ಕರ್ನಾಟಕದಲ್ಲಿ 1ನೇ ತರಗತಿ ಪ್ರವೇಶಕ್ಕೆ ಕಡ್ಡಾಯ ವಯೋಮಿತಿ: ಪೋಷಕರ ಆಕ್ರೋಶ

Ravi Talawar
ಕರ್ನಾಟಕದಲ್ಲಿ 1ನೇ ತರಗತಿ ಪ್ರವೇಶಕ್ಕೆ ಕಡ್ಡಾಯ ವಯೋಮಿತಿ: ಪೋಷಕರ ಆಕ್ರೋಶ
WhatsApp Group Join Now
Telegram Group Join Now

ಬೆಂಗಳೂರು, ಮೇ 23: ಒಂದನೇ ತರಗತಿ ಪ್ರವೇಶಾತಿಗೆ 2025-26ನೇ ಸಾಲಿನಿಂದ ಮಕ್ಕಳ ಕನಿಷ್ಠ ವಯೋಮಿತಿಯನ್ನು  6 ವರ್ಷಕ್ಕೆ ನಿಗದಿ ಮಾಡಿರುವುದು ಮತ್ತು ಎಲ್‌ಕೆಜಿಗೆದಾಖಲಿಸಲು ಮಕ್ಕಳ ವಯಸ್ಸು ಜೂನ್ 1 ರೊಳಗೆ 4 ವರ್ಷ ಆಗಿರಬೇಕು (2023-24ರ ಶೈಕ್ಷಣಿಕ ವರ್ಷದಿಂದ) ಎಂಬ ನಿಯಮಕ್ಕೆ ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಹೊಸ ನಿಯಮ ಅವೈಜ್ಞಾನಿಕ ಮತ್ತು ಅನ್ಯಾಯ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕಟ್ಟುನಿಟ್ಟಿನ ವಯೋಮಿತಿಗಳು ಮಕ್ಕಳನ್ನು ಸಕಾಲಿಕ ಶಿಕ್ಷಣದಿಂದ ವಂಚಿತಗೊಳಿಸುತ್ತಿವೆ. ಅದರಲ್ಲೂ ವಿಶೇಷವಾಗಿ ಕೇವಲ ಒಂದು ದಿನದ ಅಂತರದಲ್ಲಿ ವಯಸ್ಸು ಪೂರ್ಣಗೊಂಡಿರದಿದ್ದರೆ ಅಂಥ ಮಕ್ಕಳಿಗೆ ಅನ್ಯಾಯವಾಗುತ್ತದೆ. ಅಂಥ ಮಕ್ಕಳು ಇಡೀ ವರ್ಷ ಶಾಲಾ ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂದು ಪೋಷಕರು ಹೇಳಿದ್ದು, ನಿಯಮದಲ್ಲಿ ಸಡಿಲಿಕೆಗೆ ಒತ್ತಾಯಿಸಿದ್ದಾರೆ.

ಗೊಂದಲಗಳ ಮಧ್ಯೆಯೂ ಇದೀಗ ಖಾಸಗಿ ಶಾಲೆಗಳು ಹೊಸ ನಿಯಮಗಳಿಗೆ ಬದ್ಧವಾಗಿದ್ದು, ವಯಸ್ಸು ಪೂರ್ಣಗೊಂಡಿರದ ಮಕ್ಕಳ ದಾಖಲಾತಿಗೆ ನಿರಾಕರಿಸುತ್ತಿವೆ. ಇದು ಅನೇಕ ಪೋಷಕರನ್ನು ನಿರಾಶೆಗೊಳಿಸಿದೆ.

ಕೆಲವು ಪ್ರಕರಣಗಳಲ್ಲಿ ಸುಳ್ಳು ಮಾಹಿತಿ ನೀಡಿ ಇನ್ನೂ 4 ವರ್ಷ ತುಂಬದ ಮಕ್ಕಳನ್ನು ಶಾಲೆಗಳಿಗೆ ಸೇರಿಸಲಾಗುತ್ತಿದೆ ಎಂದು ವರದಿಯಾಗಿದೆ. ಈ ದಾಖಲಾತಿಗಳಿಗೆ ಅನುಮತಿ ನೀಡುವ ಅಧಿಕೃತ ಆದೇಶವಿದೆ ಎಂದು ಪೋಷಕರನ್ನು ತಪ್ಪುದಾರಿಗೆ ಎಳೆಯಲಾಗುತ್ತಿದೆ. ಆದರೆ, ಶಿಕ್ಷಣ ಇಲಾಖೆಯು ಅಂತಹ ಯಾವುದೇ ಮೌಖಿಕ ಸೂಚನೆ ಅಥವಾ ಆದೇಶಗಳನ್ನು ನೀಡಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದೆ.

ಇಲಾಖೆಯ ವೆಬ್ ಪೋರ್ಟಲ್​​ನಲ್ಲಿ ಎಲ್ ಕೆಜಿ ಮತ್ತು ಯುಕೆಜಿ ಪ್ರವೇಶದ ಬಗ್ಗೆ ಮಾಹಿತಿ ನಮೂದಿಸುವಂತಿಲ್ಲ, ಆದರೆ ಒಂದನೇ ತರಗತಿಗೆ ದಾಖಲಾದ ಮಕ್ಕಳ ವಿವರಗಳನ್ನು ಕಡ್ಡಾಯವಾಗಿ ದಾಖಲಿಸಬೇಕು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದು ಗೊಂದಲಕ್ಕೆ ಕಾರಣವಾಗಿದೆ.

ಈ ಮಧ್ಯೆ, ವಯೋಮಿತಿ ಸಡಿಲಿಕೆ ಸರ್ಕಾರದ ಪರಿಗಣನೆಯಲ್ಲಿಲ್ಲ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ತಪ್ಪಾದ ಮಾಹಿತಿಯಿಂದ ದಾರಿತಪ್ಪಿಸಬೇಡಿ ಮತ್ತು ಶಾಲಾ ಪ್ರವೇಶಕ್ಕಾಗಿ ಪ್ರಸ್ತುತ ವಯಸ್ಸಿನ ನಿಯಮಗಳಿಗೆ ಬದ್ಧವಾಗಿರುವಂತೆ ಅವರು ಪೋಷಕರಿಗೆ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article