ಪುರುಲಿಯಾ, 07: ಚುನಾವಣಾ ಪ್ರಚಾರದ ವೇಳೆ ಬಿಜೆಪಿ ನಾಯಕರು ದ್ವೇಷಪೂರಿತ ಭಾಷಣಗಳನ್ನು ಮಾಡುತ್ತಿದ್ದಾರೆ. ಆದರೂ ಚುನಾವಣಾ ಆಯೋಗ ಕಣ್ಣುಮುಚ್ಚಿ ಕುಳಿತಿದ್ದು, ಮಾದರಿ ನೀತಿ ಸಂಹಿತೆಯನ್ನು ‘ಮೋದಿ ನೀತಿ ಸಂಹಿತೆ’ಯಾಗಿ ಪರಿವರ್ತಿಸಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಂಗಳವಾರ ಆರೋಪಿಸಿದ್ದಾರೆ.
ಇಂದು ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಟಿಎಂಸಿ ವರಿಷ್ಠೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಬಿಜೆಪಿ ನಾಯಕರು ತಮ್ಮನ್ನು ಮಾತ್ರ ಹಿಂದೂಗಳು ಎಂದು ಪರಿಗಣಿಸುತ್ತಾರೆ ಮತ್ತು ಅವರು ಇತರ ಸಮುದಾಯಗಳ ಬಗ್ಗೆ ಯೋಚಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮೋದಿ ಮತ್ತು ಇತರ ಬಿಜೆಪಿ ನಾಯಕರು ತಮ್ಮ “ದ್ವೇಷ ತುಂಬಿದ ಭಾಷಣಗಳ” ಮೂಲಕ ಕೆಳ ಜಾತಿಯ ಹಿಂದೂಗಳು, ಅಲ್ಪಸಂಖ್ಯಾತರು ಮತ್ತು ಇತರ ವರ್ಗದ ಜನರನ್ನು ಬೆದರಿಸುತ್ತಿದ್ದಾರೆ. ಆದರೆ ಚುನಾವಣಾ ಆಯೋಗ ಮೌನವಾಗಿದೆ ಎಂದು ಮಮತಾ ಆರೋಪಿಸಿದ್ದಾರೆ.
ಬಿಜೆಪಿ ಆಡಳಿತದಲ್ಲಿ ಮಾದರಿ ನೀತಿ ಸಂಹಿತೆ ‘ಮೋದಿ ನೀತಿ ಸಂಹಿತೆ’ಯಾಗಿ ಮಾರ್ಪಟ್ಟಿದೆ: ಮಮತಾ
ಚುನಾವಣಾ ಪ್ರಚಾರದ ವೇಳೆ ಬಿಜೆಪಿ ನಾಯಕರು ದ್ವೇಷಪೂರಿತ ಭಾಷಣಗಳನ್ನು ಮಾಡುತ್ತಿದ್ದಾರೆ. ಆದರೂ ಚುನಾವಣಾ ಆಯೋಗ ಕಣ್ಣುಮುಚ್ಚಿ ಕುಳಿತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
“ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆ ಅಣಕವಾಗಿದೆ ಮತ್ತು ಅದನ್ನು ಮೋದಿ ನೀತಿ ಸಂಹಿತೆ ಎಂದು ಮರುನಾಮಕರಣ ಮಾಡಬೇಕು. ಆದರೆ ಈ ದೇಶದ ನಾಗರಿಕರ ಹಕ್ಕುಗಳ ಉಲ್ಲಂಘನೆಯ ವಿರುದ್ಧ ನಾವು ಹೋರಾಟ ಮುಂದುವರಿಸುತ್ತೇವೆ” ಎಂದು ಬ್ಯಾನರ್ಜಿ ಹೇಳಿದ್ದಾರೆ.
ಮೋದಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಬ್ಯಾನರ್ಜಿ, ಇಷ್ಟೊಂದು ಸುಳ್ಳು ಹೇಳುವ ಮತ್ತೊಬ್ಬ ಪ್ರಧಾನಿಯನ್ನು ನಾನು ನೋಡಿಲ್ಲ ಎಂದಿದ್ದಾರೆ.
“ಪ್ರತಿಯೊಬ್ಬ ನಾಗರಿಕನ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿ ನೀಡುವುದಾಗಿ 2014 ರಲ್ಲಿ ನೀಡಿದ ಭರವಸೆ ಏನಾಯಿತು? ಉಚಿತ ಎಲ್‌ಪಿಜಿ ಗ್ಯಾಸ್ ನೀಡುವುದಾಗಿ ನೀಡಿದ ಭರವಸೆ ಏನಾಯಿತು? ಅವರ ‘ಬೇಟಿ ಬಂಚಾವೋ ಬೇಟಿ ಪಡಾವೋ’ ಯೋಜನೆ ಏನಾಯಿತು?” ಎಂದು ಪಶ್ಚಿಮ ಬಂಗಾಳ ಸಿಎಂ ಪ್ರಶ್ನಿಸಿದರು.