ಕೃಷ್ಣರಾಜಪೇಟೆ : ಕ್ರಿಯಾಶೀಲ ಕಾರ್ಯ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ನಿತ್ಯ ತೊಡಗಿಸಿಕೊಳ್ಳುವ ಮೂಲಕ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಗಳೆರಡನ್ನೂ ಕಾಪಾಡಿಕೊಳ್ಳಬಹುದೆಂದು ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.
ಅವರು ತಾಲೂಕಿನ ತೇಗನಹಳ್ಳಿ ಸರ್ಕಾರಿ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆಯ ವತಿಯಿಂದ ಪಟ್ಟಣದ ಮಾದೇಗೌಡ ಸ್ಮಾರಕ ಆಸ್ಪತ್ರೆ, ನ್ಯೂ ಅಪೂರ್ವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಬೆಂಗಳೂರಿನ ಬೆಳಕು ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಗ್ರಾಮೀಣ ಜನರಿಗಾಗಿ ಆಯೋಜಿಸಿದ್ದ ಉಚಿತ ಆರೋಗ್ಯಮತ್ತು ಕಣ್ಣಿನ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಆರೋಗ್ಯ ಚನ್ನಾಗಿದ್ದರೆ ನಾವು ಎಷ್ಟು ಬೇಕಾದರೂ ಹಣ ಸಂಪಾಧಿಸಬಹುದು, ಹಣದಿಂದ ಆರೋಗ್ಯ ಸಂಪಾದನೆ ಸಾಧ್ಯವಿಲ್ಲ. ಜನ ಹಣ ಸಂಪಾದನೆಗಿಂತ ಮುಖ್ಯವಾಗಿ ಆರೋಗ್ಯ ಸಂಪಾದನೆಗೆ ಆದ್ಯತೆ ನೀಡಬೇಕು. ಆಧುನಿಕ ಜೀವನ ಶೈಲಿಯಿಂದ ನಮ್ಮ ಆರೋಗ್ಯದ ಮೇಲೆ ಗಂಭೀರವಾದ ದುಷ್ಪರಿಣಾಮ ಉಂಟಾಗುತ್ತಿದೆ. ನಾವು ನಮ್ಮ ಹಿರಿಯರ ನೈಸರ್ಗಿಕ ಆಹಾರ ಪದ್ಧತಿಗೆ ಹಿಂತಿರುಗಬೇಕು. ನಮ್ಮ ಆಹಾರವೇ ನಮ್ಮ ಔಷಧಿ ಎನ್ನುವುದನ್ನು ಮರೆಯಬಾರದು. ರಾಸಾಯನಿಕಗೊಬ್ಬರ ಬಳಕೆ, ಅತಿಯಾದ ಕೀಟ ನಾಶಕ ಮತ್ತು ಕಳೆ ನಾಶಕಗಳ ಬಳಕೆಯಿಂದ ಇಂದು ನಮ್ಮ ಆಹಾರವೂ ವಿಷಯುಕ್ತವಾಗುತ್ತಿದ್ದು ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯದ ಮೇಲೆ ಇದರ ಪರಿಣಾಮವಾಗುತ್ತಿದೆ. ರೈತ ಸಮುದಾಯ ಸಾವಯವ ಕೃಷಿ ಪದ್ದತಿಗೆ ಆದ್ಯತೆ ನೀಡಿ ಗುಣ ಮಟ್ಟದ ಆಹಾರ ಪದಾರ್ಥಗಳನ್ನು ಬೆಳೆದು ದೇಶದ ಜನರಿಗೆ ನೀಡಬೇಕೆಂದು ಕರೆ ನೀಡಿದ ಮಲ್ಲಿಕಾರ್ಜುನ್ ಆರೋಗ್ಯವಂತ ಸಮಾಜ ನಿರ್ಮಾಣವೇ ದೇಶದ ನಿಜವಾದ ಸಂಪತ್ತು ಎಲ್ಲರೂ ಆರೋಗ್ಯವಂತ ಬದುಕು ಕಟ್ಟಿಕೊಳ್ಳುವಂತೆ ಮನವಿ ಮಾಡಿದರು,
ಇದೇ ಸಂದರ್ಭದಲ್ಲಿ ಹಿರೀಕಳಲೆ ಗ್ರಾಮ ಪಂಚಾಯತಿ ಸದಸ್ಯ ಟಿ.ಎನ್. ಮಹೇಶ್ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಡಾ.ಎ.ಯೋಗೇಶ್, ಯೋಜನಾಧಿಕಾರಿ ಕೆ.ಪ್ರಸಾದ್, ಸಂಸ್ಥೆಯ ಮೇಲ್ವಿಚಾರಕಿ ಗುಣಶ್ರೀ, ವೈದ್ಯರುಗಳಾದ ಡಾ.ಎಂ.ಬಿ.ಲೋಹಿತ್, ಡಾ.ಶಿಲ್ಪ, ಡಾ.ತನುಶ್ರೀ, ಡಾ.ಅನನ್ಯ, ಡಾ. ಅವಿನಾಶ್, ಡಾ.ಶಶಿಕಾಂತ್, ಪತ್ರಕರ್ತರಾದ ಗಂಜಿಗೆರೆ ಮಹೇಶ್, ಶಂಭು ಕಿಕ್ಕೇರಿ, ಲೋಕೇಶ್. ವಿ, ಸಾಯಿಕುಮಾರ್, ಗ್ರಾ.ಪಂ ಸದಸ್ಯೆ ರಾಜಮ್ಮರಾಮಕೃಷ್ಣ, ಆಶಾ, ಸೇವಪ್ರತಿನಿಧಿಗಳು. ಗ್ರಾಮಸ್ಥರು ಸೇರಿದಂತೆ ಇನ್ನೂ ಅನೇಕ ಇದ್ದರು.


