ಮುಂಬೈ, ಸೆಪ್ಟೆಂಬರ್ 23: ಮಹಾರಾಷ್ಟ್ರ ರಾಜ್ಯ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸುತ್ತಿದೆ. 288 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್‌ನಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಇದ್ದು, ರಾಜಕೀಯ ಪಕ್ಷಗಳ ತಯಾರಿ ಜೋರಾಗಿದೆ. ಈ ಚುನಾವಣೆ ದೇಶಾದ್ಯಂತ ಕುತೂಹಲಕ್ಕೆ ಕಾರಣವಾಗಿದೆ. ಚುನಾವಣೆಯಲ್ಲಿ ವಿರೋಧ ಪಕ್ಷಗಳ ‘ಮಹಾವಿಕಾಸ್ ಅಘಾಡಿ’ ಮೈತ್ರಿಕೂಟದ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಮಾಜಿ ರಾಜ್ಯಪಾಲರು ಘೋಷಣೆ ಮಾಡಿದ್ದಾರೆ. ಇದರಿಂದಾಗಿ ಬಿಜೆಪಿಗೆ ಹಿನ್ನಡೆಯಾಗಿದೆ.
ಭಾನುವಾರ ಮಾತನಾಡಿದ ಸತ್ಯಪಾಲ್ ಮಲಿಕ್, “ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ಪರವಾಗಿ ಪ್ರಚಾರವನ್ನು ನಡೆಸುತ್ತೇನೆ. ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣವಾಗಿ ಅಳಿಸಿ ಹೋಗಲಿದೆ” ಎಂದು ತಿಳಿಸಿದ್ದಾರೆ.
“ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಲಿದೆ. ಪಕ್ಷ ಸಂಪೂರ್ಣವಾಗಿ ಅಳಿಸಿ ಹೋಗಲಿದೆ. ಶಿವಸೇನೆ (ಉದ್ಧವ್ ಠಾಕ್ರೆ ಬಣ) ಚುನಾವಣೆಯಲ್ಲಿ ಮುಖ್ಯ ಪಾತ್ರವನ್ನು ವಹಿಸಲಿದ್ದಾರೆ, ಯಾರೂ ಚಿಂತಿಸುವ ಅಗತ್ಯವಿಲ್ಲ” ಎಂದು ಸತ್ಯಪಾಲ್ ಮಲಿಕ್ ಹೇಳಿದರು.
ಶನಿವಾರ ಸತ್ಯಪಾಲ ಮಲಿಕ್, ‘ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ದೇಶದ ರಾಜಕೀಯದ ಮೇಲೆ ವ್ಯಾಪಕ ಪರಿಣಾಮವನ್ನು ಬೀರಲಿದೆ. ನಾನು ಚುನಾವಣೆಯಲ್ಲಿ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟಕ್ಕೆ ಸಂಪೂರ್ಣ ಬೆಂಬಲ ನೀಡಲಿದ್ದೇನೆ, ಅವರ ಪರವಾಗಿ ಪ್ರಚಾರವನ್ನು ಸಹ ನಡೆಸಲಿದ್ದೇನೆ” ಎಂದು ತಿಳಿಸಿದರು.