ಹಿಂದುಳಿದ ವರ್ಗಗಳ ಜಾತಿ ಸಮೀಕ್ಷೆಗೆ ಆಧಾರ್ ಲಿಂಕ್ ಮಾಡಿ : ಅನಂತ ನಾಯ್ಕ

Ravi Talawar
ಹಿಂದುಳಿದ ವರ್ಗಗಳ ಜಾತಿ ಸಮೀಕ್ಷೆಗೆ ಆಧಾರ್ ಲಿಂಕ್ ಮಾಡಿ : ಅನಂತ ನಾಯ್ಕ
WhatsApp Group Join Now
Telegram Group Join Now
ಶೋಷಿತ ಸಮುದಾಯಗಳ ಹಾಗೂ ಹಿಂದುಳಿದ ವರ್ಗಗಳ ಸೌಹಾರ್ಧ ಸಮ್ಮಿಲನ ಸಭೆ 
ಬಳ್ಳಾರಿ11.: ರಾಜ್ಯ ಸರ್ಕಾರ ಉದ್ದೇಶಿಸಿರುವ ಹಿಂದುಳಿದ ವರ್ಗಗಳ ಆರ್ಥಿಕ ಮತ್ತು ಶೈಕ್ಷಣಿಕ ಪರಿಸ್ಥಿತಿ ಅರಿಯಲು ಅನುಕೂಲವಾಗುವಂತೆ ಹೊಸ ಜಾತಿ ಗಣತಿ ಸಂಧರ್ಭದಲ್ಲಿ ಆಧಾರ್ ಕಾರ್ಡ್ ಲಿಂಕ್ ಮಾಡುವ ಕ್ರಾಂತಿಕಾರಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಶೋಷಿತ ವರ್ಗಗಳ‌ ಮಹಾ ಒಕ್ಕೂಟದ ಚಿಂತಕ ಅನಂತ ನಾಯ್ಕ ಮನವಿ ಮಾಡಿದರು.
 ಅವರು ಇಂದು ನಗರದ  ಖಾಸಗಿ ಹೋಟೆಲ್ಲಿನ ಸಭಾಂಗಣದಲ್ಲಿ ಇಂದು ಆಯೋಜಿಸಲಾಗಿದ್ದ ಶೋಷಿತ ವರ್ಗಗಳ ಸೌಹಾರ್ದ ಸಮ್ಮಿಲನ ಸಭೆಯಲ್ಲಿ ಹಿಂದುಳಿದ ವರ್ಗಗಳ ಹರಿಕಾರ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ   ಮಾತನಾಡಿ, ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಔದ್ಯೋಗಿಕ ಅಂಕಿ ಅಂಶದ ಆಧಾರದ ಮೇಲೆ ಕೈಗೊಳ್ಳಬೇಕಿದ್ದ ಮೀಸಲಾತಿಯ ಪ್ರಮಾಣವನ್ನು ಶಿಫಾರಸ್ಸು ಮಾಡಿದ್ದ ನ್ಯಾ.ಕಾಂತರಾಜ ವರದಿಯನ್ನು ರಾಜ್ಯ ಸರ್ಕಾರ ಪಟ್ಟಭದ್ರ ಹಿತಾಸಕ್ತಿಗಳಿಗೆ ಮಣಿದು ‌ನಿಸ್ತೇಜಗೊಳಿಸಿದೆ. ಇದು ಮುಂದಿನ ಹೊಸ ಜಾತಿ ಸಮೀಕ್ಷೆಯ ವರದಿ ಸ್ವೀಕಾರ ಸಮಯದಲ್ಲಿ ಮತ್ತೆ ಪುನರಾವರ್ತನೆ ಆಗಬಾರದು. ಆ ನಿಟ್ಟಿನಲ್ಲಿ  ಜಾತಿ ಸಮೀಕ್ಷೆಯ ಸಂಧರ್ಭದಲ್ಲಿ ಆಧಾರ್ ಕಾರ್ಡ್ ಲಿಂಕ್ ವ್ಯವಸ್ಥೆ ಆದರೆ ಅದು ದೇಶದ ಮಾಹಿತಿ ಕೋಶವನ್ನು ಸೇರಿಕೊಳ್ಳುತ್ತದೆ. ಇದರಿಂದ ಹಿಂದುಳಿದ ವರ್ಗಗಳಿಗೆ ಸಿಗಬೇಕಾದ ನ್ಯಾಯ, ದೊರಕಬೇಕಾದ ಸೌಲಭ್ಯಗಳನ್ನು ಯಾರಿಂದಲೂ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ  ಎಂದು ಅನಂತ್ ನಾಯ್ಕ್ ಅನಿಸಿಕೆಯನ್ನು ವ್ಯಕ್ತಪಡಿಸಿದರು .
