ಮಡಿವಾಳ ಮಾಚಿದೇವರ ಕಾಯಕ ಪ್ರಜ್ಞೆ

Ravi Talawar
ಮಡಿವಾಳ ಮಾಚಿದೇವರ ಕಾಯಕ ಪ್ರಜ್ಞೆ
WhatsApp Group Join Now
Telegram Group Join Now

12ನೇ ಶತಮಾನ ಒಂದು ಅದ್ಭುತ ಶರಣರ ಸಮಾಗಮದ ಐತಿಹಾಸಿಕ ಕಾಲ. ಏಕೆಂದರೆ ಈ ಶತಮಾನದಲ್ಲಿ ನಡೆದಂತಹ ಶರಣ ಚಳವಳಿ ಅನನ್ಯವಾದದ್ದು ಮತ್ತು  ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿರುವತಹದು.ಬಸವಣ್ಣನವರ ಮುಂದಾಳತ್ವದಲ್ಲಿ ಜರುಗಿದ ಈ ವೈಚಾರಿಕ ಚಳವಳಿಗೆ ಹಲವಾರು ಶರಣರು ಕೈಜೋಡಿಸಿದರು. ಅಂತಹ ಪ್ರಮುಖರ ಸಾಲಿನಲ್ಲಿ ಮಡಿವಾಳ ಮಾಚಿದೇವರು ಕೂಡ ಒಬ್ಬರು. ಮಹಿಳೆಯರು ಸೇರಿದಂತೆ ಹಲವು ಕೆಳ ವರ್ಗದ ಜನರು ಅನೇಕ ರೀತಿಯಲ್ಲಿ ಶೋಷಣೆಗೆ ಒಳಗಾಗಿದ್ದ ಕಾಲವದು. ಅಂತಹ ಸಂದರ್ಭದಲ್ಲಿ ಧರ್ಮದ ಸುಧಾರಣೆ ಹಾಗೂ ಸಮಾನತೆ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳನ್ನು ಒದಗಿಸುವ ದೃಷ್ಟಿಯಿಂದ ಬಸವಣ್ಣನವರು, ಅಲ್ಲಮ ಪ್ರಭು, ಚನ್ನಬಸವಣ್ಣ ಮಾಚಿದೇವ, ಅಕ್ಕಮಹಾದೇವಿ, ಸಿದ್ದರಾಮೇಶ್ವರ ಇತ್ಯಾದಿ ಹತ್ತು ಹಲವಾರು ಶರಣರು ಸೇರಿ ಸಾಮಾಜಿಕ ಪರಿವರ್ತನೆಯ ಕ್ರಾಂತಿಯನ್ನು ಕೈಗೊಂಡಂತಹ ಒಂದು ಅವಿಸ್ಮರಣೀಯ ಕಾಲವದು. ಮಡಿವಾಳ ಮಾಚಯ್ಯ, ಮಡಿವಾಳಯ್ಯ, ಮಾಚಿದೇವ.,  ಹೀಗೆ ಅನೇಕ ಹೆಸರುಗಳಿಂದ ಮಾಚಿದೇವರು ಪ್ರಸಿದ್ಧಿಯಾಗಿ ವಚನಗಳು ರಚನೆ ಮಾಡಿದ್ದವರು.

ಅಂದಹಾಗೆ 12ನೆಯ ಶತಮಾನದಲ್ಲಿ ದುರ್ಬಲರ ಶೋಷಣೆ, ಜಾತೀಯತೆ, ಮೇಲು -ಕೀಳು ತಾರತಮ್ಯ, ಅಸ್ಪ್ರುಶ್ಯತೆ, ಮೂಢ ನಂಬಿಕೆಗಳ ಸೃಷ್ಟಿ, ಶಿಕ್ಷಣದಲ್ಲಿ ಅವಕಾಶ ವಂಚನೆ ಹೀಗೆ ಅನೇಕ ಸಾಮಾಜಿಕ ಅಸಮಾನತೆಯಿಂದ ಜನರು ತುಳಿತಕ್ಕೆ ಒಳಗಾಗಿದ್ದ ಕಾಲದಲ್ಲಿ ಆಕಾಶ ದೀಪವಾಗಿ ಬಂದ ಬಸವಣ್ಣನವರು ಎಲ್ಲರನ್ನೂ  ಮೇಲೆತ್ತುವ ಕೆಲಸ ಮಾಡುವ ಮುಖಾಂತರ ಸಮಾನತೆಯ ಸ್ವಾತಂತ್ರ್ಯ ಸರ್ವರಿಗೂ ಕರುಣಿಸಿದ ಮಹಾಮಹಿಮರು.ಅಂತೆಯೇ ಬಸವಣ್ಣನವರಿಗೆ ಆದಿಯಾಗಿ ಇಡೀ ಶರಣ ಸಂಕುಲಕ್ಕೆ ಬೆನ್ನೆಲುಬಾಗಿ ನಿಂತು ವಚನ ಸಾಹಿತ್ಯ ರಕ್ಷಣೆ ಮಾಡುವಲ್ಲಿ ಪ್ರಮುಖ ದಂಡನಾಯಕರಾಗಿ ಕೆಲಸ ಮಾಡಿದ ಶರಣವೆಂದರೆ ಅದು ಮಡಿವಾಳ ಮಾಚಿದೇವರು ಶಿವಶರಣರು.

