ಕೋಲಾರ, (ಮಾರ್ಚ್ 25): ತಾಲ್ಲೂಕು ಮದ್ದೇರಿ ಗ್ರಾಮದಲ್ಲಿ ಕೆನರಾ ಬ್ಯಾಂಕ್ ಶಾಖೆ ತೆರೆದು 30 ವರ್ಷಗಳೇ ಕಳೆದಿವೆ. ಮೂವತ್ತು ವರ್ಷಗಳಿಂದ ಇಲ್ಲಿನ ಗ್ರಾಹಕರ ವಿಶ್ವಾಸ ಗಳಿಸಿರುವ ಕೆನರಾ ಬ್ಯಾಂಕ್ ತನ್ನ ಗ್ರಾಹಕರೊಂದಿಗೆ ಉತ್ತಮ ಬಾಂಧ್ಯವ್ಯ ಹಾಗೂ ವಿಶ್ವಾಸ ಗಳಿಸಿತ್ತು. ಹೀಗಿರುವಾಗಲೇ ಈ ಬ್ಯಾಂಕ್ನಲ್ಲಿ ಇತ್ತೀಚೆಗೆ ನಡೆಯಬಾರದ್ದು ನಡೆದು ಹೋಗಿದೆ, ಬ್ಯಾಂಕ್ನಲ್ಲಿ ಗ್ರಾಹಕರು ಇಟ್ಟಿದ್ದ ಅಸಲಿ ಚಿನ್ನ ನಾಪತ್ತೆಯಾಗಿ ನಕಲಿ ಚಿನ್ನವಾಗಿದೆ. ಅಡವಿಟ್ಟಿದ್ದ ಚಿನ್ನ ನಕಲಿಯಾಗಿದೆ. ಗ್ರಾಹಕರ ಠೇವಣಿ ಹಣ ಗ್ರಾಹಕರಿಗೆ ತಿಳಿಯದಂತೆ ಖಾತೆಯಲ್ಲಿದ್ದ ಹಣ ಖಾಲಿಯಾಗಿದೆ. ಖಾತೆಗಳಲ್ಲಿನ ಹಣ ಮಾಯವಾಗುತ್ತಿರುವ ಕೆಲವೇ ಕೆಲವು ಪ್ರಕರಣಗಳು ಕಳೆದ ಒಂದು ವಾರದಿಂದ ಬೆಳಕಿಗೆ ಬರುತ್ತಿದ್ದವು. ಆದ್ರೆ ಈಗ ನೂರಾರು ಪ್ರಕರಣಗಳಾಗಿವೆ. ಸದ್ಯದ ಲೆಕ್ಕಾಚಾರದ ಪ್ರಕಾರ ಸುಮಾರು ಎರಡು ಕೋಟಿಯಷ್ಟು ವಂಚನೆ ನಡೆದಿದೆ ಎನ್ನಲಾಗುತ್ತಿದೆ. ಇನ್ನು ಇದಕ್ಕೆ ಯಾರು ಎನ್ನುವುದನ್ನು ನೋಡಿದರೆ ಬ್ಯಾಂಕ್ನಲ್ಲಿರುವ ಸಿಬ್ಬಂದಿಗಳೇ ಎನ್ನಲಾಗಿದ್ದು, ಇದೀಗ ಈ ಪ್ರಕರಣ ಸಿಐಡಿ ತನಿಖೆಗೆ ವರ್ಗಾವಣೆಯಾಗಲಿದೆ.
ಇನ್ನು ವಿವಿಧ ಉದ್ದೇಶಗಳಿಗೆ ಜನರು ಬ್ಯಾಂಕ್ ಖಾತೆಯಲ್ಲಿಟ್ಟಿದ್ದ ಹಣವಮನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಕೆನರಾ ಬ್ಯಾಂಕ್ ಖಾತೆಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣ ನನಗೆ ತಿಳಿಯದೆ ನಾಪತ್ತೆಯಾಗಿದೆ. ನನ್ನ ಮಗಳ ಮದುವೆಗೆಂದು, ಹಬ್ಬಕ್ಕೆಂದು, ಮನೆ ಕಟ್ಟೋದಕ್ಕೆ ಹೀಗೆ ಬೇರೆ ಬೇರೆ ಉದ್ದೇಶಕ್ಕಾಗಿ ಕೂಡಿಟ್ಟಿದ್ದ ಹಣ ಇಲ್ಲದಾಗಿದೆ. ನಾವು ಈಗ ಏನು ಮಾಡಬೇಕೆಂದು ಹಣ ಕಳೆದುಕೊಂಡ ಖಾತೆದಾರರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.