ಗದಗ, ಸೆ. ೧೦ : ಸಾಕ್ಷರತೆಯು ಓದು-ಬರಹ ಸಂವಹನ ನಿರ್ಣಾಯಕ ಚಿಂತನೆಯೊಂದಿಗೆ ಸಮಾಜದಲ್ಲಿ ಭಾಗವಹಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. ದೇಶದ ಜನಸಂಖ್ಯೆಯಲ್ಲಿ ಅನಕ್ಷರಸ್ಥರ ಸಂಖ್ಯೆ ಹೆಚ್ಚಿದ್ದು ವಿದ್ಯಾವಂತರು ಇವರನ್ನು ಸಾಕ್ಷರರನ್ನಾಗಿ ಮಾಡಬೇಕಾದ ಗುರಿ ಹೊಂದಬೇಕು ಎಂದು ಗದಗ ಬೆಟಗೇರಿ ಲಯನ್ಸ್ ಕ್ಲಬ್ನ ಅಧ್ಯಕ್ಷ ರಾಜು ವೇರ್ಣೆಕರ ಹೇಳಿದರು.
ಅವರು ಗದಗ ಬೆಟಗೇರಿ ಲಯನ್ಸ್ ಕ್ಲಬ್ ಹಾಗೂ ಗದುಗಿನ ಮಹೇಶ್ವರಿ ವಿವಿದ್ಧೋದ್ದೇಶಗಳ ಮಹಿಳಾ ಮಂಡಳ ಆಶ್ರಯದಲ್ಲಿ ಜರುಗಿದ ವಿಶ್ವ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಡತನ, ಲಿಂಗ ಸಮಾನತೆ, ನಾವೀನ್ಯತೆ ಮತ್ತು ಸಾಮಾಜಿಕ ಪ್ರಗತಿಗೆ ಅಡಿಪಾಯವಾಗಿ ಸಾಕ್ಷರತೆ ಕಾರ್ಯ ನಿರ್ವಹಿಸುತ್ತದೆ. ಸಾಕ್ಷರತಾ ದಿನಚರಣೆ ಇಂದು ಅರ್ಥಪೂರ್ಣವಾಗಿ ಸಾಧನೆ ಸಾಧಿಸಿದೆ ಎಂದರು. ಮನುಷ್ಯನ ಬುದ್ಧಿವಂತಿಕೆ, ಜ್ಞಾನ ಹೆಚ್ಚಿಸಲು ಸಾಕ್ಷರತೆ ಒಂದು ಶಕ್ತಿಯುತ ಸಾಧನವಾಗಿದ್ದು ಮಹಿಳಾ ಸಾಕ್ಷರತಾ ಹೆಚ್ಚಿಸಲು ನಾವೆಲ್ಲರೂ ಶ್ರಮಿಸಬೇಕು ಎಂದರು.
ಕ್ಲಬ್ನ ಕಾರ್ಯದರ್ಶಿ ರಾಜಣ್ಣ ಮಲ್ಲಾಡದ ಮಾತನಾಡಿ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಮಹಿಳೆ ತಾನು ಅನಕ್ಷರಸ್ಥೆ ಆಗಿದ್ದರೂ ಸಹ ಕುಟುಂಬವನ್ನು ಸಾಕ್ಷರರನ್ನಾಗಿ ಮಾಡುತ್ತಿರುವದು ಅಭಿನಂದನೀಯ. ಮಹಿಳಾ ಸಮುದಾಯ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಮೃತಾ ವಾರಕರ ಸಾಕ್ಷರತೆ ಎನ್ನುವುದು ಕೇವಲ ಓದು-ಬರಹಕ್ಕೆ ಸೀಮಿತವಾಗಿಲ್ಲ. ಜೀವನದ ಎಲ್ಲ ಸ್ಥರಗಳನ್ನು ಓದುವ-ತಿಳಿಯುವ, ಅರಿತುಕೊಳ್ಳುವುದು ಆಗಿದೆ. ಅನಕ್ಷರಸ್ಥರಿಗೆ ನಾವೆಲ್ಲರೂ ಸ್ವಯಂ ಪ್ರೇರಣೆಯಿಂದ ಅಕ್ಷರಗಳನ್ನು ಕಲಿಸುವ ಕೆಲಸ ನಡೆಸಬೇಕಿದೆ ಎಂದರು.
