ಬಳ್ಳಾರಿ04.: ನಗರದಲ್ಲಿ ಆಟೋ ಚಾಲಕರಿಗೆ ಎಲ್ಪಿಜಿ ಗ್ಯಾಸ್ ಕೊರತೆ ತೀವ್ರವಾಗಿದ್ದು, ಸಾವಿರಾರು ಆಟೋಗಳು ಕಿಲೋಮೀಟರ್ಗಳಷ್ಟು ಉದ್ದವಾದ ಸಾಲಿನಲ್ಲಿ ನಿಂತು ಪರದಾಡುತ್ತಿರುವ ದೃಶ್ಯಗಳು ಕಾಣಿಸಿಕೊಂಡಿವೆ. ನಗರದ ಕೆಇಬಿ ಸರ್ಕಲ್ ಸಮೀಪ ಇರುವ ‘ಪರ್ಪಲ್’ ಆಟೋ ಎಲ್ಪಿಜಿ ಬಂಕ್ ಮುಂದೆ ಬೆಳಗ್ಗೆಯಿಂದಲೇ ವಾಹನಗಳ ದೀರ್ಘ ಸಾಲು ಉಂಟಾಗಿದೆ.
ನಗರದಲ್ಲಿರುವ ಐದು ಆಟೋ ಎಲ್ಪಿಜಿ ಬಂಕ್ಗಳ ಪೈಕಿ ನಾಲ್ಕು ಬಂಕ್ಗಳು ವಿವಿಧ ಕಾರಣಗಳಿಂದ ಬಂದ್ ಆಗಿರುವ ಹಿನ್ನೆಲೆಯಲ್ಲಿ, ಒಂದೇ ಬಂಕ್ನಲ್ಲಿ ಗ್ಯಾಸ್ ಪೂರೈಕೆ ನಡೆಯುತ್ತಿದೆ. ಇದರಿಂದ ಆಟೋ ಚಾಲಕರು ಹಲವು ಗಂಟೆಗಳ ಕಾಲ ಕಾಯುವ ಪರಿಸ್ಥಿತಿ ಎದುರಾಗಿದೆ. ಕೆಲವರು 3ರಿಂದ 5 ಕಿಲೋಮೀಟರ್ಗಳವರೆಗೆ ಸಾಲಿನಲ್ಲಿ ನಿಂತಿರುವುದು ಗಮನಾರ್ಹ.
ಇದಕ್ಕೂ ಮೀರಿ, ಎಲ್ಪಿಜಿ ದರದಲ್ಲೂ ಏರಿಕೆ ಕಂಡುಬಂದಿದ್ದು, ಲೀಟರ್ಗೆ ₹84.56 ಇದ್ದ ಬೆಲೆ ಇದೀಗ ₹93.56ಕ್ಕೆ ಏರಿಕೆಯಾಗಿದೆ. ದರ ಏರಿಕೆ ಹಾಗೂ ಗ್ಯಾಸ್ ಕೊರತೆ ಎರಡೂ ಸೇರಿ ಆಟೋ ಚಾಲಕರ ಸಂಕಷ್ಟವನ್ನು ಮತ್ತಷ್ಟು ಗಂಭೀರಗೊಳಿಸಿದೆ.
‘ಬೆಳಿಗ್ಗೆ ಬಂದು ಸಾಲಿನಲ್ಲಿ ನಿಂತರೂ ಸಂಜೆಗಷ್ಟೇ ಗ್ಯಾಸ್ ಸಿಗುತ್ತದೆ. ದಿನವಿಡೀ ಬಾಡಿಗೆ ಇಲ್ಲದೇ ಹೋದರೆ ಮನೆ ನಡೆಸೋದು ಹೇಗೆ? EMI ಕಟ್ಟೋದು ಹೇಗೆ?’ ಎಂದು ಹಲವಾರು ಚಾಲಕರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಇದರಿಂದ ದಿನಸಿ ಆದಾಯದ ಮೇಲೆ ಬದುಕು ನಡೆಸುವ ಆಟೋ ಚಾಲಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಕುಟುಂಬ ನಿರ್ವಹಣೆಯಲ್ಲೂ ಸಮಸ್ಯೆ ಎದುರಿಸುತ್ತಿದ್ದಾರೆ. ತಕ್ಷಣವೇ ಗ್ಯಾಸ್ ಪೂರೈಕೆ ಸುಧಾರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ನಗರದಲ್ಲಿ ಇಂತಹ ಅವ್ಯವಸ್ಥೆ ಮುಂದುವರಿದರೆ ಸಾರಿಗೆ ವ್ಯವಸ್ಥೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗುತ್ತಿದೆ.