ಸರ್ವರಿಗೂ ಸಮಪಾಲು – ಸಮಬಾಳು ಒದಗಿಸಲು,ಬಸವಣ್ಣನವರು -ಮಾಚಿದೇವ ಶರಣರು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡರು. ಶರಣರ ಅಗ್ರ ಗಣ್ಯ ಬಳಗದಲ್ಲಿ ಮಡಿವಾಳ ಮಾಚಿದೇವ ಅತ್ಯಂತ ಪ್ರಕಾಶಮಾನವಾಗಿ ಹೊಳೆಯುವ ನಕ್ಷತ್ರದಂತೆ ಮಿನುಗಿದವರು ಅಂದರೆ ಅತಿಶಯೋಕ್ತಿಯಲ್ಲಾ ಶರಣ ಬಂಧುಗಳೇ.

ಬಿಜಾಪುರ ಜಿಲೆಯ ಸಿಂಧಗಿ ತಾಲೂಕಿನ ದೇವರ ಹಿಪ್ಪರಗಿಯಲ್ಲಿ ಪರುವತಯ್ಯ – ಸುಜ್ನಾನವ್ವ ದಂಪತಿಗಳ ಪುತ್ರರಾಗಿ ಮಡಿವಾಳ ಮಾಚಿದೆವರು ಜನಿಸಿದ್ದರು.ಚಿಕ್ಕ ವಯಸ್ಸಿನಲ್ಲಿ ಅಪಾರಜ್ಞಾನವನ್ನು ಹೊಂದಿದ್ದಮಾಚಿದೇವ ಶರಣರು , ಅತಿ ಹೆಚ್ಚು ಚುರುಕಾಗಿದ್ದರು. ಲವಲವಿಕೆಯಿಂದ ಓಡಾಡಿಕೊಂಡು ,ಎಲ್ಲರೊಂದಿಗೆ ಆತ್ಮೀಯ ಒಡನಾಟ ಹೊಂದಿದರು. ವಿಶೇಷವಾಗಿ ಇವರಲ್ಲಿ ಅಪಾರ ಜ್ಞಾನವನ್ನು ಅವಲೋಕಿಸಿದಾಗ, ಇವರಿಗೆ ಉತ್ತಮ ಗುರುಗಳ ಬೋಧನೆ ಸಿಕ್ಕಿದ್ದು ಖಾತ್ರಿಯಾಗುತ್ತದೆ.

