ಭೋಪಾಲ್, ಮಧ್ಯಪ್ರದೇಶ: ಈಗಾಗಲೇ ಏಳು ರಾಷ್ಟ್ರೀಯ ಹುಲಿ ಸಂರಕ್ಷಣಾ ಉದ್ಯಾನ ಹೊಂದಿರುವ ಮಧ್ಯಪ್ರದೇಶದಲ್ಲಿ ಎಂಟನೇ ಪಾರ್ಕ್ ಪ್ರಸ್ತಾಪಕ್ಕೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ಟಿಸಿಎ) ತಾಂತ್ರಿಕ ಸಮಿತಿ ಸಮ್ಮತಿ ಸೂಚಿಸಿದೆ. ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಮಾಧವ್ ರಾಷ್ಟ್ರೀಯ ಪಾರ್ಕ್ ಹುಲಿ ಸಂರಕ್ಷಣೆ ಉದ್ಯಾನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಕನ್ಹಾ, ಸಾತ್ಪುರ್, ಬಂಢಾವಗಢ್, ಪೆಂಚ್, ಸಂಜಯ್ ದುಬ್ರಿ, ಪನ್ನಾ ಮತ್ತು ವೀರಂಗನ ದುರ್ಗಾವತಿ ಎಂಬ ಎಂಟು ಹುಲಿ ಸಂರಕ್ಷಿತ ತಾಣವನ್ನು ಮಧ್ಯಪ್ರದೇಶ ಹೊಂದಿದೆ. ಈ ಕುರಿತು ಮಾತನಾಡಿರುವ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಹೆಚ್ಚುವರಿ ಪ್ರಧಾನ ಮುಖ್ಯಸ್ಥರಾದ ಎಲ್ ಕೃಷ್ಣಮೂರ್ತಿ ಮಾತನಾಡಿ, ಎನ್ಟಿಸಿಎ ತಾಂತ್ರಿಕ ಸಮಿತಿಯು ಮಾಧವ್ ರಾಷ್ಟ್ರೀಯ ಉದ್ಯಾನವನ್ನು ಹುಲಿ ಸಂರಕ್ಷಿತಧಾಮವಾಗುವ ಪ್ರಸ್ತಾವಕ್ಕೆ ಸಮ್ಮತಿಸಿದೆ. ಈ ಉದ್ಯಾನ 1,751 ಚ. ಕಿ.ಮೀ ಇದ್ದು, ಪ್ರಮುಖ ಪ್ರದೇಶ 375 ಚ.ಕಿ.ಮೀ ವ್ಯಾಪಿಸಿದೆ. ಬಫರ್ ಪ್ರದೇಶ 1,276 ಚ. ಕಿ.ಮೀ ಇದೆ. ಈ ಪಾರ್ಕ್ನಲ್ಲಿ ಹುಲಿಗಳನ್ನು ಬಿಡಲು ಸಮಿತಿ ಸಮ್ಮತಿಸಿದೆ ಎಂದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.