ಮುಂಬೈ: ಮಹಾರಾಷ್ಟ್ರ ವಿಧಾನಸಭೆಯ 288 ಸ್ಥಾನಗಳ ಪೈಕಿ 260 ಸ್ಥಾನಗಳಿಗೆ ಮಹಾ ವಿಕಾಸ್ ಅಘಾಡಿ ಗುರುವಾರ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಿದ್ದು, ಉಳಿದ ಕ್ಷೇತ್ರಗಳಲ್ಲಿ ಮಿತ್ರ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಉತ್ತಮ ಹೋರಾಟದ ನಂತರ ಇದೀಗ ಎಂವಿಎ ಮಿತ್ರಪಕ್ಷಗಳು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಸಜ್ಜಾಗಿದ್ದು, ಕಾಂಗ್ರೆಸ್ 110 ರಿಂದ 115 ಸ್ಥಾನಗಳಲ್ಲಿ, ಶಿವಸೇನೆ(ಯುಬಿಟಿ) 83 ರಿಂದ 86 ಮತ್ತು ಎನ್ಸಿಪಿ(ಎಸ್ಪಿ) 72 ರಿಂದ 75 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಮೈತ್ರಿಕೂಟದ ನಾಯಕರು ತಿಳಿಸಿದ್ದಾರೆ. ವಿವಾದಿತ 20 ರಿಂದ 25 ಸ್ಥಾನಗಳಲ್ಲೂ ಶೀಘ್ರದಲ್ಲೇ ಒಮ್ಮತಕ್ಕೆ ಬರಲಾಗುವುದು ಎಂದು ಅವರು ಹೇಳಿದ್ದಾರೆ.
“ಎಲ್ಲಾ ಮೈತ್ರಿ ಪಾಲುದಾರರು ಈ ನಿರ್ದಿಷ್ಟ ಸ್ಥಾನಗಳಿಗೆ ಬೇಡಿಕೆ ಇಡುತ್ತಿದ್ದಾರೆ. ಆದ್ದರಿಂದ ಒಪ್ಪಂದಕ್ಕೆ ಬರಲು ಸಮಯ ತೆಗೆದುಕೊಳ್ಳುತ್ತಿದೆ. ಗೆಲ್ಲುವ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲರನ್ನೂ ತೃಪ್ತಿಪಡಿಸುವ ಸೂತ್ರವನ್ನು ರೂಪಿಸುತ್ತಿದ್ದೇವೆ’ ಎಂದು ಸೀಟು ಹಂಚಿಕೆ ಸಭೆಯಲ್ಲಿ ಪಾಲ್ಗೊಂಡಿದ್ದ ಎಂವಿಎ ಹಿರಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.
ಸಭೆಯಲ್ಲಿ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ, ಪಕ್ಷದ ನಾಯಕ ಬಾಳಾಸಾಹೇಬ್ ಥೋರಟ್, ವಿರೋಧ ಪಕ್ಷದ ನಾಯಕ ವಿಜಯ್ ವಡೆತ್ತಿವಾರ್, ಎನ್ಸಿಪಿ (ಎಸ್ಪಿ) ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್, ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಮತ್ತು ಮಾಜಿ ಸಚಿವ ಜಿತೇಂದ್ರ ಅಹ್ವಾದ್ ಮತ್ತು ಶಿವಸೇನೆಯ(ಯುಬಿಟಿ) ಸಂಜಯ್ ರಾವತ್ ಉಪಸ್ಥಿತರಿದ್ದರು.
“ಸಮಾಜವಾದಿ ಪಕ್ಷಕ್ಕೆ ಎರಡರಿಂದ ಮೂರು ಸ್ಥಾನಗಳನ್ನು ನೀಡಲಾಗುವುದು. ಎಡಪಕ್ಷಗಳಿಗೂ ಎರಡರಿಂದ ಮೂರು ಸ್ಥಾನಗಳು ಮತ್ತು ರೈತರು ಹಾಗೂ ಕಾರ್ಮಿಕರ ಪಕ್ಷಕ್ಕೆ ಎರಡರಿಂದ ಮೂರು ಸ್ಥಾನಗಳನ್ನು ವಿಧಾನಸಭಾ ಚುನಾವಣೆಯಲ್ಲಿ ನೀಡಲಾಗುವುದು” ಎಂದು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.