2021ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ನಟಿ ಇದೀಗ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸೇರ್ಪಡೆಯಾಗಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಾರ್ಯಶೈಲಿಯಿಂದ ಪ್ರೇರಿತರಾಗಿ, ಜನರ ಸೇವೆ ಮಾಡಲು ಬಿಜೆಪಿಯಲ್ಲಿ ಸೂಕ್ತ ಅವಕಾಶ ಸಿಗದ ಕಾರಣ ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ಚುನಾವಣೆಗೂ ಮುನ್ನ ಮಮತಾ ಬ್ಯಾನರ್ಜೀ ಬಿಜೆಪಿಗೆ ಶಾಕ್ ನೀಡದ್ದಾರೆ.
ನಟಿ ಪರ್ನೋ ಮಿತ್ರಾ ಶುಕ್ರವಾರದಂದು ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಮತ್ತು ಪಕ್ಷದ ವಕ್ತಾರ ಜಯ ಪ್ರಕಾಶ್ ಮಜುಂದಾರ್ ಅವರ ಸಮ್ಮುಖದಲ್ಲಿ ಟಿಎಂಸಿ ಪಕ್ಷಕ್ಕೆ ಸೇರ್ಪಡೆಯಾದರು.
ಸಿಎಂ ಮಮತಾ ಬ್ಯಾನರ್ಜಿ ಅವರ ಕಾರ್ಯವೈಖರಿ ನನಗೆ ಬಹಳ ಇಷ್ಟವಾಗಿದೆ. ನಾನು ಜನರ ಹಿತದೃಷ್ಟಿಯಿಂದ ಟಿಎಂಸಿ ಸೇರುತ್ತಿದ್ದೇನೆ. ಮಮತಾ ಬ್ಯಾನರ್ಜಿ ಕಾರ್ಯವೈಖರಿ ರಾಜ್ಯದ ಮಹಿಳೆಯರಿಗೆ ಸ್ಪೂರ್ತಿಯಾಗಿದೆ. ಸಾರ್ವಜನಿಕರ ಹಿತಕ್ಕಾಗಿ ಕೆಲಸ ಮಾಡಲು ರಾಜಕೀಯ ಪ್ರವೇಶಿಸಿದ್ದೆ, ಆದ್ರೆ ಬಿಜೆಪಿಯಲ್ಲಿದ್ದುಕೊಂಡು ಜನಸೇವೆ ಮಾಡಲು ಹಾಗೂ ನಿರೀಕ್ಷಿಸಿದಷ್ಟು ಕೆಲಸ ಮಾಡಲು ಅವಕಾಶ ಸಿಗಲಿಲ್ಲ. ಈ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ ಎಂದು ಪರ್ನೋ ಮಿತ್ರಾ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವೆ ಚಂದ್ರಿಮಾ ಭಟ್ಟಾಚಾರ್ಯ, ಬಿಜೆಪಿಯಲ್ಲಿ ಯಾರಿಂದಲೂ ಒಳ್ಳೆಯ ಜನಸೇವೆಯ ಕೆಲಸ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಟಿ ಪರ್ನೋ ಮಿತ್ರಾ ಬಿಜೆಪಿ ತೊರೆದು ಟಿಎಂಸಿಗೆ ಸೇರಿದ್ದಾರೆ ಎಂದು ಹೇಳಿದರು.
ಬಂಗಾಳದಲ್ಲಿ ತಮ್ಮದೇ ಆದ ಜನಪ್ರಿಯತೆಯನ್ನು ಹೊಂದಿರುವ ನಟಿ ಪರ್ನೋ ಮಿತ್ರಾ, 2019ರಲ್ಲಿ ಬಿಜೆಪಿ ಸೇರ್ಪಡೆಯಾಗಿ. 2021ರ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆದು ಬಾರಾನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ತಪಸ್ ರಾಯ್ ವಿರುದ್ಧ ಪರ್ನೊ ಮಿತ್ರಾ ಸೋತಿದ್ದರು.


