ಪ್ರೀತಿ ಬಳಸಿಕೊಳ್ಳುವುದಲ್ಲ, ಉಳಿಸಿಕೊಳ್ಳುವುದು!

Ravi Talawar
ಪ್ರೀತಿ ಬಳಸಿಕೊಳ್ಳುವುದಲ್ಲ, ಉಳಿಸಿಕೊಳ್ಳುವುದು!
WhatsApp Group Join Now
Telegram Group Join Now

ಪ್ರೀತಿ ಎಂದರೆ ಕೇವಲ ಆಕರ್ಷಣೆಯಲ್ಲ ಅದು ಆದರ್ಶ ಎಂಬ ಭಾವ ಎಲ್ಲಿಯವರೆಗೆ ನಮ್ಮಲ್ಲಿ ಜಾಗೃತವಾಗಿರುತ್ತದೆಯೋ ಅಲ್ಲಿಯವರೆಗೆ ನಾವು ಅದನ್ನು  ಉಳಿಸಿಕೊಳ್ಳಲು ಸಾಧ್ಯ. ಇಲ್ಲವಾದರೆ ಕೇವಲ ಬಳಕೆಯಾಗಿಯೋ ಇಲ್ಲವೆ ಬಳಸಿಕೊಂಡೋ, ಕಾರಣ ನೀಡಿಯೋ ಅಥವಾ ನೀಡದೆಯೋ ಬಿಟ್ಟು ಹೋಗುತ್ತಿರುವುದು ಕಣ್ ಮುಂದಿನ ಸತ್ಯ ಸಂಗತಿಗಳೇ ಸರಿ. ಪ್ರೀತಿ ಕೇವಲ ಮಾಡುವುದಲ್ಲ, ಮುನ್ನಡೆಸಿಕೊಂಡು ಹೋಗುವುದು ಎಂಬ ಸತ್ಯವನ್ನು ಅರಿತಾಗ ಮಾತ್ರ ಅದರ ಪರಮ ಸುಖ ಪ್ರೀತಿಸಿದ ಎರಡೂ ಮನಸ್ಸುಗಳಿಗೆ ಪ್ರಾಪ್ತವಾಗುತ್ತದೆ.

ಪ್ರೀತಿ ಎಂಬುವುದು ಈ ಲೋಕದ ಸುಂದರ ಮನಸ್ಸಿನ ಮಧುರ ಭಾವನೆ. ಅದೊಂದು ಮಾನವ ಸಂಬಂಧಗಳ ಶ್ರೇಷ್ಠ ಶಕ್ತಿಯು ಹೌದು. ಅಂತಹ ಶ್ರೇಷ್ಠ ಶಕ್ತಿಯನ್ನು ಉಳಿಸಿಕೊಳ್ಳುವುದಕ್ಕೆ ಬೇಕಾಗಿರುವ ಅಮೂಲ್ಯವಾದ ಆಯುಧವೆಂದರೆ ಕೇವಲ ಭಕ್ತಿ ಮಾತ್ರ. ಆದರ್ಶಮಯವಾದ ಪ್ರೀತಿಯಲ್ಲಿ ಮಾತ್ರ ನಾವು ಆತ್ಮಗಳ
ಅನುಸಂಧಾನದ ಅನುಭವ ಸವಿಯಲು ಸಾಧ್ಯ. ಪ್ರೀತಿ ಎಂಬ ಕೇವಲ ಎರಡು ಅಕ್ಷರ ಮತ್ತೆ ಒಂದೇ ಒಂದು ಪದವಾಗಿದ್ದರೂ ಇಡೀ ಪ್ರಪಂಚವನ್ನೇ ಆವರಿಸಿಕೊಂಡಿದೆ. ಅದರ ಅರ್ಥವನ್ನು ಅರಿತವರಿಗೆ ಮಾತ್ರ ಈ ಬದುಕು ಅರ್ಥವಾದೀತು ಎಂಬುದು ನನ್ನ ನಂಬಿಕೆ. ಕ್ಷಣಕ್ಷಣಕ್ಕೂ ನಮ್ಮ ಅಂತರಂಗದ ಕಣ್ಣತೆರೆಸುವ ರೆಪ್ಪೆಯ ಅಂಚಿನಲ್ಲಿ ಪ್ರೀತಿಯ ವ್ಯಾಖ್ಯಾನವಿದೆ.

