*ಹುಚ್ಚು ಹಿಡಿಯುವುದು ಮನುಷ್ಯನಿಗೆ ಮಾತ್ರ-ಕಾಡು ಪ್ರಾಣಿಗಳಿಗೆ ಹುಚ್ಚು ಹಿಡಿಯಲ್ಲ
*ಆತ್ಮಹತ್ಯೆಯ ಗುಣ ಇರುವುದೂ ಮನುಷ್ಯನಲ್ಲಿ ಮಾತ್ರ: ಕಾಡು ಪ್ರಾಣಿಗಳಿಗಿಲ್ಲ
*ಮೊಬೈಲ್ ಮತ್ತು ರಿಮೋಟ್ ಕೈಗೆ ಜೀವನೋತ್ಸಾಹ ಬಲಿ ಕೊಡಬಾರದು
*”ಜೀವನೋತ್ಸಾಹ” ಶಿಬಿರದಲ್ಲಿ ಕೆ.ವಿ.ಪ್ರಭಾಕರ್ ಅಭಿಮತ
ಬಿಳಿಗಿರಿರಂಗನಬೆಟ್ಟ ಮೇ 23: ಇಂದು ಮನೆಗಳಲ್ಲಿ ಕೊಠಡಿಗಳು ಹೆಚ್ಚಾಗುತ್ತಾ, ಮನಸ್ಸುಗಳು ದೂರವಾಗುತ್ತಾ ಮೊಬೈಲ್ ಮತ್ತು ರಿಮೋಟ್ ಕೈಗೆ ಜೀವನೋತ್ಸಾಹ ಬಲಿ ಕೊಡುತ್ತಿದ್ದೇವೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ನುಡಿದರು.
ಸುತ್ತೂರು ಶ್ರೀಕ್ಷೇತ್ರ, ಜಗದ್ಗರು ವೀರಸಿಂಹಾಸನ ಮಹಾಸಂಸ್ಥಾನ ಮಠ ಆಯೋಜಿಸಿದ್ದ “ಜೀವನೋತ್ಸಾಹ” ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೃದ್ದಾಶ್ರಮಗಳು, ಆಸ್ಪತ್ರೆಗಳು ಹೆಚ್ಚಾಗುತ್ತಿರುವುದು ಆರೋಗ್ಯಕರ ಸಮಾಜದ ಲಕ್ಷಣ ಅಲ್ಲ. ದುಡಿಮೆ, ಹಣ ಪರಿಹಾರವಾಗುವ ಬದಲಿಗೆ, ಸಮಸ್ಯೆ ಮಾಡಿಕೊಂಡಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಕೃತಿಯ ಮಡಿಲಿನಲ್ಲಿರುವ ಬಿಳಿಗಿರಿರಂಗನ ಬೆಟ್ಟದಲ್ಲಿ “ಜೀವನೋತ್ಸಾಹ ಶಿಬಿರ”ವನ್ನು ಶ್ರೀಮಠ ಆಯೋಜಿಸಿರುವುದು ಹೆಚ್ಚು ಅರ್ಥಪೂರ್ಣವಾಗಿದೆ. ನಾನು ಕಾಂಕ್ರೀಟ್ ಕಾಡಿನಿಂದ ಹೊರಟು, ಪ್ರಕೃತಿಕ ಸಾಲಿನಲ್ಲಿ ಈ ಬೆಟ್ಟಕ್ಕೆ ಬರುವಾಗ ನನಗೆ ಅನ್ನಿಸಿದ್ದು, ಪ್ರಕೃತಿಯೆ ಜೀವನೋತ್ಸಾಹದ ಚಿಲುಮೆ ಆಗಿದೆ ಎಂದು ಬಣ್ಣಿಸಿದರು.
ಹುಚ್ಚು ಹಿಡಿಯೋದು ಮನುಷ್ಯನಿಗೆ ಮತ್ತು ಮನುಷ್ಯನ ಸಹವಾಸದಲ್ಲಿರುವ ಪ್ರಾಣಿಗಳಿಗೆ ಮಾತ್ರ. ಮನುಷ್ಯನಿಗೆ ಹುಚ್ಚಾಸ್ಪತ್ರೆಗಳಿವೆ. ಕಾಡು ಪ್ರಾಣಿಗಳಿಗೆ ಅಂತ ಹುಚ್ಚಾಸ್ಪತ್ರೆ ಇರುವುದು ನನಗಂತೂ ಗೊತ್ತಿಲ್ಲ.
