ಬೆಂಗಳೂರು: ಇತ್ತೀಚೆಗಷ್ಟೇ ನಗರದ ವಿವಿಧೆಡೆ ಬಿಬಿಎಂಪಿ ಕಚೇರಿಗಳಿಗೆ ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತರು ದಿಢೀರ್ ಕಾರ್ಯಾಚರಣೆ ಕೈಗೊಂಡ ಹಲವು ಲೋಪದೋಷಗಳನ್ನು ಬಯಲಿಗೆಳೆದಿದ್ದರು. ಇದರ ಬೆನ್ನಲ್ಲೇ ಮತ್ತೆ ಬಿಬಿಎಂಪಿ ಕಚೇರಿಗಳ ಮೇಲೆ ದಾಳಿ ನಡೆಸಿ, ನ್ಯೂನತೆಗಳನ್ನು ಬಹಿರಂಗಪಡಿಸಿದ್ದಾರೆ.
ಗುರುವಾರ ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ನೇತೃತ್ವದಲ್ಲಿ 12 ತಂಡಗಳು ಮತ್ತೆ ಬಿಬಿಎಂಪಿ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿತು.
ವಿಜಯನಗರ, ವಸಂತನಗರ, ಗಾಂಧಿನಗರ, ಶಿವಾಜಿನಗರ, ಗೋವಿಂದರಾಜನಗರ ಕಂದಾಯ ಅಧಿಕಾರಿಗಳ ಮತ್ತು ಸಹಾಯ ಕಂದಾಯ ಅಧಿಕಾರಿಗಳ ಕಚೇರಿಗಳಿಗೆ ಭೇಟಿ ನೀಡಿ, ಬಿಬಿಎಂಪಿ ಸಿಬ್ಬಂದಿಗಲ ಕಾರ್ಯವೈಖರಿಯನ್ನು ಪರಿಶೀಲನೆ ನಡೆಸಿದರು. ಸಿಬ್ಬಂದಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯತನಕ್ಕೆ ನ್ಯಾ.ಕೆ.ಎನ್.ಫಣೀಂದ್ರ ಅವರು ಗರಂ ಆದರು.
ಪರಿಶೀಲನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನ್ಯಾ.ಕೆ.ಎನ್.ಫಣೀಂದ್ರ ಅವರು, ಕಚೇರಿಗಳಲ್ಲಿ ಅಧಿಕಾರಿಗಳು ಹಾಜರಾತಿ ದಾಖಲಾತಿ, ರಿಜಿಸ್ಟರ್ ಮತ್ತು ನಗದು ಘೋಷಣೆ ರಿಜಿಸ್ಟರ್ ನಿರ್ವಹಣೆ ಮಾಡಿಲ್ಲ, ಕಡ್ಡಾಯವಾಗಿದ್ದರೂ ರಿಜಿಸ್ಟರ್ಗಳನ್ನು ಏಕೆ ನಿರ್ವಹಿಸಿಲ್ಲ ಎಂಬುದಕ್ಕೆ ಸರಿಯಾದ ಕಾರಣವನ್ನೂ ನೀಡುವ ಸ್ಥಿತಿಯಲ್ಲಿಲ್ಲ ಎಂದು ಹೇಳಿದರು.