ಕೆಲವರ ದೃಷ್ಟಿಯಲ್ಲಿ ಪ್ರೀತಿ ಎಂದರೆ ಎರಡು ಮನಸ್ಸಿನ ಮುಗಿಯದ ಸಂಯೋಜನೆ, ಇನ್ನೂ ಕೆಲವರ ದೃಷ್ಟಿಯಲ್ಲಿ ಅದೊಂದು ಕೇವಲ ಒಪ್ಪಂದ. ಮತ್ತೆ ಕೆಲವರ ದೃಷ್ಟಿಯಲ್ಲಿ ಅದು ಪರಸ್ಪರ ಹೊಂದಾಣಿಕೆ ಮತ್ತು ಅವಶ್ಯಕತೆ ಹಾಗೆಯೇ ಮತ್ತೊಬ್ಬರ ದೃಷ್ಟಿಯಲ್ಲಿ ಕೇವಲ ಮೋಜು-ಮಸ್ತಿ. ಹೀಗೆ ಹಲವು ರೀತಿಯಲ್ಲಿ ಅರ್ಥೈಸಿಕೊಳ್ಳುತ್ತಾ ಪ್ರೀತಿ ಹೆಸರಿನಲ್ಲಿ ತಮಗಿಷ್ಟವಾದ ಸುಖವನ್ನು ಸವಿಯುತ್ತಾ ಸಾಗುವ ಒಂದು ಭಾವಯಾನ. ಹಾಗೆ ನೋಡಿದರೆ ಪ್ರೀತಿ ಒಂದು ಅನುಭೂತಿ. ಅದನ್ನು ಪರಸ್ಪರ  ಹಂಚುವುದರಿಂದ ಮಾತ್ರ ಅನುಭವಿಸಬೇಕು ಅಷ್ಟೇ. ಕೆಲವೊಮ್ಮೆ ನಾವು ಅದನ್ನು ಮೌನದಲ್ಲೋ, ಮಾತಿನಲ್ಲೋ ಅಥವಾ ಮುಂದಿರುವ ಮನಸ್ಸು ಇಷ್ಟಪಡುವ ಪರಿಕರಗಳಿಂದ ವ್ಯಕ್ತ ಮಾಡಬಹುದಾಗಿದೆ. ಡಾಲಿಂಗ್, ಚಿನ್ನಾ, ಬೇಬಿ, ಸೋನು, ಡಿಯರ್, ಮುದ್ದು, ರನ್ನಾ ಎಂಬ ಮುಂತಾದ  ಪ್ರೀತಿ ಮತ್ತು ರೋಮಾಂಟಿಕ್ ಪದಗಳ ಬಳಕೆಯಲ್ಲಿಯೇ ಭಾವನೆಗಳನ್ನು ಬಂಧಿಸಿಡಬಹುದಾದ ಶಕ್ತಿ ಪ್ರೀತಿಗೆ ಇದೆ ಎಂದರೆ ತಪ್ಪಾಗಲಾರದು.

ಈ ಜಗತ್ತು ನಿಂತಿರುವುದೇ ಪ್ರೀತಿಯ ಮೇಲೆ ಎಂಬ ಮಾತು ನಾವೆಲ್ಲ ಪದೇ ಪದೇ ಕೇಳುತ್ತಲೇ ಇವೆ. ಅದೇ ರೀತಿ ಈ ಪ್ರೀತಿ ನಿಂತಿರುವುದು ಪರಸ್ಪರ ನಂಬಿಕೆ, ವಿಶ್ವಾಸ ಮತ್ತು ಸಮರಸ ಭಾವದಡಿಯಲ್ಲಿ ಎಂಬ ಸತ್ಯವನ್ನೇ ಮರೆತು ಸಾಗುತ್ತಿದ್ದೇವೆ ಏನೋ ಅನಿಸುತ್ತದೆ. ಮೊದಲಿನ ಪ್ರೇಮ ಪ್ರಕರಣಗಳನ್ನು ಕವಿತೆ, ಕಥೆ, ಕಾದಂಬರಿ ಹಾಗೂ ಚಲನಚಿತ್ರಗಳಲ್ಲಿ ಕಂಡಾಗ ಆ ಪಾತ್ರಗಳಿಗೆ ನಮ್ಮನ್ನು ಅನ್ವಯಿಸಿಕೊಂಡು ಅವರಂತೆ ಜೀವಿಸಬೇಕು ಎಂದು ಕನಸು ಕಂಡ ಗಳಿಗೆಗೆ ಲೆಕ್ಕವೇ ಇಲ್ಲ್ಲ. ಲೈಲಾ ಮಜನು, ದುಷ್ಯಂತ ಶಕುಂತಲೆಯರ ಮಹಾನ್ ಪ್ರೇಮಿಗಳು ಮಾದರಿಯಾಗಿ ಎಷ್ಟೋ ಮನಸ್ಸುಗಳಿಗೆ ಪ್ರೀತಿಸಿ ಒಂದಾಗಿ ಒಲವಿನ ಲೋಕದಲ್ಲಿ ಗೆಲುವಿನ ಸಂಭ್ರಮಕೆ ಸಾಕ್ಷಿಯಾಗಿದ್ದುಂಟು. ಅಷ್ಟೇ ಏಕೆ ಎಷ್ಟೋ ಪ್ರೇಮಿಗಳು ಸಾವಿನಲ್ಲಿ ಒಂದಾಗಿದ್ದ ಉದಾಹರಣೆಗಳಿಗೆ ಕೊರತೆಯಿಲ್ಲ.

