ಮಣಿಪುರ,08: ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಭಾರತದ ವಿವಿಧ ಭೌಗೋಳಿಕ ಪ್ರಾಂತ್ಯಗಳಲ್ಲಿರುವವರ ಮುಖ ಲಕ್ಷಣಗಳ ಬಗ್ಗೆ ಮಾತನಾಡಿದ್ದು ಈಗ ದೇಶಾದ್ಯಂತ ಚರ್ಚೆಯಾಗುತ್ತಿದೆ.
ಭಾರತದ ದಕ್ಷಿಣ ಪ್ರದೇಶದಲ್ಲಿರುವವರು ಆಫ್ರಿಕನ್ನರನ್ನು ಹೋಲುತ್ತಾರೆ, ಪಶ್ಚಿಮ ಪ್ರದೇಶದಲ್ಲಿರುವವರು ಮಧ್ಯಪ್ರಾಚ್ಯದ ಜನರನ್ನು ಹೋಲುತ್ತಾರೆ ಈಶಾನ್ಯ ರಾಜ್ಯದವರು ಚೀನಾ ಜನರಂತೆ ಕಾಣುತ್ತಾರೆ ಎಂದು ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.
ಪಿತ್ರೋಡಾ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮಣಿಪುರ ಸಿಎಂ ಬಿರೇನ್ ಸಿಂಗ್ ಕಾಂಗ್ರೆಸ್ ನಾಯಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಪಿತ್ರೋಡಾ ಹೇಗೆ ಈ ರೀತಿಯ ಜನಾಂಗೀಯ ಹೇಳಿಕೆ ನೀಡುವುದಕ್ಕೆ ಸಾಧ್ಯ? ಅವರು ನೀಡಿರುವ ಈ ಜನಾಂಗೀಯ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ, ಕಾನೂನು ತಜ್ಞರೊಂದಿಗೆ ಚರ್ಚಿಸಿ, ಪಿತ್ರೋಡಾ ವಿರುದ್ಧ ಕ್ರಮ ಜರುಗಿಸಲು ನಿರ್ಧರಿಸುತ್ತೇನೆ ಎಂದು ಬಿರೇನ್ ಸಿಂಗ್ ಹೇಳಿದ್ದಾರೆ.
“ಇದು ಅತ್ಯಂತ ಬೇಜವಾಬ್ದಾರಿ ಹೇಳಿಕೆಯಾಗಿದ್ದು ಅವರು ಭಾರತದ ಭೌಗೋಳಿಕ ಸಂಯೋಜನೆಯನ್ನು ತಿಳಿದಿಲ್ಲ. ಕಾಂಗ್ರೆಸ್ ಈ ‘ಒಡೆದು ಆಳುವ’ ನೀತಿಯನ್ನು ಮಾಡುತ್ತಿದೆ. ಈಶಾನ್ಯದ ಜನರನ್ನು ಚೀನಾದವರಂತೆ ಎಂದು ಅವರು ಹೇಗೆ ಹೇಳುತ್ತಾರೆ? ನಾವು ಭಾರತದ ಭಾಗವಾಗಿದ್ದೇವೆ. ನಾವು ಚೀನಾಕ್ಕೆ ಸೇರಿದವರಲ್ಲ, ನಾವು ಕೇವಲ ಭಾರತೀಯರು, ಎಲ್ಲಾ ಈಶಾನ್ಯ ಜನರು ಒಟ್ಟಿಗೆ ವಾಸಿಸುತ್ತಿದ್ದಾರೆ” ಎಂದು ಮಣಿಪುರ ಮುಖ್ಯಮಂತ್ರಿ ಹೇಳಿದ್ದಾರೆ.