ಇನ್ನು ಮಾಚಿದೇವರ ಅಚಲ ಕಾಯಕ ನಿಷ್ಟೆನಾಗಿರುವುದು ಕಾಣುತ್ತೇವೆ. ಅಗಾಧವಾದ ಸಂಕಲ್ಪ, ತನ್ನ ಕಾಯಕವೇ ಭಕ್ತಿ, ಜೀವನದುಸಿರು ಎಂದು ನಂಬಿದ್ದರು. ಮಡಿ ಬಟ್ಟೆ ಹೊತ್ತುಕೊಂಡು ‘ವೀರ ಘಂಟೆ’ ಬಾರಿಸುತ್ತ, ಭಕ್ತರಲ್ಲದವರು ತಮ್ಮನ್ನು ಮುಟ್ಟಬಾರದೆಂದು ನಿಯಮವನ್ನು ವಿಧಿಸಿಕೊಂಡಿದ್ದ ಈ ಶರಣರು, ಅತ್ಯಂತ ಶ್ರದ್ಧಾ ಮನೋಭಾವನೆಯಿಂದ ಕಾಯಕ ಮಾಡಿಕೊಂಡು ಸರ್ವರಿಗೂ ಮಾದರಿಯಾಗಿದ್ದರು ಎಂಬುದು ತಿಳಿಬರುತ್ತದೆ. ಕಾಯಕದಲ್ಲಿ ಯಾವುದೇ ರೀತಿಯ  ಭೇದ ಭಾವ ಮಾಡದೆ, ಸರ್ವರನ್ನು ಸಮಾನತೆಯಿಂದ ಕಂಡವರು. ಕಾಯಕದಲ್ಲಿ ಅತ್ಯಂತ ನಿಷ್ಠೆಯನ್ನು ತೋರಿ ಕಾಯಕದಲ್ಲಿಯೇ ಕೈಲಾಸ ಕಂಡವರು ಮಾಡಿವಾಳ ಮಾಚಿದೇವ ಶರಣರು ಎಂಬುದನ್ನು ಸ್ಪಷ್ಟವಾಗಿ ಗೋಚರಿಸುತ್ತದೆ.

ಅಂತೆಯೇ ಕುಚೋದ್ಯಕ್ಕೆ ಬಂದು ಮುಟ್ಟುವ ಭವಿಗಳನ್ನು ತುಂಡರಿಸಿ ಚೆಲ್ಲುತ್ತ ಮುನ್ನಡೆಯುವುದು ಮಾಚಿದೇವರ ನಡತೆಯಾಗಿತ್ತು. ನುಡಿದಂತೆ ನಡೆಯುವ, ದಯವೇ ಧರ್ಮದ ಮೂಲವೆಂದು ತಿಳಿದು, ಅರಿವೇ ಗುರು ಎಂದು ಹೆಜ್ಜೆ ಹಾಕುತ್ತಾ ,ಕಾಯಕ ಭಾವದಿಂದ ನಡೆದುಕೊಳ್ಳುತ್ತಿದ್ದ ಮಡಿವಾಳಯ್ಯ ಶರಣರನ್ನು ಜನರು ಅತ್ಯಂತ ಗೌರವ ಮನೋಭಾವದಿಂದ ಕಾಣುತ್ತಿದ್ದರು. ಕಾಯಕ ಮಾಡದ -ಸೋಮಾರಿಗಳ-ಬಡವರನ್ನು ಶೋಷಿಸುವ -ಸೋಮಾರಿಗಳ- ದುರ್ಗುಣವುಳ್ಳವರ ಬಟ್ಟೆಗಳನ್ನೆಂದು ಅವರು ಯಾವಾಗಲೂ ಮುಟ್ಟುತ್ತಿರಲಿಲ್ಲ. ‘ಅರಸುತನ ಮೇಲಲ್ಲ-ಅಗಸತನ ಕೀಳಲ್ಲ ‘ ಎಂಬುದನ್ನು  ಜನಮಾನಸಕ್ಕೆ ಸಾರಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಅನುಭವ ಮಂಟಪ ಕಟ್ಟುವಲ್ಲಿ ಮಡಿವಾಳ ಮಾಚಿದೇವರ ಕಾಯಕ ಕೊಡುಗೆ ಅತಿ ಮಹತ್ವದ್ದಾಗಿದೆ. ದೇಶದ ನಾನಾ ಭಾಗಗಳಿಂದ ಕಲ್ಯಾಣಕ್ಕೆ ಬರುವವರಿಗೆ ಪರೀಕ್ಷಿಸಿ, ‘ಮಡಿ’ ಹಾಸಿ ಸ್ವಾಗತಿಸುವ ಕೆಲಸ ಅವರದಾಗಿತ್ತು. ಮಾಚಿದೇವರ ಪರೀಕ್ಷೆಗೊಳಪಡದ ಹೊರತು ಕಲ್ಯಾಣಪುರ ಪ್ರವೇಶದ ಪ್ರಮಾಣ ಪತ್ರ ಹೊರಗಿನಿಂದ ಬರುವವರಿಗೆ ಸಿಗುತ್ತಿರಲಿಲ್ಲವೆಂಬುದು ಮಾಚಯ್ಯ ಶರಣರ ಮಹಾ ಘನತೆಗೆ ಸಾಕ್ಷಿಯಾಗಿದೆ.

