ವಿಜಯಪುರ: (ಡಿ.12) ಇಂಗಳೇಶ್ವರ ವಿರಕ್ತಮಠದ ಪರಮಪೂಜ್ಯ ಶ್ರೀ ಚನ್ನಬಸವ ಮಹಾಸ್ವಾಮಿಗಳು ಲಿಂಗೈಕ್ಯರಾದರೂ ಅವರು ನಿರ್ಮಿಸಿರುವ ವಚನಶಿಲಾ ಮಂಟಪ ಮತ್ತು ಹಾಕಿಕೊಟ್ಟಿರುವ ಮಾರ್ಗ ಸೂರ್ಯ ಚಂದ್ರ ಇರುವವರೆಗೂ ಚಿರಸ್ಥಾಯಿಯಾಗಿರಲಿವೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.ಇಂದು ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ಲಿಂ. ಶ್ರೀ ಚನ್ನಬಸವ ಮಹಾಸ್ವಾಮಿಗಳ ಅಂತಿಮ ದರ್ಶನ ಪಡೆದ ಅವರು ಭಕ್ತಿಪೂರ್ವಕ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ನುಡಿನಮನ ಸಲ್ಲಿಸಿದರು.
ಶ್ರೀಗಳನ್ನು ಕಳೆದುಕೊಂಡು ನಾವು ಬಡವರಾಗಿದ್ದೇವೆ. ಬಸವಣ್ಣನವರ ಜನ್ಮಭೂಮಿಯಲ್ಲಿ ಬಸವಾದಿ ಶರಣರ ಸಾಹಿತ್ಯ, ವಚನಗಳು ಹಾಗೂ ತತ್ವ ಸಿದ್ಧಾಂತಕ್ಕೆ ತಕ್ಕಂತೆ ಶ್ರೀಗಳು ನಡೆದುಕೊಂಡಿದ್ದಾರೆ. ಅಲ್ಲದೇ, ಅವರ ತತ್ವಗಳ ಪ್ರಸಾರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಯಾರ ನೆರವನ್ನೂ ಪಡೆಯದೆ ಕಷ್ಟಪಟ್ಟು, ಶ್ರಮವಹಿಸಿ, ವಚನಶಿಲಾ ಮಂಟಪ ನಿರ್ಮಿಸಿದ್ದಾರೆ. ೧೨ನೇ ಶತಮಾನದಲ್ಲಿ ಅನುಭವ ಮಂಟಪದ ಬಸವಾದಿ ಶರಣರ ವಚನ ಸಾಹಿತ್ಯವನ್ನು ಶಿಲಾ ಮಂಟಪದ ಮೂಲಕ ಮುಂದಿನ ಪೀಳಿಗೆಗೆ ಶಾಶ್ವತವಾಗಿ ಉಳಿಸುವ ಅಮೂಲ್ಯ ಕಾರ್ಯ ಮಾಡಿದ್ದಾರೆ. ಸರಳ ಜೀವಿಯಾಗಿದ್ದ ಅವರು ತಾಯಿ ಹೃದಯ ಹೊಂದಿದ್ದರು. ಅವರು ಶತಯುಷಿಗಳಾಗಬೇಕು ಎಂಬುದು ಭಕ್ತರ ಆಶಯವಾಗಿತ್ತು ಎಂದು ಅವರು ಹೇಳಿದರು.
ಬಸವಾದಿ ಶರಣರ ಸಾಲಿನಲ್ಲಿ ಶ್ರೀಗಳು ಕೂಡ ಒಬ್ಬರಾಗಿದ್ದಾರೆ. ಈಗಿನ ಕಿರಿಯ ಶ್ರೀಗಳು ಹಿರಿಯ ಶ್ರೀಗಳ ಮಾರ್ಗ ಅನುಸರಿಸಲಿ. ಬಿ.ಎಲ್.ಡಿ.ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರ ಬಸವ ಸಾಹಿತ್ಯ ಪ್ರಸಾರಕ್ಕೆ ಸಹಕರಿಸಲಿದೆ. ಸಿ.ಎಂ ಕೂಡ ಶ್ರೀಗಳ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವನಾಗಿ ಸರಕಾರದ ಪರವಾಗಿ ಶ್ರೀಗಳಿಗೆ ಗೌರವ ನಮನಗಳನ್ನು ಸಲ್ಲಿಸುತ್ತೇನೆ. ಅವರ ಕೊಡುಗೆ ಅಪಾರ. ದೇವರು ಮತ್ತು ಬಸವಾದಿ ಶರಣರು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ. ಅವರು ದೈಹಿಕವಾಗಿ ನಮ್ಮೊಂದಿಗೆ ಇರದಿದ್ದರೂ ಶಿಲಾಮಂಟಪ ರೂಪದಲ್ಲಿ ನೆಲೆಸಿದ್ದಾರೆ. ಭಕ್ತರೆಲ್ಲರೂ ಅವರು ಹಾಕಿಕೊಟ್ಟಿರುವ ಸನ್ಮಾರ್ಗದಲ್ಲಿ ನಡೆಯೋಣ ಎಂದು ಸಚಿವರು ಹೇಳಿದರು.
ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಅವರು ಮಾತನಾಡಿ, ಸಮಾಜಕ್ಕೆ, ಮಠಾಧೀಶರಿಗೆ ಸಾರ್ವಕಾಲಿಕ ಮಾದರಿ ರೀತಿ ಬದುಕಿ ತೋರಿದ ಮಹಾನ್ ಚೇತನವಾಗಿದ್ದ ಚನ್ನಬಸವ ಶ್ರೀಗಳು ಭಕ್ತರ ಪಾಲಿಗೆ ಮಾತೃಹೃದಯದ ಮಮತಾಮಯಿ ಆಗಿದ್ದರು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕೆ.ಎಸ್.ಡಿ.ಎಲ್. ಅಧ್ಯಕ್ಷರಾದ ಶಾಸಕ ಸಿ.ಎಸ್.ನಾಡಗೌಡ, ಶಾಸಕ ರಾಜುಗೌಡ ಪಾಟೀಲ, ಜಿಲ್ಲಾಧಿಕಾರಿ ಡಾ.ಆನಂದ ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಬಸವನ ಬಾಗೇವಾಡಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ, ಮನಗೂಳಿ ಹಿರೇಮಠದ ಸಂಗನಬಸವ ಶಿವಾಚಾರ್ಯರು, ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿ, ಇಂಗಳೇಶ್ವರ ವಿರಕ್ತಮಠದ ಸಿದ್ಧಲಿಂಗ ಶ್ರೀಗಳು, ಹುಬ್ಬಳ್ಳಿ ಮೂರು ಸಾವಿರ ಮಠದ ಶ್ರೀಗಳು, ಧಾರವಾಡ ಮುರುಘಾಮಠ ಶ್ರೀಗಳು, ನಿಜಗುಣಾನಂದ ಸ್ವಾಮೀಜಿ, ನಿಡಸೊಸಿ ಶ್ರೀಗಳು, ಜ್ಞಾನಯೋಗಾಶ್ರಮದ ಬಸವಲಿಂಗ ಶ್ರೀಗಳು, ಯರನಾಳ ಶ್ರೀಗಳು ಸೇರಿದಂತೆ ನಾಡಿನ ನಾನಾ ಭಾಗಗಳಿಂದ ಆಗಮಿಸಿದ್ದ ಅಪಾರ ಭಕ್ತರು ಉಪಸ್ಥಿತರಿದ್ದರು.