ಕ್ಲಬ್ನ ಖಜಾಂಚಿ ರೇಣುಕಪ್ರಸಾದ ಹಿರೇಮಠ ಮಾತನಾಡಿ ನಮ್ಮ ಹಳ್ಳಿಯ ಕೃಷಿಕರು ಅನಕ್ಷರಸ್ಥರಾಗಿದ್ದರೂ ಮಕ್ಕಳನ್ನು ಉನ್ನತ ಸ್ಥಾನಗಳಲ್ಲಿ ಇರುವಂತೆ ಮಾಡಿದ್ದಾರೆ. ಅನೇಕ ಕಡೆ ಇನ್ನೂ ಅನಕ್ಷರತೆ ಮನೆಮಾಡಿದ್ದು ಸಂಘ-ಸಂಸ್ಥೆಗಳು, ಯುವಕ-ಯುವತಿ ಮಂಡಳಗಳು ಸ್ವಯಂ ಪ್ರೇರಿತರಾಗಿ ರಾತ್ರಿ ಶಾಲೆಗಳನ್ನು ತೆರೆದು ಅನಕ್ಷರಸ್ಥರಿಗೆ ಅಕ್ಷರಗಳನ್ನು ಕಲಿಸಿ ಅವರನ್ನು ನವಸಾಕ್ಷರರನ್ನಾಗಿ ಮಾಡುವ ಕೆಲಸಕ್ಕೆ ಸರ್ಕಾರದೊಂದಿಗೆ ಕೈ ಜೋಡಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹೇಶ್ವರಿ ವಿವಿದ್ಧೋದ್ದೇಶಗಳ ಮಹಿಳಾ ಮಂಡಳದ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಹಿರೇಮಠ ಸಾಕ್ಷರತೆ ಸಾಧನೆಯಾಗಲು ಮುತುವರ್ಜಿ ಅವಶ್ಯವಿದೆ. ಪ್ರೇರಣಾದಾಯಕವಾಗಿ ಕಲಿಕೆ ನಡೆಯಬೇಕು. ನಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿನ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡುವಲ್ಲಿ ಯುವ ಸಮುದಾಯ ಮುಂದೆ ಬರಬೇಕು, ಅಂದಾಗ ಸಾಕ್ಷರತೆ ಸಕಾರಗೊಳ್ಳುವುದು ಎಂದರು.
ಮಹೇಶ್ವರಿ ವಿವಿದ್ಧೋದ್ದೇಶಗಳ ಮಹಿಳಾ ಮಂಡಳದಿಂದ ಜರುಗಿದ ವಿವಿಧ ತರಬೇತಿಗಳ ಪ್ರಮಾಣ ಪತ್ರಗಳನ್ನು ಫಲಾನುಭವಿಗಳಿಗೆ ನೀಡಲಾಯಿತು.
ಸಹನಾ ಹಿರೇಮಠ, ಸುರೇಖಾ ಮಲ್ಲಾಡದ ಪ್ರಾರ್ಥಿಸಿದರು. ಪುಷ್ಪಾ ಮುನವಳ್ಳಿ ಸ್ವಾಗತಿಸಿದರು. ಕವಿತಾ ಬೇಲೇರಿ ಪರಿಚಯಿಸಿದರು. ರಶ್ಮೀಕಾ ಹಿರೇಮಠ ನಿರ್ವಹಿಸಿದರು. ರೇಣುಕಾ ಹಂದ್ರಾಳ ನಿರೂಪಿಸಿದರು. ವಿರೇಶ ಪಟ್ಟಣಶೆಟ್ಟಿ ವಂದಿಸಿದರು.
ಕಾರ್ಯಕ್ರಮದಲ್ಲಿ ಕ್ಲಬ್ನ ಸಾವಿತ್ರಿ ಶಿಗ್ಲಿ, ನಿತೀಶ ಸಾಲಿ, ರಾಹುಲ ಅರಳಿ, ಪೂಜಾ ಅರಳಿ, ಡಾ. ಶಾಂತ ಕುಂಬಾರ, ಮಂಜುನಾಥ ವೀರಲಿಂಗಯ್ಯನಮಠ ಮತ್ತು ಲಲಿತಾ ಸಂಗನಾಳ, ತಸ್ಲೀಮ ಸೊರಟೂರ, ವೀಣಾ ಬೈಲಿ ಮುಂತಾದವರು ಉಪಸ್ಥಿತರಿದ್ದರು.