ಅಂದಿನ ಬಿಜ್ಜಳ ರಾಜನಿಗೆ ಮಾಚಿದೇವರ ಬಗ್ಗೆ ಒಳ್ಳೆಯ ಮನೋಭಾವನೆ ಇರಲಿಲ್ಲ, ಅಹಂಕಾರ ಇತ್ತು, ಈ  ಅಹಂಕಾರವನ್ನು ಅಡಗಿಸಿ, ರಾಜನಿಗೆ ಸತ್ಯ ದರ್ಶನ್ ಮಾಡಿಸಿದ ಹಿರಿಮೆ ಇವರಿಗೆ ಸಲ್ಲಲೇಬೇಕು. ಕಾಲಾಂತರದಲ್ಲಿ ಬಿಜ್ಜಳನಿಗೆ ಮಾಚಿದೇವರ ಕಾಯಕ ಮಹಿಮೆ ತಿಳಿದು ತನ್ನ ತಪ್ಪಿನ ಅರಿವಾಗಿ ಬಿಜ್ಜಳ ಶರಣಾಗತನಾಗಿದನು.

ಮುಂದೆ ‘ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಮಾಚಿದೆವರು ಹೊತ್ತ ‘ಜವಾಬ್ಧಾರಿ’ ಗುರುತರವಾದುದು. ಲಿಂಗಾಯತ ಧರ್ಮ ಸಂರಕ್ಷಣೆ- ವಚನ ಸಾಹಿತ್ಯದ ರಕ್ಷಣೆಯ ದಂಡ ನಾಯಕತ್ವ ಜವಾಬ್ಧಾರಿ ಹೊತ್ತು, ಚನ್ನ ಬಸವಣ್ಣ, ಅಕ್ಕ ನಾಗಮ್ಮ, ಕಿನ್ನರಿ ಬೊಮ್ಮಣ್ಣ ಮೊದಲಾದವರೊಂದಿಗೆ ಮಾಚಿದೇವ ಶರಣರು ಸಮೂಹದ ‘ಭೀಮ ರಕ್ಷೆಯಾಗಿ’ ನಿಂತವರು. ಕಲಚೂರ್ಯ ರಾಯ ಮುರಾರಿಯನ್ನು ಎದುರಿಸಿ ಭೀಮ ನದಿಯನ್ನು ದಾಟಿ ತಲ್ಲೂರು, ಮುರಗೋಡ, ಕಡಕೋಳ,ತಡ ಕೋಡ, ಮೂಗ ಬಸವ, ಕಾದರವಳ್ಳಿಯಲ್ಲಿ ಅಲ್ಲಲ್ಲಿ ಕಾಳಗ ನಡೆಸಿದವರು. ತಮ್ಮ ಧೈರ್ಯ, ಅನುಪಮ ಬಲದಿಂದ ಶರಣರನ್ನು, ವಚನ ಸಾಹಿತ್ಯವನ್ನು ರಕ್ಷಿಸಿ ಉಳಿವಿಗೆ ತಲುಪಿಸಿದ ಮಾಹಾ ಸಾಹಸಿ, ಕಾಯಕಯೋಗಿ ಮಾಚಿದೇವ ಶರಣರು ಎಂಬುದು ಎದೆ ತಟ್ಟಿ ಹೇಳಬೇಕಾಗುತ್ತದೆ.