ಹಿಂದೆ ವಿ.ಪಿ.ಸಿಂಗ್ ರವರು ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸುವ ಶಿಫಾರಸ್ಸನ್ನು ಹೊಂದಿದ್ದ ಮಂಡಲ್ ವರದಿಯನ್ನು ಜಾರಿಗೊಳಿಸಲು ಹೋದಾಗ ಮಾಡಿದ ಬೆದರಿಕೆ ತಂತ್ರವನ್ನು, ಈಗಲೂ ಬಲಾಢ್ಯ ಸಮುದಾಯಗಳು ಮುಂದುವರೆಸಿವೆ. ಹೀಗಾಗಿಯೇ ನ್ಯಾ. ಕಾಂತರಾಜ ವರದಿ ಜಾರಿಗೆ ತೊಂದರೆಯಾಗಿದೆ. ಇಂತಹ ಒತ್ತಡ ಮತ್ತು ಕುತಂತ್ರಗಳ ನಡುವೆಯೇ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹೊಸದಾಗಿ ಜಾತಿ ಸಮೀಕ್ಷೆ ಮಾಡುತ್ತೇವೆ ಎಂದು ಘೋಷಿಸಿದೆ. ಇದೊಂದು ಆಶಾದಾಯಕ ಬೆಳವಣಿಗೆಯಾಗಿದ್ದು, ಈ ಹಂತದಲ್ಲಿ ಹಿಂದುಳಿದ ವರ್ಗಗಳು ಎಚ್ಚೆತ್ತುಕೊಂಡು ತಮ್ಮ ಸಮುದಾಯಗಳ ವಸ್ತು ಸ್ಥಿತಿಗಳು ನಿಖರವಾಗಿ ನಮೂದು ಆಗುವಂತೆ ಜವಾಬ್ದಾರಿ ವಹಿಸಬೇಕೆಂದು ಅನಂತ ನಾಯ್ಕ ಮನವಿ ಮಾಡಿದರು.
ಅದರೊಂದಿಗೆ ನಾಡಿನಲ್ಲಿ ‘ಅಹಿಂದ’ ಚಳುವಳಿ ಆರಂಭವಾಗಿ ಇಪ್ಪತ್ತುವರ್ಷಗಳು ಕಳೆದಿವೆ. ಈ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳನ್ನು ಪ್ರತಿನಿಧಿಸುವ ಸಿಧ್ದರಾಮಯ್ಯನವರು ಬಲಾಢ್ಯ ಜಾತಿವಾದಿ ರಾಜಕಾರಣವನ್ನು ಮೀರಿ ‘ಅಹಿಂದ’ ಶಕ್ತಿಯ ಒಕ್ಕೋರಿಲಿನ ಪ್ರಯತ್ನದ ಭಾಗವಾಗಿ ಎರಡೆರಡು ಬಾರಿ
ಮುಖ್ಯಮಂತ್ರಿ ಆಗುವ ಅವಕಾಶ ಪಡೆದಿದ್ದಾರೆ. ಅಹಿಂದ ವರ್ಗಗಳ ಶಕ್ತಿ ಹಿಗೆಯೇ ನಿರಂತರವಾಗಿ ಗಟ್ಟಿಯಾಗಿರಬೇಕು. ಅದಕ್ಕೆ ಪೂರಕವಾಗಿ ‘ಹಳೆಯ ಬೇರು-ಹೊಸ ಚಿಗುರು’ ನಾಣ್ಣುಡಿಯಂತೆ ಹಿಂದಿನ ಅಹಿಂದ ಚಳುವಳಿಯ ನೇತಾರರ ಮಾರ್ಗದರ್ಶನ ಮತ್ತು ಅನುಭವಗಳ ಬೆಂಬಲದಲ್ಲಿ ಅಹಿಂದ ವರ್ಗಗಳ ಹೊಸ ತಲೆಮಾರನ್ನು ಸಂಘಟಿಸುವ ಪ್ರಯತ್ನ ನಾಡಿನಾದ್ಯಂತ ಜರುಗುತ್ತಿವೆ. ಇದಕ್ಕೆ ಅಖಂಡ ಬಳ್ಳಾರಿ ಜಿಲ್ಲೆಯ ಅಹಿಂದ ವರ್ಗಗಳು ಕೈ ಜೋಡಿಸಬೇಕೆಂದರು.
