ಮಂಗಳೂರು, ಏಪ್ರಿಲ್ 12: ನಗರ ಹೊರವಲಯದ ಅಡ್ಯಾರ್‌ನಲ್ಲಿರುವ ‘ಬೊಂಡ ಫ್ಯಾಕ್ಟರಿ’ಯಲ್ಲಿ ಎಳನೀರು ಕುಡಿದು ಹಲವು ಮಂದಿ ಅಸ್ವಸ್ಥರಾಗಿದ್ದಾರೆ. ಇದುವರೆಗೆ ಒಟ್ಟು 137 ಜನರು ಅಸ್ವಸ್ಥರಾಗಿರುವುದು ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಎಳನೀರು ಮತ್ತು ನ್ಯಾಚುರಲ್ ಐಸ್ ಕ್ರೀಂ ಮಾರಾಟ ಸಂಸ್ಥೆಯಾದ ‘ಬೊಂಡ ಫ್ಯಾಕ್ಟರಿ’ಯನ್ನು ಬಂದ್ ಮಾಡುವಂತೆ ದಕ್ಷಿಣಕನ್ನಡ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ತಿಮ್ಮಯ್ಯ ಆದೇಶಿಸಿದ್ದಾರೆ. ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಜಿಲ್ಲಾ ಅಂಕಿತ ಅಧಿಕಾರಿ ಆಹಾರ ಸುರಕ್ಷತೆ, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಅವರನ್ನು ಒಳಗೊಂಡ ತಂಡ ಗುರುವಾರ ಅಡ್ಯಾರ್‌ನ ಬೊಂಡ ಫ್ಯಾಕ್ಟರಿಗೆ ಭೇಟಿ ನೀಡಿ ಸಂಸ್ಥೆಯ ಮುಖ್ಯಸ್ಥರೊಂದಿಗೆ ಚರ್ಚಿಸಿ ತಾತ್ಕಾಲಿಕವಾಗಿ ಮತ್ತು ಮತ್ತು ಮುಂದಿನ ಆದೇಶದವರೆಗೆ ಬೊಂಡ ನೀರು ಮತ್ತು ಇತರೆ ಆಹಾರ ಪದಾರ್ಥಗಳನ್ನು ಮಾರಾಟ ಮಾಡದಂತೆ ನೋಟೀಸ್ ನೀಡಿ ಬಂದ್ ಮಾಡಿಸಿದ್ದಾರೆ.
ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಡಾ.ತಿಮ್ಮಯ್ಯ, ಬೊಂಡ ಫ್ಯಾಕ್ಟರಿಯ ಎಳನೀರು ಕುಡಿದು ಇದುವರೆಗೆ 137 ಮಂದಿ ಅಸ್ವಸ್ಥರಾಗಿರುವುದು ಬೆಳಕಿಗೆ ಬಂದಿದ್ದು, ಹೊರರೋಗಿಗಳಾಗಿ 84 ಮಂದಿ ಒಳರೋಗಿಗಳಾಗಿ 53 ಮಂದಿಗೆ ಚಿಕಿತ್ಸೆ ಪಡೆದಿದ್ದಾರೆ. ಸದ್ಯ ಮಂಗಳೂರು, ಬಂಟ್ವಾಳದ ಸರ್ಕಾರಿ, ಖಾಸಗಿ ಆಸ್ಪತ್ರೆಯಲ್ಲಿ 30 ಮಂದಿಗೆ ಚಿಕಿತ್ಸೆ ಮುಂದುವರೆದಿದ್ದು, ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ಮಾಹಿತಿ ನೀಡಿದ್ದಾರೆ.