ಹೀಗೆ ಸಮಸ್ತ ಶರಣರು ಉಳಿವಿಯಲ್ಲಿಯೆ ಇದ್ದುಕೊಂಡು ವಚನ ಸಾಹಿತ್ಯ ಸಂರಕ್ಷಿಸಿ, ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದು ನೋಡುತ್ತೇವೆ. ಅಂದಹಾಗೆ ಮಾಚಿದೇವ ಶರಣರು ಈ ವಚನ ಸಾಹಿತ್ಯ ರಕ್ಷಣೆಯಲ್ಲಿ ಮಹಾನ್ ಕರ್ತವ್ಯ ಪೂರೈಸಿ, ಉಳವಿಗೆ ಹೋಗುತ್ತಿರುವಾಗಲೆ ಮಾರ್ಗ ಮಧ್ಯದ ಮುರಗೋಡದ ಹತ್ತಿರವಿರುವ ಕಾರಿಮಣಿ (ಕಾರಿಮನೆ)ಯಲ್ಲಿ ಲಿಂಗೈಕ್ಯರಾದರು. ಇಂದಿಗೂ ಅಲ್ಲಿ ಅವರ ಗದ್ದುಗೆ ಕಾಣಬಹುದು. (ಈ ನಿಟ್ಟಿನಲ್ಲಿ ಸಂಶೋಧನೆ ಆಗಬೇಕಾಗಿದೆ)ಕಲಿದೇವರದೇವ ಎಂಬ ವಚನಾಂಕಿತವನ್ನು  ಬಳಸಿಕೊಂಡು ಸುಮಾರು 477 ವಚನಗಳು ಬರೆದಿರುವುದು  ಕಾಣುತ್ತೇವೆ. (ಸಧ್ಯ ಇಷ್ಟೇ ವಚನಗಳು ಲಭ್ಯವಾಗಿವೆ.) ಇವುಗಳಲ್ಲಿ ಗಣಾಚಾರ ನಿಷ್ಠೆ, ಡಾಂಭಿಕತೆ, ಕರ್ಮಠತನ, ಕ್ಷುದ್ರದೈವಾರಾಧನೆ, ಸ್ಥಾವರಲಿಂಗ ಪೂಜೆಗಳನ್ನು ಕುರಿತ ನಿಷ್ಠುರ ಟೀಕೆ ಪ್ರಮುಖವಾಗಿ ಕಂಡುಬರುತ್ತದೆ.

ಉಡಿಯ ಲಿಂಗವ ಬಿಟ್ಟು,

ಗುಡಿಯ ಲಿಂಗಕ್ಕೆ ಶರಣೆಂಬ

ಮತಿಭ್ರಷ್ಟರನೇನೆಂಬೆನಯ್ಯಾ

ಕಲಿದೇವರದೇವ.

ಎಂದು ಹೇಳಿರುವ ಅವರ ಈ ವಚನ ಕಾಯಕ ತತ್ವಕ್ಕೆ ಸಾಕ್ಷಿಕರಿಸಿದೆ. ಮಾಚಿದೇವರು ಸತ್ಯ, ಶುದ್ಧ ಬದುಕಿನ ಶರಣ, ಸಾಮಾಜಿಕ ಸುಧಾರಣಾ ಚಳವಳಿಯ ದಂಡನಾಯಕ, ಸಾಮಾಜಿಕ ಹೊಣೆ ನಿರ್ವಹಿಸಿದ ಗಣಾಚಾರ ಸಂಪನ್ನ, ಶರಣರನ್ನು- ವಚನ ಸಾಹಿತ್ಯವನ್ನು ರಕ್ಷಿಸಿದ ವೀರ ಶರಣ, ವಚನ ಸಾಹಿತ್ಯ ಸಂರಕ್ಷಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ‌. ಅಲ್ಲದೇ ಕಾಯಕದ ಆಧಾರದಲ್ಲಿ ವಿಭಜನೆ ಆಗುತ್ತಿರುವ ಇಂದಿನ ಸಮಾಜಕ್ಕೆ ಮಾಚಿದೇವರ ಸಂದೇಶ ಅರ್ಥವಾಗಬೇಕಾದ ಅಗತ್ಯವಿದೆ. ಜೊತೆಗೆ ಬಸವಾದಿ ಶರಣರ ವಿಶ್ವ ಕಲ್ಯಾಣ ತತ್ವಗಳಿಗೆ ತಮ್ಮನ್ನು ಸಮರ್ಪಿಸಿಕೊಂಡ ಮಾಚಿ ತಂದೆಗೆ ಶರಣರೆಂದರೆ ಪಂಚಪ್ರಾಣ, ಮಾಚಿದೇವರ ಅಪಾರ ಜ್ಞಾನ, ಕಾಯಕ, ನಿಷ್ಠೆ, ನ್ಯಾಯ, ನಿರಹಂಕಾರ ಗುಣಗಳನ್ನು ಕಂಡು ಶರಣರೆಲ್ಲ ಹೃದಯಪೂರ್ವಕವಾಗಿ ಅಭಿನಂದಿಸಿ, ಶ್ಲಾಘಿಸಿದ್ದಾರೆ. ಬಸವಣ್ಣನವರು ಎನ್ನ ಕಾಯವ ಶುದ್ಧ ಮಾಡಿ ದಾತ ಮಡಿವಾಳ, ಎನ್ನ ಮನವ ನಿರ್ಮಲ ಮಾಡಿ ದಾತ ಮಡಿವಾಳ, ಎನ್ನಂತರಂಗವ ಬೆಳಗಿದಾತ ಮಡಿವಾಳ, ಎನ್ನ ಬಹಿರಂಗವ ಬಿಡಿಸಿದಾತ ಮಡಿವಾಳ, ಕೂಡಲ ಸಂಗಮದೇವಾ ಎನ್ನ ನಿಮಗೆ ಯೋಗ್ಯನಾ ಮಾಡಿದಾತ ಮಡಿವಾಳ ಎಂದು ಮಾಚಿದೇವ ಶರಣರ ಬಗ್ಗೆ ಹೆಮ್ಮೆಯಿಂದ ಹೇಳಿದ್ದಾರೆ.