ಇವತ್ತಿನ ಬಹುಪಾಲು ಪ್ರೀತಿಗಳನ್ನು ನೋಡಿದರೆ ಖೇದ  ಅನಿಸುತ್ತಿದೆ. ಮುಂಜಾನೆ ಕಣ್ತೆರೆದು ಮಧ್ಯಾಹ್ನ ಮೆರೆದಾಡಿ ಸಾಯಂಕಾಲ ಸಾವನ್ನಪ್ಪಿ ಬಿಡುತ್ತವೆ. ಕಾರಣ, ಅಲ್ಲಿ ಬದ್ದತೆ, ಪ್ರೀತಿಗೆ ಇರಬೇಕಾದ ತತ್ವ ಸಿದ್ಧಾಂತಗಳು ಸಂಪೂರ್ಣವಾಗಿ ಸೊರಗಿ ಹೋಗುತ್ತಿವೆ ಏನೋ ಅನಿಸುತ್ತಿವೆ. ಪ್ರೀತಿಸುವ ಸಂದರ್ಭದಲ್ಲಿರುವ ಮನಸ್ಥಿತಿಯ ಮಾತುಗಳನ್ನು ಈ ಕೆಳಗಿನ ಬೆಳಗಾವಿ ಬಳ್ಳಿಯ ಕವನ ಸಂಕಲನದ ಕವಿತೆಯೊಂದರ ಸಾಲುಗಳು ಮಾರ್ಮಿಕವಾಗಿ ಚಿತ್ರಿಸುತ್ತವೆ.

ನಮ್ಮ ನಮ್ಮ ನಡುವೆ ಮನಸ್ತಾಪ ಬಂದರೂ ಒಂದು ನಿಮಿಷ ಮೀರುವುದಿಲ್ಲ, ಕೋಪದಲ್ಲಿ ತಾಪದಲ್ಲಿ ಎಂದೆಂದೂ ನಮ್ಮ ಪ್ರೀತಿ ಸಾಯುವುದಿಲ್ಲ. ಆದರೆ,  ವರ್ತಮಾನದ ಸಂದರ್ಭದಲ್ಲಿ ಪ್ರೀತಿ ಪರಿಕಲ್ಪನೆಯನ್ನು ಸಮಾಜಮುಖಿಯಾಗಿ ವಿಮರ್ಶಿಸುತ್ತಾ ಹೋದಾಗ ಕೆಲವು ಸತ್ಯಗಳು ಅನಾವರಣಗೊಳ್ಳುತ್ತವೆ. ಪ್ರೀತಿಗೆ ಒಂದು ನಿಷ್ಠೆ, ಪ್ರಾಮಾಣಿಕ ಮನಸ್ಸು ಮಿಗಿಲಾಗಿ ನಿಯತ್ತು ಇರಬೇಕು ಎಂಬ ಅರಿವಿನಿಂದ ದೂರ ಸರಿಯುತ್ತಿದ್ದೇವೆ ಎಂಬ ಪ್ರಶ್ನೆ ಕಾಡುತ್ತಿದೆ. ನಂಬಿಕೆ ವಿಶ್ವಾಸಗಳು ನಮಗೆ ಅರಿವಿಗೆ ಬಾರದಂತೆಯೇ ನಶಿಸಿ ಹೋಗುತ್ತಿವೆ. ಮುಳ್ಳಿಲ್ಲದ ಗುಲಾಬಿಯಿಲ್ಲ ನೋವಿಲ್ಲದ ಪ್ರೀತಿಯೇ ಇಲ್ಲ ಎಂದು ಹೇಳುವ ಅನೇಕ ಪ್ರೇಮಿಗಳ
ಮಾತು ನಿಜಾನೇ. ಆದರೆ, ನೋವೇ ಪ್ರೀತಿಯ ಉಸಿರಾದಾಗ ಪ್ರೀತಿ ಸಾಯುತ್ತದೆ ಅಲ್ಲವೇ?

