ಮಕ್ಕಳಿಗೆ ಮುದ ನೀಡಿದ ಸಾಹಿತ್ಯ ಸವಿ ಕಾರ್ಯಕ್ರಮ

Ravi Talawar
ಮಕ್ಕಳಿಗೆ ಮುದ ನೀಡಿದ ಸಾಹಿತ್ಯ ಸವಿ  ಕಾರ್ಯಕ್ರಮ
WhatsApp Group Join Now
Telegram Group Join Now

ಗದಗ 28 : ಅಖಿಲ ಕರ್ನಾಟಕ ಕಬ್ಬಿಗರ ಕೂಟವು ಗದಗ ಸಾಹಿತ್ಯ ಪರಿಸರದಲ್ಲಿ ನಡೆಸಿದ ಹಲವಾರು ವಿಭಿನ್ನ ವಿಶಿಷ್ಠ ಹಾಗೂ ವಿನೂತನ
ಕಾರ್ಯಕ್ರಮಗಳ ಮುಂದುವರಿಕೆಯಾಗಿ ಮುಂದಿನ ವರ್ಷ ೫೦ ವರ್ಷಗಳು ಕಬ್ಬಿಗರ ಕೂಟಕ್ಕೆ ಪೂರ್ಣಗೊಳ್ಳಲಿರುವ ಸವಿ ನೆನಪಿಗಾಗಿ
ಆರಂಭಿಸಿದ ಮಕ್ಕಳಿಗಾಗಿ ಸಾಹಿತ್ಯ ಸವಿ ವಿಶೇಷ ಕಾರ್ಯಕ್ರಮದ ಮೊಟ್ಟ ಮೊದಲ ಕಾರ್ಯಕ್ರಮ ದಿ. ೨೫ ರಂದು ಕಬ್ಬಿಗರ ಕೂಟದ ಸಾಹಿತ್ಯ ಭವನದಲ್ಲಿ ಚಾಲನೆಗೊಂಡಿತು.

ಪರಮ್ ಕೋಚಿಂಗ್ ಸೆಂಟರ್ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ೪೦ ಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡು ಸಾಹಿತಿಗಳು, ಶಿಕ್ಷಣ ತಜ್ಞರು, ಸಾಹಿತ್ಯ ಚಿಂತಕರ ಸವಿನುಡಿಗಳನ್ನು ಆಲಿಸಿ ವಿಶಿಷ್ಠ ಸಾಹಿತ್ಯಾನುಭೂತಿಯನ್ನು ಪಡೆದರು. ಅತ್ಯಂತ ಸರಳ ಮತ್ತು ವಿಶಿಷ್ಠ ರೀತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ಕಬ್ಬಿಗರ ಕೂಟದ ಅಧ್ಯಕ್ಷ ನ್ಯಾಯವಾದಿ ನೋಟರಿ ಮನೋಹರ ಮೇರವಾಡೆಯವರು ಸಾಹಿತ್ಯ ಸವಿ ಕಾರ್ಯಕ್ರಮದ ವಿಶೇಷತೆ ಬಗ್ಗೆ ವಿವರಿಸಿ ಮುಂದಿನ ಒಂದು ವರ್ಷ ಕಾಲ ಜಿಲ್ಲೆಯಾದ್ಯಂತ ಶಾಲಾ ಮಕ್ಕಳಿಗೆ ಸಾಹಿತ್ಯ ಸವಿ ಪರಿಚಯಿಸುವ ಉದ್ದೇಶವನ್ನು ಕಬ್ಬಿಗರ ಕೂಟ ಹೊಂದಿದೆ ಎಂದು ತಿಳಿಸಿದರು.

ಕಬ್ಬಿಗರ ಕೂಟ ೪೯ ವರ್ಷಗಳಿಂದ ನಡೆದು ಬಂದ ಹಾದಿ ಸದಸ್ಯರು ಮತ್ತು ಸಾಹಿತ್ಯಾಭಿಮಾನಿಗಳ ಸಹಕಾರದಿಂದ ಸಾಹಿತ್ಯಿಕ
ವಾತಾವರಣ ಮೂಡಿಸಲು ನಡೆಸಿದ ಹೋರಾಟ ಸರಕಾರ ಮತ್ತು ರಾಜಕಾರಣಿಗಳ ಮುಂದೆ ಕೈಯೊಡ್ಡದೇ ಸ್ವಾಭಿಮಾನಿ ಕನ್ನಡ
ಸಂಸ್ಥೆಯಾಗಿ ಕಬ್ಬಿಗರ ಕೂಟ ಬೆಳೆದು ಬಂದ ಕಠೀಣ ಹಾದಿಯ ಪರಿಚಯ ನೀಡಿದರು.

