ಧಾರವಾಡ : ಈ ದೇಶದ ವಾಲ್ಮೀಕಿ ಸಮುದಾಯ ವೀರ, ದೀರರಾಗಿದ್ದು, ಅನೇಕ ಕೋಟೆ, ನಾಡನ್ನು ಆಳಿದ ರಾಜ ವಂಶಜರು. ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಅವರು ನಮಗೆಲ್ಲ ಆದರ್ಶಪ್ರಾಯರು. ಅವರಂತೆ ಸ್ವಾಭಿಮಾನಿ ಬದುಕು ನಮ್ಮದಾಗಬೇಕು ಎಂದು ವಿಧಾನ ಪರಿಷತ್ ನೂತನ ಸದಸ್ಯರಾದ ಎಫ್.ಎಚ್. ಜಕ್ಕಪ್ಪನವರ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಮತ್ತು ಸಮಾಜ ಕಲ್ಯಾಣ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಅವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿಯವರನ್ನು ನಾವು ಭಾವನಾತ್ಮಕವಾಗಿ ಕಟ್ಟಿಕೊಳ್ಳಬೇಕು. ವಾಲ್ಮೀಕಿಯನ್ನು ಕಳ್ಳ, ದರೋಡೆಕೋರ ಅನ್ನುವುದು ತಪ್ಪು. ಅವರ ರಾಮಾಯಣ ಮಹಾಕಾವ್ಯದ ಸಾಧನೆ ಇಡೀ ಜನಾಂಗಕ್ಕೆ ಪ್ರೇರಣೆ ಆಗಬೇಕು ಎಂದು ಅವರು ಹೇಳಿದರು.
ಮಹರ್ಷಿ ವಾಲ್ಮೀಕಿ ಓರ್ವ ಪ್ರಕಾಂಡ ಪಂಡಿತ. ರಾಮಾಯಣದಲ್ಲಿನ ಶ್ಲೋಕಗಳು, ಖಂಡಗಳು ವಾಲ್ಮೀಕಿಯವರ ಪಾಂಡಿತ್ಯವನ್ನು ತೋರಿಸಿದ್ದು, ವಿಶ್ವಮಟ್ಟದಲ್ಲಿ ಭಾರತದ ಘನತೆ, ಗೌರವವನ್ನು ಹೆಚ್ಚಿಸಿದೆ ಎಂದು ಅವರು ಹೇಳಿದರು.
ದೇಶದಲ್ಲಿ ಸುಮಾರು 18 ಕೋಟಿ ವಾಲ್ಮೀಕಿ ಸಮುದಾಯ ಇದೆ. ವಾಲ್ಮೀಕಿ ಸಮುದಾಯ, ತಳ ಸಮುದಾಯಗಳು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಬೆಳೆದು ಬರಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಜಾಗೃತರಾಗಬೇಕು ಎಂದು ವಿಧಾನ ಪರಿಷತ್ತ ಸದಸ್ಯ ಎಫ್.ಎಚ್.ಜಕ್ಕಪ್ಪನವರ ತಿಳಿಸಿದರು.
ಸಹಕಾರಿ ರಂಗದಲ್ಲಿ ವಾಲ್ಮೀಕಿ ಸಮುದಾಯದವರು ಪಾಲ್ಗೋಳ್ಳಬೇಕು. ವಾಲ್ಮೀಕಿ ಜಿಲ್ಲಾ ಸಹಕಾರಿ ಸಂಘ ರಚನೆ ಆಗಬೇಕು. ಈ ನಿಟ್ಟಿನಲ್ಲಿ ಸಮಾಜದ ಪ್ರಮುಖರು ಕಾರ್ಯ ಪ್ರವೃತ್ತರಾಗಬೇಕು ಎಂದರು.
ಇಂದು, ಪ್ರತಿ ವರ್ಷ ಅಂದಾಜು ಎರಡು ಲಕ್ಷ ವಿದ್ಯಾರ್ಥಿಗಳು ಓದಿ, ಉತ್ತೀರ್ಣರಾಗುತ್ತಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ವಿದ್ಯಾವಂತರಾಗಬೇಕು, ಬುದ್ದಿವಂತರಾಗಬೇಕು. ಅಂದಾಗ ಮಾತ್ರ ಸಮಾಜ ಅಭಿವೃದ್ಧಿ ಆಗುತ್ತದೆ ಎಂದು ಅವರು ಹೇಳಿದರು.