ಅನೇಕ ದಿನಗಳ ಕಾಲ ಅಷ್ಟೇ ಏಕೆ ವರ್ಷಗಟ್ಟಲೆ ಪರಸ್ಪರ ಒಬ್ಬರನ್ನೊಬ್ಬರು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಯುವಕ ಯುವತಿಯರು ಕುಟುಂಬ ಮತ್ತು ಸಮುದಾಯ ಹಾಗೂ ಸಮಾಜವನ್ನೇ ವಿರೋಧ ಮಾಡಿಕೊಂಡು ಪ್ರೀತಿಸಿ ಮದುವೆಯಾಗುತ್ತಿರುವ ಪ್ರಕರಣಗಳು ಕಂಡುಬರುತ್ತಿವೆ. ಪರಸ್ಪರ ಪ್ರೀತಿಸಿ ಪ್ರೇಮ
ವಿವಾಹವಾಗುವುದು ತಪ್ಪೇನಲ್ಲ. ಇಂತಹ ಮನಸ್ಸುಗಳಿಗೆ ಸರ್ಕಾರವು ಪ್ರೋತ್ಸಾಹ ನೀಡುತ್ತದೆ. ಪೋಲೀಸ್ ಠಾಣೆಗಳಲ್ಲಿ ರಕ್ಷಣೆ ನೀಡಿ ರೆಜಿಸ್ಟರ್ ಮದುವೆ ಮಾಡಿ ದಂಪತಿಗಳಿಗೆ ಮುಂದೊಂದು ದಿನ ಎಂದಿಗೂ ಜೀವಕ್ಕೆ ಅಪಾಯ ಬಾರದ ರೀತಿಯಲ್ಲಿ ರಕ್ಷಣೆಗೆ ಬದ್ದವಾಗುತ್ತಿರುವ ಪರಿ ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ವಿಪರ್ಯಾಸವೆಂದರೆ ಜೀವನದುದ್ದಕ್ಕೂ ಜೊತೆಯಾಗಿ ಬಾಳ ಸಂಗಾತಿಗಳಾಗಿರಬೇಕಾದ ಮನಸ್ಸುಗಳೇ ಕೆಲ ವರ್ಷಗಳಲ್ಲಿಯೇ ಪರಸ್ಪರ ಒಪ್ಪಿ ವಿಚ್ಚೇದನಕ್ಕೆ ಮುನ್ನುಡಿಯನ್ನು ಬರೆದುಕೊಳ್ಳುತ್ತಿರುವ ಬಗೆಯನ್ನು ಕಂಡರೆ ಆಶ್ಚರ್ಯವೆನಿಸುತ್ತದೆ.

