ವಿಜಯನಗರ(ಹೊಸಪೇಟೆ), : ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಶುದ್ದ ಕುಡಿಯುವ ನೀರು ಪೂರೈಕೆಗೆ ಮುನ್ನ ಕಡ್ಡಾಯವಾಗಿ ಪರೀಕ್ಷಿಸಬೇಕು ಎಂದು ಜಿಪಂನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಂಗ್ಜಾಯ್ ಮೊಹಮ್ಮದ್ ಅಕ್ರಂ ಅಲಿ ಷಾ ಹೇಳಿದರು.
ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆರೋಗ್ಯ ಹಿತದೃಷ್ಟಿಯಿಂದ ಕಡ್ಡಾಯವಾಗಿ ಶುದ್ಧ ಕುಡಿಯುವ ನೀರಿನ ಘಟಕ, ಜಲಜೀವನ್ ಮಿಷನ್ ನಿಂದ ಪೂರೈಕೆಯಾಗುವ ನೀರನ್ನು ಕಡ್ಡಾಯವಾಗಿ ಕುಡಿಯುವಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ನಿರಂತವಾಗಿ ಮಳೆ ಆಗುತ್ತಿರುವ ಹಿನ್ನಲೆಯಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಮುನ್ನ ಕಡ್ಡಾಯವಾಗಿ ಪರೀಕ್ಷೆ ಮಾಡಬೇಕು. ಎಲ್ಲಾ ಗ್ರಾಪಂಗಳಲ್ಲಿ ಎಫ್‌ಟಿಕೆ ಕಿಟ್ ಮೂಲಕ ನೀರನ್ನು ಪರೀಕ್ಷಿಸಿ ವರದಿ ನೀಡಬೇಕು. ನೀರಿನಿಂದಾಗಿ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆರೋಗ್ಯ ಹಿತದೃಷ್ಟಿಯಿಂದ ಕುಡಿಯುವ ನೀರಿನ ಶುದ್ಧತೆಯ ಬಗ್ಗೆ ಗಮನವಿರಲಿ. ಜಲ ಜೀವನ್ ಮಿಷನ್ ಯೋಜನೆಯಲ್ಲಿ ಮುಕ್ತಾಯಗೊಂಡ ಕಾಮಗಾರಿಗಳನ್ನು ಹರ್ ಘರ್ ಜಲ್ ಎಂದು ಘೋಷಣೆ ಮಾಡಿ 24*7 ನೀರು ಸರಬರಾಜು ಗ್ರಾಮಗಳನ್ನಾಗಿ ಪರಿವರ್ತಿಸಲು ಕ್ರಮವಹಿಸಬೇಕು.
ಜಿಲ್ಲೆಯ ಕೂಡ್ಲಿಗಿ ತಾಲೂಕಿನ ರಾಮದುರ್ಗ, ಕಕ್ಕುಪ್ಪಿ, ಕೊಟ್ಟೂರು ತಾಲೂಕಿನ ಕಂದಗಲ್ಲು, ರಾಂಪುರ, ಚಿರಬಿ, ಹಗರಿಬೊಮ್ಮನಹಳ್ಳಿ ತಾಲೂಕಿನ ಕಲ್ಲಹಳ್ಳಿ ಗ್ರಾಮಗಳನ್ನು 24*7 ನೀರು ಸರಬರಾಜು ಗ್ರಾಮವೆಂದು ಘೋಷಣೆ ಮಾಡಲು ತ್ವರಿತ ಕ್ರಮವಹಿಸಬೇಕು. ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲೆ ಮತ್ತು ವಸತಿ ಶಾಲೆಗಳಲ್ಲಿ ಕಡ್ಡಾಯವಾಗಿ ನೀರು ಪರೀಕ್ಷೆ ಮಾಡಿ ಸರಬರಾಜು ಮಾಡಬೇಕು. ಜಿಲ್ಲಾಸ್ಪತ್ರೆ, ತಾಲೂಕಾಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯವರಿಗೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಮತ್ತು ನೀರಿನಿಂದ ಉಂಟಾಗುವ ತೊಂದರೆಗಳ ಬಗ್ಗೆ ಗಮನಹರಿಸಬೇಕು ಮತ್ತು ಅಂತಹ ಸಮಸ್ಯೆಗಳು ಕಂಡು ಬಂದಲ್ಲಿ ಮೇಲಾಧಿಕಾರಿಗಳು ಮಾಹಿತಿ ನೀಡುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ರಾಮದುರ್ಗ ಗ್ರಾಪಂ ಅಧ್ಯಕ್ಷ ರಾಜಪ್ಪ, ಬೈಲುವದ್ದಿಗೇರಿ ಅಧ್ಯಕ್ಷ ಜೆ.ಲಕ್ಷಿö್ಮÃದೇವಿ, ಹಂಪಿ ಗ್ರಾಪಂ ಅಧ್ಯಕ್ಷೆ ರಜನಿ ಷಣ್ಮುಖಗೌಡ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಷಣ್ಮುಖ, ಗ್ರಾ.ಕು.ನೀ.ನೈ ಇಲಾಖೆ ಕಾರ್ಯಪಾಲಕ ಅಭಿಯಂತರರಾದ ಎಸ್.ದೀಪಾ, ಜಿಲ್ಲಾ ಬುಡಕಟ್ಟು ಕಲ್ಯಾಣಾಧಿಕಾರಿ ಶಂಕರನಾಯ್ಕ್, ಜಿಲ್ಲಾ ಐಸಿಡಿಎಸ್ ಅಧಿಕಾರಿ ಮುದಕಪ್ಪ, ನಗರಾಭಿವೃದ್ಧಿ ಕೋಶ ಜಿಲ್ಲಾ ನೋಡಲ್ ಅಧಿಕಾರಿ ಮನೋಹರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ರಾಜಶೇಖರ್, ಜಲಜೀವನ್ ಮಿಷನ್ ಯೋಜನೆಯ ಜಿಲ್ಲಾ ಯೋಜನಾ ವ್ಯವಸ್ಥಾಪಕಿ ಸಿ.ಎಂ.ಮಹೇಶ್ವರಿ ಸೇರಿದಂತೆ ಇಂಜಿನಿಯರ್ ಗಳಾದ ರುದ್ರಮುನಿ, ನರೇಶ್, ಶಿವಾರೆಡ್ಡಿ, ಸ್ವಚ್ಛ ಭಾರತ್ ಮಿಷನ್ ರೇಣುಕಾ ಇದ್ದರು.
ಕುಡಿಯುವ ನೀರನ್ನು ಪರೀಕ್ಷಿಸಿ ಸರಬರಾಜು ಮಾಡಿ: ಜಿಪಂ ಸಿಇಒ ನೋಂಗ್ಜಯ್