ಕಬ್ಬಿಗರ ಕೂಟದ ಸಂಸ್ಥಾಪಕ, ಸಾಹಿತಿ ಡಿ.ವಿ. ಬಡಿಗೇರ ಮಾತನಾಡಿ ಸಾಹಿತ್ಯ ಸವಿ ಕಾರ್ಯಕ್ರಮದ ಮಹತ್ವ ಅದರಲ್ಲೂ ಮಕ್ಕಳಲ್ಲಿ
ಅವಶ್ಯವಾಗಿ ರೂಢಿಗೊಳ್ಳಬೇಕಾದ ಸಾಹಿತ್ಯ ಕಲೆ, ಸಂಸ್ಕೃತಿ ಕುರಿತಾದ ಅಭಿರುಚಿ ಬಗ್ಗೆ ಮಾತನಾಡಿ ಕಬ್ಬಿಗರ ಕೂಟ ಒಂದು ವಿಶೇಷ
ಆಂಧೋಲನದ ರೀತಿಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು. ಈ ಕಾರ್ಯಕ್ರಮದ ಯಶಸ್ಸಿಗೆ ಅನುಭವಿ ಶಿಕ್ಷಕರು, ಶಿಕ್ಷಣ
ಸಂಸ್ಥೆಗಳು, ಪಾಲಕರು ಸಹಕರಿಸಬೇಕಾದ ಅವಶ್ಯಕತೆ ಕುರಿತು ವಿವರಿಸಿದರು.

ಉದಿತೋದಿತ ಮನಸ್ಸುಗಳಲ್ಲಿ ಸಾಂಸ್ಕೃತಿಕ ಪ್ರಜ್ಞೆಯನ್ನು ಬಿತ್ತದೆ ಹೋದರೆ ಭವಿಷ್ಯದಲ್ಲಿ ಮಕ್ಕಳ ಹವ್ಯಾಸಗಳಲ್ಲಿ ಸನ್ನಡತೆ, ಸಜ್ಜನಿಕೆ ಮರಿಚಿಕೆಯಾಗಬಹುದೆಂದು ಅವರು ಹೆಚ್ಚರಿಸಿದರು. ಸಸಿ ಇದ್ದಾಗಲೇ ಉತ್ತಮ ಬೆಳವಣಿಗೆಯ ರುಚಿ ಉಣಿಸಬೇಕೆಂದು ಹೇಳಿದ ಅವರು ವಿದ್ಯಾರ್ಥಿಯಾಗಿದ್ದಾಗ ಕುವೆಂಪು, ಮಾಸ್ತಿ, ಗೋಕಾಕ ಮುಂತಾದ ಜ್ಞಾನಪೀಠ ವಿಜೇತ ಸಾಹಿತಿಗಳು ಕಾವ್ಯ ರಚಿಸಿದ ಸಂದರ್ಭಗಳನ್ನು ಮನಮುಟ್ಟುವಂತೆ ತಿಳಿಸಿದರು.

ಬಿ.ಎಂ.ಶ್ರೀ, ವಿ.ಸಿ., ಟಿ.ಎಸ್. ವೆಂಕಣ್ಣಯ್ಯ, ಡಿ.ವಿ.ಜಿ. ಅವರಂತಹ ಮಹೋನ್ನತ ಜೀವಿಗಳ ಶಿಷ್ಯವಾತ್ಸಲ್ಯ ಇಂದಿನ ಶಿಕ್ಷಕರಲ್ಲಿ ಮೂಡಿ ಬಂದರೆ ಕುವೆಂಪು ಅವರಂತಹ ವಿದ್ಯಾರ್ಥಿಗಳು ಹೊರಹೊಮ್ಮಲು ಸಾಧ್ಯವೆಂದು ಹೇಳಿದರು. ಕುವೆಂಪು ವಿದ್ಯಾರ್ಥಿಯಾಗಿದ್ದಾಗಲೇ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದನ್ನು ಅವರು ಮಕ್ಕಳಿಗೆ ತಿಳಿಸಿ ಮಕ್ಕಳಲ್ಲಿ ಸಾಹಿತ್ಯದ ಬಗ್ಗೆ ಕೂತುಹಲ ಮೂಡಿಸಿದರು ಗದಗ ಪರಿಸರದ ಸಾಹಿತಿಗಳು, ಕವಿಗಳು, ಸಂಗೀತಗಾರರು, ಕಲಾಕಾರರ ಪರಿಚಯ ನೀಡಿ ಗದುಗಿನ ಸಾಂಸ್ಕೃತಿಕ ಹಿರಿಮೆಯನ್ನು ಮಕ್ಕಳಿಗೆ ಪರಿಚಯ ಮಾಡಿಕೊಟ್ಟರು.