ಹಾಗೆಯೇ ಜೀವನದ ಸವಾಲುಗಳನ್ನು ಎದುರಿಸಲಾಗದೆ ಆತ್ಮಹತ್ಯೆಗೆ ಶರಣಾಗುವ ಪ್ರವೃತ್ತಿ ಇರುವುದೂ ಕೂಡ ಮನುಷ್ಯನಲ್ಲೇ ಎಂಥಾದ್ದೇ ಕಠಿಣ ಸಂದರ್ಭವನ್ನೂ ಜೀರ್ಣಿಸಿಕೊಂಡು ಬದುಕುವುದನ್ನು ಪ್ರಕೃತಿ ನಮಗೆ ಕಲಿಸುತ್ತದೆ. ಎಂಥಾದ್ದೇ ಭೀಕರ ಬರಗಾಲ, ಪ್ರವಾಹ, ಮಳೆ, ಗಾಳಿ, ಬೆಂಕಿ, ಕಾಡ್ಗಿಚ್ಚು ಬಂದರೂ ಪ್ರಕೃತಿ ಮತ್ತೆ ತಲೆ ಎತ್ತಿ ನಿಲ್ಲುತ್ತದೆ.ಕತ್ತಲಾದ ಮೇಲೆ ಮತ್ತೆ ಬೆಳಕು ಆಗಲೇ ಬೇಕು ಎನ್ನುವುದು ಪ್ರಕೃತಿಯ ನಿಯಮ. ಹಾಗೆಯೇ ಮನುಷ್ಯ ಜೀವನದಲ್ಲೂ ಕಷ್ಟದ ಸಂದರ್ಭಗಳು ಬರಬಹುದು, ಆ ಸಂದರ್ಭಗಳೂ ಅಳಿಸಿ ಹೋಗುತ್ತವೆ ಎನ್ನುವುದರ ಸಂಕೇತ ಇದು ಎಂದರು.
ಎಲ್ಲಕ್ಕಿಂತ ” ಪರಸ್ಪರತೆ ಇದ್ದರೆ ಮಾತ್ರ ಹೆಚ್ಚು ಗಟ್ಟಿಯಾಗಿ ಬೇರು ಬಿಡಬಹುದು, ಕೂಡಿ ಬಾಳಬಹುದು ಎನ್ನುವ ಪಾಠ ಪ್ರಕೃತಿಯಲ್ಲಿದೆ. ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವುದು, ನಮ್ಮ ಸಂತೋಷ, ದುಃಖ ಮತ್ತು ಭಯ, ಅಭದ್ರತೆಗಳ ನಡುವೆಯೂ ನಾವು ಸಮಾಧಾನದಿಂದ ಜೀವನ ರೂಪಿಸಿಕೊಳ್ಳಬಹುದು ಎನ್ನುವ ಭರವಸೆ ನಮಗೆ ಪ್ರಕೃತಿಯಿಂದ ಸಿಗುತ್ತದೆ. ಪಕ್ಷಿಗಳು ಎಲ್ಲೋ ಹಣ್ಣು ತಿಂದು ಇನ್ನೆಲ್ಲೋ ಬೀಜಗಳನ್ನು ವಿಸರ್ಜಿಸುತ್ತವೆ. ಆ ಬೀಜಗಳು ಬಿದ್ದ ಜಾಗದಲ್ಲೇ ಮೊಳಕೆಯೊಡೆಯುತ್ತವೆ ಎಂದರು.