ಈ ಕಾಲದಲ್ಲಿ ಮದುವೆ ತುಂಬಾ ಕಠಿಣ ವಿಚ್ಚೇದನೆ ಅತೀ ಸರಳ ಅನಿಸುತ್ತಿದೆ. ಒಂದು ಕಾಲದಲ್ಲಿ ಭಾರತೀಯ ಸಂಸ್ಕೃತಿಯಲ್ಲಿ ವಿಚ್ಚೇದನೆ ಅಪರಾಧ ಎಂಬ ನಂಬಿಕೆ ಇತ್ತು. ಆದರೆ ಅದು ಇಂದು ಮುಕ್ತ ಅವಕಾಶ. ವಿಚ್ಚೇದನೆ ಪಡೆಯಲೇ ಬಾರದು ಎಂಬುದು ನನ್ನ ಅಭಿಪ್ರಾಯವಲ್ಲ. ಕೆಲವೊಂದು ಸಕಾರಣಗಳಿಂದ ಕಾನೂನಿನಲ್ಲಿ ವಿಚ್ಚೇದನಕ್ಕೆ ಅವಕಾಶವಿದೆ. ಆದರೆ, ಇಂದು ಹಣ, ಅಧಿಕಾರ, ಆಸ್ತಿ, ಸಂಪತ್ತು, ಹೆಸರು, ಕೀರ್ತಿ ಮತ್ತು ಜನಪ್ರಿಯತೆ ವಿಷಯಗಳಲ್ಲಿ ದುರಾಸೆ ದುಷ್ಟ ಶಕ್ತಿಯಾಗಿ ನಿಂತಾಗ ಅದರ ಕಪಿಮುಷ್ಟಿಗೆ ಸಿಕ್ಕು ಎಲ್ಲೋ ಒಂದು ಕಡೆಗೆ ಪ್ರೀತಿ ಸೋಲುತ್ತಿದೆ ಎಂದೆನಿಸುತ್ತಿದೆ. ಒಂದು ಕಾಲದಲ್ಲಿ ಪ್ರೀತಿಯನ್ನು ಪೂಜ್ಯನೀಯ ಭಾವದಿಂದ ಕಂಡ ಮನಸ್ಸುಗಳು ನಮಗೆಲ್ಲ ಸ್ಪೂರ್ತಿ ಎನಿಸುತ್ತದೆ.

ಬೆಳ್ಳಿ ಬಂಗಾರವಿದ್ದರೇನು ಹೊಲ ಮನೆ ಇದ್ದರೇನು ಬ್ಯಾಂಕ್ ಬ್ಯಾಲೆನ್ಸ ಎಷ್ಟಿದ್ದರೇನು ಮನಸು ಮನಸುಗಳ ನಡುವೆ ಪ್ರೀತಿ ಇಲ್ಲ ಎಂದರೆ ಜೀವನದಾಗ ಏನು ಐತಿ ಗೆಳತಿ ಪ್ರೀತಿಯೆಂದರೆ ಹಿಂಗಿರಬೇಕು ರಾತ್ರಿ ಹಗಲು ನಗುತಿರಬೇಕು. ಇಂದು ಈ ಮನೋಭಾವನೆಯು ಮನಸ್ಸುಗಳನ್ನು ನಾವೆಲ್ಲ ದೀಪ ಹಚ್ಚಿ ಹುಡುಕಬೇಕಾಗಿದೆ. ಪ್ರೀತಿಗೆ ಸಲ್ಲಬೇಕಾದ ಗೌರವ ಘನತೆಗೆ ನಾವೆಲ್ಲ ತಕ್ಕ ನ್ಯಾಯ ಒದಗಿಸಬೇಕಾಗಿದೆಯಲ್ಲವೇ ಎಂಬ ಆತ್ಮಸಾಕ್ಷಿಯ ಪ್ರಜ್ಞೆ ಕಾಡದೇ ಇರಲಾರದು. ಈ ನಾಡಿನ  ಹೆಸರಾಂತ ವರಕವಿ ಬೇಂದ್ರೆಯವರು ಬಡತನದಲ್ಲಿಯೂ ಪ್ರೀತಿಗೆ ಬೆಲೆಕಟ್ಟಿ ಅದನ್ನು ಆರಾಧಿಸಿದ ಬಗೆ ಯುವ ಜನಾಂಗಕ್ಕೆ ಸ್ಪೂರ್ತಿ. ಅವರ ಈ ಕೆಳಗಿನ ಕವಿತೆಯ ಸಾಲುಗಳು ಪ್ರೀತಿಯ ಶಕ್ತಿಯನ್ನು ಪ್ರದರ್ಶಿಸುತ್ತವೆ.