ಈ ಸಂಧರ್ಭದಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟದ ರಾಜ್ಯ ಪ್ರತಿನಿಧಿ ತೋಳಿ ಭರಮಣ್ಣ, ಇರ್ಫಾನ್ ಮುದಗಲ್, ಪ್ರಗತಿಪರ ಹೋರಾಟಗಾರ ಸಂಗನಕಲ್ ವಿಜಯಕುಮಾರ್, ಶೋಷಿತ ಸಮುದಾಯದ ಜಿಲ್ಲಾಧ್ಯಕ್ಷರಾದ ಗಾದಲಿಂಗನಗೌಡರ, ದಲಿತ ಹೋರಾಟಗಾರ ಎ. ಮಾನಯ್ಯ, ಮಾಜಿ ವಿಧಾನ ಪರಿಷತ್ ಸದಸ್ಯ ಕೆ ಎಸ್ ಎಲ್, ಸ್ವಾಮಿ, ಮಾಜಿ ಉಪ ಮಹಾಪೌರ ಬೆಣಕಲ್ ಬಸವರಾಜ್ ಗೌಡ, ರೈತ ಹೋರಾಟಗಾರ ವಿ‌.ಎಸ್. ಶಿವಶಂಕರ್,
ವಾಲ್ಮೀಕಿ ಸಮುದಾಯದ ವಿ.ಕೆ. ಬಸಪ್ಪ,
ಬಲಿಜ ಸಮುದಾಯದ ಸರಗೂ ನಾಗರಾಜ್,  ಕೊಳಗಲ್ಲು ಉಪ್ಪಾರ ಎರ್ರೀಸ್ವಾಮಿ, ನೇಕಾರ ಸಮುದಾಯದ ರಾಜ್ಯ ಉಪಾಧ್ಯಕ್ಷರಾದ ದೇವಣ್ಣ, ಯಾದವ ಸಮುದಾಯದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿದಾನಂದಪ್ಪ ಯಾದವ್, ಕುಂಬಾರ ಸಮುದಾಯದ ಎರ್ರಿ ಸ್ವಾಮಿ, ಪಿ ಜಗನ್ನಾಥ್, ಲೋಕೇಶ್, ಗಂಗಪ್ಪ, ವಿಶ್ವಕರ್ಮ ಸಮುದಾಯದ ಚಂದ್ರು, ಮಹಾನಗರ ಪಾಲಿಕೆ ಸದಸ್ಯರಾದ ಹೊನ್ನಪ್ಪ, ನಾಗಲಕರೆ ಗೋವಿಂದ, ಭೋವಿ ಸಮಾಜದ ಜಿಲ್ಲಾಧ್ಯಕ್ಷರಾದ ರಾಮಾಂಜಿನಿ, ಗುಡುದುರು, ಅಲ್ಲಿ ಪುರ ವೆಂಕಟಸ್ವಾಮಿ,
 ಸೇರಿದಂತೆ ಇನ್ನು ಮುಂತಾದ ಶೋಷಿತ ಅಹಿಂದ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article