ಹುನಗುಂದ: ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ಅಡ್ಡೆಯ ಮೇಲೆ ಶುಕ್ರವಾರ ಹಠಾತ್ ದಾಳಿ ನಡೆಸಿದ ಬೆಂಗಳೂರು ಲೋಕಾಯುಕ್ತ ಚಿತ್ತವಾಡಗಿಯಲ್ಲಿ ಮರಳು ತುಂಬುತ್ತಿದ್ದ ಇವುಗಳನ್ನು ನಡೆಸುತ್ತಿದ್ದ ಮೂವರು ಚಾಲಕರನ್ನು ವಶಕ್ಕೆ ಪಡೆದು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ.
ಸಮೀಪದ ಚಿತ್ತವಾಡಗಿ ಹಳ್ಳದ ಪಕ್ಕ ಖಾಸಗಿ ವ್ಯಕ್ತಿಯ ಜಮೀನಿನಲ್ಲಿ ಆಕ್ರಮವಾಗಿ ತೆಗೆಯುತ್ತಿದ್ದ ಮರಳು ಅಡ್ಡೆಯ ಮೇಲೆ ಬೆಳಗ್ಗೆ ೧೧ ಗಂಟೆಯ ಸುಮಾರಿಗೆ ಬೆಂಗಳೂರ ಲೋಕಾಯುಕ್ತ ಎಸ್.ಬಿ.ಪಾಟೀಲ ನೇತೃತ್ವದ ತಂಡ ಹಠಾತ್ ದಾಳಿ ಮಾಡಿದಾಗ ಮೂವರು ಮಾತ್ರ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದು ಕೆಲವಷ್ಟು ಜನ ಓಡಿ ಹೋಗಿದ್ದಾರೆ.
ಸ್ಥಳದಿಂದಲೇ ಅಧಿಕಾರಿಗಳಿಗೆ ಕರೆ ಮಾಡಿದ್ದರಿಂದ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ, ಗಣಿ ಮತ್ತು ಭೂವಿಜ್ಞಾನಿ ಅಧಿಕಾರಿ ಶ್ರಾವಣಿ, ಹುನಗುಂದ ಪಿಎಸ್‌ಐ, ಸಿದ್ಧಾರೂಡ ಆಲದಕಟ್ಟಿ ಸ್ಥಳಕ್ಕೆ ಧಾವಿಸಿದರು. ನಾಲ್ಕು ಟಿಪ್ಪರ್, ೩ ಜೆಸಿಬಿ ಹಾಗೂ ಕೈಗೆ ಸಿಕ್ಕ ಮೂವರು ವ್ಯಕ್ತಿಗಳನ್ನು ಪೊಲೀಸ್ ವಶಕ್ಕೆ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಅಕ್ರಮವಾಗಿ ಮರಳು ತೆಗೆದ ಸ್ಥಳದ ಅಳತೆ ಮಾಡಿ ಎಷ್ಟು ಪ್ರಮಾಣದ ಮರಳು ತೆಗೆಯಲಾಗಿದೆ ಇದರಿಂದ ಸರ್ಕಾರಕ್ಕೆ ಆದ ನಷ್ಟ ಎಷ್ಟು ಎಂಬ ವರದಿ ನೀಡುವಂತೆ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗೆ ಸೂಚಿಸಿದರೆ, ಈ ಜಮೀನು ಯಾರದು ಎಂಬುದನ್ನು ಗುರುತಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠರಿಗೆ ಹೇಳಿದರು.
ಮಾಹಿತಿ ನೀಡದ ಅಧಿಕಾರಿಗಳು: ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಹೋಗಿದ್ದಾರೆ. ಯಾವ ಅಧಿಕಾರಿಗೆ ಏನು ನಿರ್ದೇಶನ ನೀಡಬೇಕೋ ಸ್ಪಷ್ಟವಾಗಿ ನೀಡಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಕಂದಾಯ, ಗಣಿ ಮತ್ತು ಭೂವಿಜ್ಞಾನ, ಪೊಲೀಸ್ ಇಲಾಖೆ ಅಧಿಕಾರಿಗಳು ಮಾತ್ರ ಯಾವುದೇ ಮಾಹಿತಿ ನೀಡುತ್ತಿಲ್ಲ. ಗಣಿ ಮತ್ತು ಭೂವಿಜ್ಞಾನ ಅಧಿಕಾರಿ ಶ್ರಾವಣಿ ದೂರವಾಣಿ ಕರೆಯನ್ನೇ ಸ್ವೀಕರಿಸುತ್ತಿಲ್ಲ. ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಯಾವುದೇ ಮಾಹಿತಿ ನೀಡಲು ಆಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇನ್ನು ಪಿಎಸ್‌ಐ, ಸಿದ್ದಾರೂಡ ಆಲದಕಟ್ಟಿ ಅವರ ಉತ್ತರ ವಿಚಿತ್ರವಾಗಿದೆ. ಅಬಕಾರಿ ಸೇರಿದಂತೆ ಯಾವುದೇ ಇಲಾಖೆ ಅಧಿಕಾರಿಗಳು ವಾಹನಗಳನ್ನು ಜಪ್ತ ಮಾಡಿದಾಗ ಠಾಣೆಯಲ್ಲಿ ತಂದು ನಿಲ್ಲಿಸುತ್ತಾರೆ. ಅದರಂತೆ ಲೋಕಾಯುಕ್ತರು ವಶಪಡಿಸಿಕೊಂಡ ವಾಹನಗಳನ್ನು ನಿಲ್ಲಿಸಲಾಗಿದೆ. ಇದನ್ನು ಬಿಟ್ಟು ಇತರ ವಿಷಯ ಗೊತ್ತಿಲ್ಲ ಎಂದಿದ್ದಾರೆ. ಪೊಲೀಸ್ ಕಾವಲು: ಅಕ್ರಮ ಮರಳು ಅಡ್ಡೆಯಲ್ಲಿ ಇದ್ದ ನಾಲ್ಕು ಟಿಪ್ಪರ್ ಹುನಗುಂದ ಪೊಲೀಸ್ ಠಾಣೆಯಲ್ಲಿ ಇದ್ದರೆ, ಎರಡು ಜೆಸಿಬಿಗಳು ಮರಳು ಅಡ್ಡೆಯ ಸ್ಥಳದಲ್ಲಿಯೇ ಇರುವುದರಿಂದ ಅಲ್ಲಿ ಪೊಲೀಸ್ ಕಾವಲು ನಿಯೋಜಿಸಲಾಗಿದೆ.


