ನೇಸರಗಿ: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರು ಹಾಗೂ ಕೃಷಿ ಚಿಂತಕರಾದ ಮಾನ್ಯ ಡಾ. ಪ್ರಭಾಕರ ಬ. ಕೋರೆಯವರ ೭೮ ನೇ ಹುಟ್ಟುಹಬ್ಬದ ಅಂಗವಾಗಿ ದಿನಾಂಕ ೨೨.೦೭.೨೦೨೫ ರಂದು ಮತ್ತಿಕೊಪ್ಪದಲ್ಲಿರುವ ಕೆಎಲ್‌ಇ ಸಂಸ್ಥೆಯ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದಲ್ಲಿ ೨೪ ನೇ ಕಾರ್ಯಕ್ರಮವಾಗಿ ಕಬ್ಬು ಬೆಳೆ ಸುಧಾರಿತ ಬೇಸಾಯ ಕ್ರಮಗಳ ಕುರಿತು ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕೇಂದ್ರದ ಮುಖ್ಯಸ್ಥರಾದ ಡಾ. ಮಂಜುನಾಥ ಚೌರಡ್ಡಿಯವರು ಕಾರ್ಯಕ್ರಮದ ಉದ್ಘಾಟನೆಗೊಳಿಸಿದರು.
ನಂತರ ಮಾತನಾಡಿದ ಅವರು, ಕಬ್ಬು ಬೆಳೆಯಲ್ಲಿ ಗೊಣ್ಣೆ ಹುಳುವಿನ ಬಾಧೆಯು ತೀವ್ರವಾಗಿದ್ದು, ಕೀಡೆಯು ಬೇರನ್ನು ತಿನ್ನುವುದರ ಮೂಲಕ ಬೆಳೆ ಹಾನಿ ಮಾಡುತ್ತವೆ. ಈ ಹುಳುವಿನ ಜೀವನ ಚಕ್ರವನ್ನು ಪರಿಚಯಿಸಿ ಮುಂಗಾರು ಹಂಗಾಮಿನಲ್ಲಿ ಮೊದಲ ಬಾರಿ ಮಳೆಯಾದಾಗ ದುಂಬಿಗಳು ಮಣ್ಣಿನಿಂದ ಹೊರಗಡೆ ಬಂದು ಗಿಡದ ಮೇಲೆ ಕೂರುತ್ತವೆ. ಈ ಹಂತದಲ್ಲಿ ಬದುಗಳ ಮೇಲೆ ಬೆಂಕಿ ಹಚ್ಚಿದಾಗ ಕೀಡೆಗಳು ಬೆಂಕಿಯಲ್ಲಿ ಬಿದ್ದು ನಾಶ ಹೊಂದುತ್ತವೆ. ಗೊಣ್ಣೆ ಹುಳು ಬಾಧಿತ ಜಮೀನುಗಳಲ್ಲಿ ಕಬ್ಬು ನಾಟಿ ಮಾಡುವುದಕ್ಕಿಂತ ಪೂರ್ವದಲ್ಲಿ ಜೈವಿಕ ಕೀಟನಾಶಕವಾದ ಮೆಟರೈಜಿಯಂ ಅನಿಸೊಪ್ಲಿಯೆಯನ್ನು ಎಕರೆಗೆ ೫ ಕೆಜಿಯಂತೆ ಬಳಸಿ ಕೀಡೆಯನ್ನು ಬೆಳೆಯದಂತೆ ನಾಶಮಾಡಬಹುದಾಗಿದೆ ಎಂದರು. ಅದೇರೀತಿ, ಕಬ್ಬು ಬೆಳೆಯಲ್ಲಿ ಬರುವ ಬಿಳಚಿ ಪರಾವಲಂಬಿ ಕಳೆಯನ್ನು ನಿಯಂತ್ರಿಸಲು ಹೆಚ್ಚು ನೀರನ್ನು ಜಮೀನಿನಲ್ಲಿ ನಿಲ್ಲಿಸಬೇಕು ಹಾಗೂ ಏಕದಳ ಬೆಳೆಯನ್ನು ಬೆಳೆಯದೇ ಕಬ್ಬಿನ ಬೆಳೆಯಲ್ಲಿ ಅಂತರ ಬೆಳೆಯಾಗಿ ದ್ವಿದಳ ಧಾನ್ಯದ ಬೆಳೆ ಅದರಲ್ಲೂ ಪ್ರಮುಖವಾಗಿ ಅಲಸಂದಿ ಬೆಳೆಯಿಂದ ಕಾಲಗೈ ಮಾಡುವುದರಿಂದ ಈ ಕಳೆಯನ್ನು ಸಮರ್ಪಕವಾಗಿ ನಿಯಂತ್ರಿಸಬಹುದಾಗಿದೆ ಎಂದು ಸಲಹೆ ನೀಡಿದರು.
ಡಾ. ಎಸ್. ಎಸ್. ಹಿರೇಮಠ, ವಿಜ್ಞಾನಿ ಸಸ್ಯ ಸಂರಕ್ಷಣೆ ಮಾತನಾಡಿ, ಸಮಗ್ರ ರೋಗ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಎಸ್. ಎಮ್. ವಾರದ ಸಮಗ್ರ ಪೋ?ಕಾಂಶಗಳ ನಿರ್ವಹಣೆ, ಜಿ. ಬಿ. ವಿಶ್ವನಾಥ ಬೇಸಾಯ ಕ್ರಮಗಳ ಕುರಿತು ಹಾಗೂ ಪ್ರವೀಣ ಯಡಹಳ್ಳಿ ಬಾಳೆ ಬೆಳೆ ಕುರಿತು ರೈತರೊಂದಿಗೆ ಚರ್ಚಿಸಿದರು. ರಾಮದುರ್ಗ ತಾಲೂಕಿನ ಆತ್ಮ ಯೋಜನೆಯ ತಾಂತ್ರಿಕ ವ್ಯವಸ್ಥಾಪಕ ಗೋವಿಂದರೆಡ್ಡಿ ಜಾಯಿಯವರು ಆತ್ಮ ಯೋಜನೆಯ ಕಾರ್ಯಕ್ರಮಗಳ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಮದುರ್ಗ ತಾಲೂಕಿನ ೬೦ ಜನ ರೈತರು ಭಾಗವಹಿಸಿ ಮಾಹಿತಿ ಪಡೆದರು. ಮಂಜುನಾಥ ಚೌರಡ್ಡಿ
ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು