ಇಂಡಿ: ಸೇವಾಲಾಲರು 18ನೇ ಶತಮಾನದಲ್ಲಿ ಬಂಜಾರ ಸಮಾಜವನ್ನು ಸಾಮಾಜಿಕ, ಆರ್ಥಿಕ, ಧಾರ್ಮಿಕ,
ಸಾಂಸ್ಕೃತಿಕವಾಗಿ ಸಂಘಟಿಸಿ, ಜನರಿಗೆ ನ್ಯಾಯ-ನೀತಿ, ಧರ್ಮ-ಅಧರ್ಮ, ಸತ್ಯ-ಅಸತ್ಯ, ಕಾಯಕ-ಭಕ್ತಿಯ ಬಗೆಗೆ ತಿಳಿವಳಿಕೆಯನ್ನು ಮೂಡಿಸಿದ್ದಾರೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಶನಿವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಮಹಾಸಂತ ಸೇವಾಲಾಲರ ಜಯಂತಿ ಆಚರಣೆಯನ್ನು ಉದ್ಧೇಶಿಸಿ ಮಾತನಾಡಿದರು.

ಸೇವಾಲಾಲರು ಸತ್ಯ, ತ್ಯಾಗ, ಅಹಿಂಸೆ, ದಯೆ, ಅನುಕಂಪ, ಸಮಾನತೆ, ಮಹಿಳಾ ಸಮಾನತೆ,ಪರೋಪಕಾರ,ಅಧ್ಯಾತ್ಮದ ಪ್ರತಿರೂಪವಾಗಿದ್ದರು. ಜೀವಿಗಳೆಲ್ಲರೂ ಸಮಾನ ಎಂಬ ನಿಲುವು ಹೊಂದಿದ್ದ ಅವರು ದುಡಿಮೆಯ ಬಗೆಗೆ ಅತೀವ ನಿಷ್ಠೆಯುಳ್ಳವರಾಗಿದ್ದರು ಎಂದು ಹೇಳಿದರು.
ಮುಖ್ಯ ಶಿಕ್ಷಕ ಎಸ್ ಎಸ್ ಅರಬ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೇವಾಲಾಲರು ತಮ್ಮ ಜ್ಞಾನ-ತತ್ವಗಳ ಮೂಲಕ ಲೋಕಕ್ಕೆ ಮುಕ್ತಿ ಮಾರ್ಗ ತೋರಿಸಿದರು. ಸಮ ಸಮಾಜದ ನಿರ್ಮಾಣ ಹಾಗೂ ಸರ್ವರಲ್ಲೂ ಸಹೋದರತೆಯ ಭಾವನೆ ಮೂಡಲು ಅವರು ಪ್ರೇರೇಪಿಸಿದ್ದಾರೆ ಎಂದು ಹೇಳಿದರು.
ಶಿಕ್ಷಕರಾದ ಎನ್ ಬಿ ಚೌಧರಿ, ಎಸ್ ಪಿ ಪೂಜಾರಿ, ಎಸ್ ಎಚ್ ಮೈದರಗಿ, ಅತಿಥಿ ಶಿಕ್ಷಕಿ ಅಲ್ಫಿಯಾ ಅಂಗಡಿ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.