ಉಪ ಮೇಯರ್ ಸಂತೋಷ ಚೌಹಾನ್, ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.