ಲಂಡನ್, ಸೆಪ್ಟೆಂಬರ್ 30: ಗಾಂಧಿ ಜಯಂತಿಗೆ ಕೇವಲ ಎರಡು ದಿನಗಳ ಮೊದಲು ಲಂಡನ್ ವಿಶ್ವವಿದ್ಯಾಲಯದ ಬಳಿ ಇರುವ ಮಹಾತ್ಮ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಿರುವ ಘಟನೆ ನಡೆದಿದೆ. ಲಂಡನ್ನ ಟ್ಯಾವಿಸ್ಟಾಕ್ ಸ್ಕ್ವೇರ್ನಲ್ಲಿರುವ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ವಿರೂಪಗೊಳಿಸಲಾಗಿದೆ. ಭಾರತದ ಹೈಕಮಿಷನ್ ಈ ಘಟನೆಯನ್ನು ಬಲವಾಗಿ ಖಂಡಿಸಿದ್ದು, ಇದನ್ನು ನಾಚಿಕೆಗೇಡಿನ ಕೃತ್ಯ ಮತ್ತು ಅಹಿಂಸೆಯ ಪರಂಪರೆಯ ಮೇಲಿನ ದಾಳಿ ಎಂದು ಕರೆದಿದೆ.
ಲಂಡನ್ ವಿಶ್ವವಿದ್ಯಾಲಯದ ಬಳಿ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ

ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಧ್ಯಾನಸ್ಥ ಭಂಗಿಯಲ್ಲಿ ಕುಳಿತಿರುವುದನ್ನು ಚಿತ್ರಿಸುವ ಈ ಪ್ರತಿಮೆಯ ಪೀಠದ ಮೇಲೆ ಭಾರತ ವಿರೋಧಿ ಬರಹಗಳು ಕಂಡುಬಂದಿವೆ. ಪ್ರತಿಮೆಯ ಮೇಲೆ ಬಿಳಿ ಬಣ್ಣವನ್ನು ಬಳಿಯಲಾಗಿತ್ತು. ವಿಶ್ವಸಂಸ್ಥೆಯು ಅಕ್ಟೋಬರ್ 2ರಂದು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಘೋಷಿಸಿದೆ. ಅಂದು ಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸುವುದರ ಜತೆಗೆ ಭಜನೆಗಳನ್ನು ಹಾಡಲಾಗುತ್ತದೆ.

