ನವದೆಹಲಿ: “ಜನರ ಹಿತಕ್ಕಾಗಿ ನಾನು ಸಿಎಂ ಸ್ಥಾನದಿಂದ ಕೆಳಗಿಳಿಯಲು ಸಿದ್ಧ. ಆದರೆ ಸಂತ್ರಸ್ತೆಗೆ ನ್ಯಾಯ ಸಿಗಬೇಕು” ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಆರ್.ಜೆ.ಕರ್ ಬಿಕ್ಕಟ್ಟು ಇಂದು ಅಂತ್ಯವಾಗಲಿದೆ ಎಂದು ನಿರೀಕ್ಷಿಸಿದ್ದ ಬಂಗಾಳದ ಜನರಲ್ಲಿ ಕ್ಷಮೆ ಕೋರುತ್ತೇನೆ. ಕಿರಿಯ ವೈದ್ಯರು ಸಭೆಗೆ ಬರಲಿಲ್ಲ. ಅವರೆಲ್ಲರೂ ಮತ್ತೆ ಸೇವೆಗೆ ಮರಳುವಂತೆ ಮನವಿ ಮಾಡುತ್ತೇನೆ” ಎಂದರು.
“ಕಳೆದ ಮೂರು ದಿನಗಳಿಂದ ನನ್ನ ಸದುದ್ದೇಶ ಮತ್ತು ಪ್ರಯತ್ನಗಳ ಮಧ್ಯೆಯೂ ಕಿರಿಯ ವೈದ್ಯರು ಮಾತುಕತೆ ನಡೆಸಲು ನಿರಾಕರಿಸಿದ್ದಾರೆ. ನಾನು ರಾಜ್ಯದ ಜನರ ಹಿತದೃಷ್ಟಿಯಿಂದ ರಾಜೀನಾಮೆ ನೀಡಲು ಸಿದ್ಧನಿದ್ದೇನೆ. ಕಿರಿಯ ವೈದ್ಯರು ಸೇವೆ ನಿಲ್ಲಿಸಿದ್ದರಿಂದ 27 ರೋಗಿಗಳು ಸಾವನ್ನಪ್ಪಿದ್ದಾರೆ ಮತ್ತು ಸುಮಾರು ಏಳು ಲಕ್ಷ ಜನರ ಮೇಲೆ ಪರಿಣಾಮ ಬೀರುತ್ತಿದೆ. ಸಂತ್ರಸ್ತರಿಗೆ ನ್ಯಾಯ ಸಿಗಬೇಕು. ಆದರೆ ಸುಪ್ರೀಂ ಕೋರ್ಟ್ ತೀರ್ಪಿನಂತೆ ವೈದ್ಯರು ಮತ್ತೆ ಕೆಲಸಕ್ಕೆ ಸೇರಿಕೊಳ್ಳಬೇಕು” ಎಂದು ಮನವಿ ಮಾಡಿದರು.
“ನಾವು ಧರಣಿ ನಿರತ ವೈದ್ಯರ ವಿರುದ್ಧವಾಗಿ ಹೋಗುತ್ತಿಲ್ಲ. ಕಿರಿಯ ವೈದ್ಯರಿಗಿಂತ ದೊಡ್ಡವಳೆಂಬ ಕಾರಣಕ್ಕೆ ಅವರನ್ನು ಕ್ಷಮಿಸಿದ್ದೇನೆ. ಸಭೆಗೆ ಬಾರದೇ ಕಾಯಿಸಿದ ವೈದ್ಯರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಏಕೆಂದರೆ ಹಿರಿಯರಾಗಿ, ಕಿರಿಯರನ್ನು ಕ್ಷಮಿಸುವುದು ನಮ್ಮ ಜವಾಬ್ದಾರಿ” ಎಂದರು.