ಗೌರವ ನುಡಿ : ಹನ್ನೆರಡನೆಯ ಶತಮಾನದಲ್ಲಿ ಮಾಚಿದೇವ ಶರಣರು ವಚನಸಾಹಿತ್ಯವನ್ನು ರಕ್ಷಿಸದಿದ್ದಲ್ಲಿ ಲಿಂಗಾಯತ ಧರ್ಮಕ್ಕೆ, ಶರಣ ಸಂಸ್ಕೃತಿಗೆ, ಶರಣ ಸಾಹಿತ್ಯಕ್ಕೆ ಇಂದು ಜೀವಂತಿಕೆ ಇರುತ್ತಿರಲಿಲ್ಲ. ವ್ಯಕ್ತಿತ್ವ ವಿಕಸನ ಮತ್ತು ಸಾಮಾಜಿಕ ಪರಿವರ್ತನೆಗಾಗಿ ಸತ್ಯ, ನೇರ, ನಿಷ್ಠುರ, ನಡೆ-ನುಡಿಗಳಿಂದ ಲಿಂಗಾಯತ ಧರ್ಮವನ್ನು ಜಾಗೃತಿಗೊಳಿಸಿದ ಹಿರಿಮೆಗೆ ಪಾತ್ರವಾಗಿದ್ದಾರೆ‌.ಅಷ್ಟೇ ಅಲ್ಲದೆ ಮಡಿವಾಳ ಮಾಚಿದೇವ ಶರಣರು ಲಿಂಗಾಯತ ಧರ್ಮದ ಶಾಶ್ವತ ಆಸ್ತಿ. ಸಾಮಾಜಿಕ ಅಸಮಾನತೆ ಹೋಗಲಾಡಿಸುವ ಜತೆಗೆ ಕಾಯಕ,ಜ್ಞಾನ ಪ್ರಜ್ಞೆಗೆ ಅವರು ನೀಡಿದ ಕೊಡುಗೆ ಮಹತ್ತರವಾದುದು. ಮೌಢ್ಯ ಹಾಗೂ ಶೋಷಣೆಗಳಿಂದ ನಡೆಯುತ್ತಿದ್ದ ಕಾಲದಲ್ಲಿ ಮಾಚಿದೇವ ಶರಣರು ವಚನ ಸಾಹಿತ್ಯದ ಮೌಲ್ಯಾಧಾರಿತ ಸಂದೇಶಗಳ ಮೂಲಕ ಶೋಷಣೆಯನ್ನು ತಡೆಗಟ್ಟುವ ಕೆಲಸ ಮಾಡಿದ್ದು ಯಾರು, ಯಾವತ್ತೂ ಮರೆಯುವಂತಿಲ್ಲ. ಅದಕ್ಕಾಗಿಯೇ ಇಂದಿನ ನಾಗರಿಕ ಸಮಾಜ ಇವರನ್ನು ಸದಾ ಕಾಲ ಸ್ಮರಣೆ ಮಾಡಿಕೊಳ್ಳಲೇಬೇಕು.

  • ಸಂಗಮೇಶ ಎನ್ ಜವಾದಿ, ಬರಹಗಾರರು
WhatsApp Group Join Now
Telegram Group Join Now
Share This Article