ಸಣ್ಣ ರಾಗಿ ಕಾಳು, ಇದರೊಳಗೆ ಮೊಳಕೆಯೊಡೆಯುವ ಶಕ್ತಿ ಇದ್ದರೆ ಅದು ಭೂಮಿಯನ್ನೇ ಸೀಳಿಕೊಂಡು ಮೇಲೆ ಬರುತ್ತದೆಯೇ ಹೊರತು, ಭೂಮಿ ಗಟ್ಟಿಯಾಗಿದೆ ಎಂದು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ.ಜಿಂಕೆ, ನವಿಲುಗಳು ಹುಲಿ, ಚಿರತೆಗಳಿಗೆ ಹೆದರಿ ಊಟ ಬಿಡುವುದಿಲ್ಲ, ಡಿಪ್ರೆಷನ್ ಗೆ ಹೋಗುವುದಿಲ್ಲ. ಎಲ್ಲಾ ಅಪಾಯಗಳ ನಡುವೆಯೂ ಬದುಕುಳಿಯುತ್ತವೆ, ಜೀವನೋತ್ಸಾಹ ಕಳೆದುಕೊಳ್ಳುವುದಿಲ್ಲ.ಯಾವುದೇ ಒಂದು ಬೆಳವಣಿಗೆ ಮತ್ತು ಬದಲಾವಣೆ ಆತುರದಿಂದ ಆಗಲು ಸಾಧ್ಯವಿಲ್ಲ. ಅವುಗಳಿಗೆ ಸಮಯ, ಪೋಷಣೆ ಮತ್ತು ಪರಿಶ್ರಮ ಬೇಕಾಗುತ್ತದೆ.ವೇಗದ ಜಗತ್ತಿನಲ್ಲಿ, ಪ್ರಕೃತಿಯು ನಮ್ಮೊಂದಿಗೆ ಮತ್ತು ಇತರರೊಂದಿಗೆ ತಾಳ್ಮೆಯಿಂದಿರಲು ನೆನಪಿಸುತ್ತದೆ ಎಂದರು.
ನಮ್ಮ ಹಾಡು, ಸಂಗೀತ, ನೃತ್ಯ, ಚಿತ್ರಕಲೆ ಎಲ್ಲಕ್ಕೂ ಪ್ರಕೃತಿಯೇ ಮೂಲ ಧಾತುವಾಗಿದೆ. ನವಿಲಿನ ಕುಣಿತ ನೃತ್ಯಕ್ಕೆ ಮೂಲವಾದರೆ, ಬೀಸುವ ಗಾಳಿಯ ನಾದ ಸಂಗೀತದ ಮೂಲ, ಮಳೆ ನೀರಿನ ಸದ್ದು- ಹಕ್ಕಿಗಳ ಚಿಲಿಪಿಲಿ ಹಾನಡಿ ಮೂಲ, ಜಲಪಾತ, ನೀರಿನ ತೊರೆಗಳು, ಜಿಂಕೆಯ ಓಟ ಚಿತ್ರಕಲೆಗೆ ಮೂಲ ಸ್ಫೂರ್ತಿ…
ಹೀಗಾಗಿ ಪ್ರಕೃತಿಯಿಂದ ಬೇರ್ಪಟ್ಟವನು ಹುಚ್ಚನಾಗುತ್ತಾನೆ, ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಪರಿಸರದಲ್ಲಿ ಸಮತೋಲನ ತಪ್ಪಿದ್ದರಿಂದ ನೂರಾರು ರೀತಿಯ ವೈರಸ್ ಗಳು, ಬ್ಯಾಕ್ಟೀರಿಯಾಗಳು ಸೃಷ್ಟಿ ಆಗುತ್ತಿವೆ. ಕೋವಿಡ್, ಆಂಥ್ರಾಕ್ಸ್ ರೋಗಗಳು ಬರಲು ಪ್ರಕೃತಿಕ ಸಮತೋಲನ ತಪ್ಪಿದ್ದೇ ಕಾರಣ ಎಂದು ಜೀವ ವಿಜ್ಞಾನಿಗಳು ಎಚ್ಚರಿಸಿದ್ದನ್ನು ನಾವು ನೆನಪಿಸಿಕೊಳ್ಳಬೇಕು ಎಂದರು. ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕವಿತಾ, ಕೆಪಿಎಸ್ಸಿ ಸದಸ್ಯರಾದ ಪ್ರಭುದೇವ, ಹಿರಿಯ ಕಲಾವಿದ ಮುಖ್ಯಮಂತ್ರಿ ಚಂದ್ರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.