ಪ್ರಸಿದ್ಧ ಕಥೆಗಾರ ಬಸವರಾಜ ಗಣಪ್ಪನವರ ಅವರು ಮಕ್ಕಳು ವಿದ್ಯಾರ್ಥಿ ಜೀವನದಲ್ಲಿ ಪಾಲಿಸಬೇಕಾದ ಉಪಯುಕ್ತ ಸಲಹೆಗಳನ್ನು
ವಿವರಿಸಿದರು. ನಿರಕ್ಷರಿಯಾದ ಸಾಲು ಮರದ ತಿಮ್ಮಕ್ಕ ಗಿಡಗಳನ್ನು ನೆಟ್ಟು ನೀರುಣಿಸಿ ಬೆಳೆಸಿ ಗಿಡಗಳ ತಾಯಿ ಎನಿಸಿದ್ದಲ್ಲದೇ ಪದ್ಮಶ್ರೀ
ಗೌರವಕ್ಕೆ ಪಾತ್ರವಾದದ್ದನ್ನು ಅವರು ತಿಳಿಸಿದರು.

ನಿವೃತ್ತ ಶಿಕ್ಷಕ ಎಸ್.ಎಸ್. ಮಲ್ಲಾಪೂರ ತಮ್ಮ ಶಿಕ್ಷಕ ವೃತ್ತಿಯ  ಸುದೀರ್ಘ ಅವನುಭವವನ್ನು ಮಕ್ಕಳೊಂದಿಗೆ ಹಂಚಿಕೊಂಡರು.
ವಿಜ್ಞಾನ ಗಣಿತ ಮುಂತಾದ ಕಠೀಣ ವಿಷಯಗಳನ್ನು ಮಕ್ಕಳಿಗೆ ಬೇಸರವಾಗದಂತೆ ಕಲಿಸುವ ಪರಿಶ್ರಮ ಕುರಿತು ಅವರು ವಿವರಿಸಿದರು.

ಮಕ್ಕಳನ್ನು ಪ್ರೀತಿಯಿಂದಲೇ ದಂಡಿಸಿ ಪಾಠ ಬೋಧಿಸಬೇಕೆಂದು ಶಿಕ್ಷಕ ವೃಂದಕ್ಕೆ ಮಾರ್ಗದರ್ಶನ ನೀಡಿದರು. ಮಕ್ಕಳು ಗುರುಗಳನ್ನು
ಗೌರವಿಸಲು ಕಲಿತಾಗ ವಿದ್ಯೆ ಒಲಿಯುವದೆಂದು ಉಪದೇಶಿಸಿದರು.

ಸಾಹಿತಿ ಬಿ.ಎಸ್. ಹಿಂಡಿಯವರು ಮಾತನಾಡಿ ತಾವು ಆರೋಗ್ಯ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದರೂ ಸಾಹಿತ್ಯದ ಒಲವು ಬೆಳೆಸಿಕೊಂಡ ಬಗ್ಗೆ ತಿಳಿಸಿ ಮಕ್ಕಳು ಯಾವುದೇ ಭಾಷೆ, ಯಾವುದೇ ಮಾಧ್ಯಮದಲ್ಲಿ ಓದಿದರು ಅದು ಬದುಕಿನ ಮಾರ್ಗ ಆದರೆ ಎಲ್ಲೆ ಇದ್ದರೂ ಏನೇಯಾಗಿದ್ದರೂ ಕನ್ನಡದ ಬಗೆಗಿನ ಅಭಿಮಾನ ಸದಾ ಇರಬೇಕೆಂದು ತಿಳಿಸಿದರು.

ಶಿಕ್ಷಕಿ ಮ್ಯಾಗೇರಿ ತಮ್ಮ ಮಧುರ ಕಂಠದಿಂದ ಮಕ್ಕಳಿಗೆ ನೀತಿ ಮೌಲ್ಯದ ಕವಿತೆಗಳನ್ನು ಹಾಡಿ ತೋರಿಸಿದರು. ವಿ.ಎಂ. ಪವಾಡಿಗೌಡರ, ಆರ್.ಡಿ. ಕಪ್ಪಲಿ, ಬಸವರಾಜ ವಾರಿ, ನಜೀರ ಸಂಶಿ ಮುಂತಾದವರು ತಮ್ಮ ಭಾವಪೂರ್ಣ ಕವಿತೆಗಳ ಮೂಲಕ ಮಕ್ಕಳ ಮನಸ್ಸಿಗೆ ಸಾಹಿತ್ಯ ಸವಿಯ ರುಚಿ ಉಣಿಸಿದರು.

ಪರಮ್ ಸಂಸ್ಥೆಯ ಮುಖ್ಯಸ್ಥ ಎಂ. ಎನ್. ಕುರಟ್ಟಿ, ಶಿಕ್ಷಕಿ  ಮಲ್ಲಮ್ಮ ಚಲುವನವರ, ಸಾಮಾಜಿಕ ಹೋರಾಟಗಾರ್ತಿ ಜಯಶ್ರೀ ಮೆರವಾಡೆ
ಮುಂತಾದವರು ಮಕ್ಕಳನ್ನು ಕುರಿತು ಮಾತನಾಡಿದರು.

WhatsApp Group Join Now
Telegram Group Join Now
Share This Article