ಆತ ಬಡವ ನಾನು ಬಡವಿ ಒಲುಮೆ ನಮ್ಮ ಬದುಕು ಆತ ಕೊಟ್ಟ ವಸ್ತ್ರ ಒಡವೆ ನನಗೆ ಅವಗೆ ಗೊತ್ತು ತೋಳುಗಳಿಗೆ ತೋಳು ಬಂಧಿ ಕೆನ್ನೆ ತುಂಬ ಮುತ್ತು ಎಂಬ ಪರಮ ಪಂಕ್ತಿಗಳು ಪ್ರೀತಿ ಎಂದರೆ ಬಳಸಿಕೊಳ್ಳುವುದಲ್ಲ ಅದು ಉಳಿಸಿಕೊಳ್ಳುವುದು ಎಂಬ ಪರಮ ಸತ್ಯವನ್ನು ದರ್ಶನ ಮಾಡಿಸುತ್ತವೆ. ರಾಷ್ಟ್ರ ಕವಿ ಕುವೆಂಪು, ಕೆ.ಎಸ್. ನರಸಿಂಹಸ್ವಾಮಿ, ಜಿ.ಎಸ್. ಶಿವರುದ್ರಪ್ಪ ,ಕೆ.ಎಸ್. ನಿಸಾರ ಅಹ್ಮದ್, ದಿನಕರ ದೇಸಾಯಿ ಹಾಗೂ ದುಂಡಿರಾಜ್ರಂತಹ ಮೊದಲಾದ ಪ್ರೇಮ ಕವಿಗಳ ಕವಿತೆಗಳು ಪ್ರೀತಿಯ ಪರಾಕಾಷ್ಟೆಗೆ ವೇದಿಕೆಯಾಗಿ ನಿಲ್ಲುತ್ತವೆ.

ಕಾಪಾಡಬೇಕಾದ ಪ್ರೀತಿ ಇವತ್ತು ಕೊಲ್ಲಲ್ಲು ಮುಂದಾದ ರೀತಿಯನ್ನು ನೋಡಿದರೆ ಅದು ಪ್ರೀತಿಯೇ ಅಲ್ಲ. ಕೇವಲ ಒಂದು ಆವೇಶ ಮತ್ತು ಕಾಮದ ದಾಹ ಎಂದೆನಿಸುತ್ತದೆ. ಪ್ರೀತಿ ಎಂಬ ಪರಿಧಿಯೊಳಗೆ ನಿಂತು ಕ್ಷಣದ ಸುಖದ ಸಮಯ ಕಳೆಯುವ ಚಿಂತನೆಯಲ್ಲಿ ಪೇಟಿಯಂ, ಎಟಿಯಂ, ಪೋನ್ ಪೇ, ಗೂಗಲ್ ಪೇ ಬಳಕೆಗಳಲ್ಲಿ ಹಣ ಖಾಲಿಯಾದಾಗ ಪರಸ್ಪರ ಕೈಕೊಟ್ಟು ದೂರ ಸರಿದು, ಅಗತ್ಯಕ್ಕಾಗಿ ಮತ್ತು ಸ್ವಾರ್ಥಕ್ಕಾಗಿ ಅನ್ಯ ಮನಸ್ಸಿನ ಬೆನ್ನು ಬೀಳುವ ಕೆಲವು ವ್ಯಕ್ತಿತ್ವಗಳಿಂದ ಪ್ರೀತಿ ಹೆಸರಿನಲ್ಲಿ ಶೋಷಣೆಗೆ ಒಳಗಾಗುವ ಯುವಕ ಯುವತಿಯರ ಸಂಖ್ಯೆ ಏರುತ್ತಲ್ಲೇ ಇರುವುದನ್ನು ಗಮನಿಸಿದಾಗ ನೋವಾಗುತ್ತದೆ.
ಪ್ರೀತಿಸಿದವರನ್ನೇ ಕತ್ತರಿಸಿ ತರಕಾರಿಯಂತೆ ಫ್ರಿಜ್ಡ್‌ನಲ್ಲಿ ಇಟ್ಟಂತಹ ವಿಕೃತ ಮನಸ್ಸಿನ ಕೌರ್ಯ ಪ್ರೀತಿಯನ್ನು ಕ್ಷಮಿಸುವುದಲ್ಲ, ನೆನಪಿಸಿಕೊಳ್ಳಲು ಸಾಧ್ಯವಿಲ್ಲ.

ವಿಮರ್ಶೆಯ ಹೆಜ್ಜೆಯಲ್ಲಿ
ಡಾ. ಎಫ್.ಡಿ.ಗಡ್ಡಿಗೌಡರ
ವಿಮರ್ಶಕರು, ಬೈಲಹೊಂಗಲ
೬೩೬೧೩೫೭೧೧೬

 

WhatsApp Group Join Now
Telegram Group Join Now
Share This Article