ಮುಖಂಡರಾದ ಚಂದ್ರಶೇಖರ ಜುಟ್ಟಲ ಅವರು ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರನ್ನು ನಾವೇಲ್ಲರೂ ಸ್ವಾಭಿಮಾನದ ಪ್ರತೀಕವಾಗಿ ಸ್ವೀಕರಿಸಬೇಕು. ಅನಕ್ಷರಸ್ಥ ವಾಲ್ಮೀಕಿ ಇಡೀ ವಿಶ್ವಕ್ಕೆ ರಾಮಾಯಣ ಮಹಾಕಾವ್ಯ ನೀಡಿ, ಸರ್ವಧರ್ಮಿಯರಿಗೂ ಪೂಜ್ಯರಾಗಿದ್ದಾರೆ. ಮಹರ್ಷಿ ವಾಲ್ಮೀಕಿ ಅವರ ಜೀವನದ ಪಾಠವು ನಮ್ಮ ಬದುಕಿನ ಬದಲಾವಣೆಗೆ ನಾಂದಿ ಆಗಬೇಕು. ವಾಲ್ಮೀಕಿ ಅವರು ನೀಡಿರುವ ರಾಮಾಯಣ ಮತ್ತು ಡಾ.ಬಿ.ಆರ್.ಅಂಬೇಡ್ಕರ ಅವರು ನೀಡಿರುವ ಸಂವಿಧಾನವನ್ನು ನೆನೆದು, ನೆನಪಿಸಿಕೊಂಡು, ನಮ್ಮವರ ಸಾಧನೆಗೆ ನಾವು ಹೆಮ್ಮೆ ಪಡಬೇಕು ಎಂದು ಅವರು ಹೇಳಿದರು.
ಕವಿವಿ ಸಿಂಡಿಕೇಟ ಮಾಜಿ ಸದಸ್ಯ ಡಾ. ಕಲ್ಮೇಶ ಹಾವೇರಿಪೇಟ ಅವರು ಮಾತನಾಡಿ, ಕವಿವಿಯ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠದ ಕಟ್ಟಡ ಕಾಮಗಾರಿ ಬೇಗ ಆರಂಭಿಸಬೇಕು. ಮಹರ್ಷಿ ವಾಲ್ಮೀಕಿ ಅವರು ನಮಗೆಲ್ಲ ಆದರ್ಶವಾಗುವಂತೆ ವಿದ್ಯಾರ್ಥಿಗಳಲ್ಲಿ, ಯುವ ಸಮುದಾಯದಲ್ಲಿ ಅವರ ವಿಚಾರಧಾರೆಗಳನ್ನು ಬೆಳೆಸಬೇಕೆಂದು ಅವರು ಹೇಳಿದರು.
ವಾಲ್ಮೀಕಿ ಸಮಾಜದ ಜಿಲ್ಲಾ ಅಧ್ಯಕ್ಷ ಮೋಹನ ಗುಡಿಸಲಮನಿ ಅವರು ಮಾತನಾಡಿ, ಸಮಾಜಕ್ಕೆ ವಾಲ್ಮೀಕಿ ಸಮುದಾಯದ ಕೊಡುಗೆ ಮತ್ತು ಸಮಾಜದ ಮುಂದಿರುವ ಸವಾಲುಗಳ ಕುರಿತು ವಿವರಿಸಿದರು. ವಿದ್ಯಾರ್ಥಿ ಎಚ್.ಶ್ರೀನಿವಾಸ ಅವರು, ಮಹರ್ಷಿ ವಾಲ್ಮೀಕಿಯವರ ರಾಮಾಯಾಣದ ಕುರಿತು ವಿವರಿಸಿದರು.
ಕೆಸಿಡಿ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಶರಣು ಮುಷ್ಠಿಗೇರಿ ಅವರು ಮಹರ್ಷಿ ವಾಲ್ಮೀಕಿಯವರ ಜೀವನ ಮತ್ತು ಬದುಕು ಹಾಗೂ ವಾಲ್ಮೀಕಿ ರಾಮಾಯಣ, ವಾಲ್ಮೀಕಿ ಸಮುದಾಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ ಅವರು ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ನಮ್ಮ ರಾಷ್ಟ್ರ ಕಂಡ ಮಹಾಪುರುಷ. ಭಾರತವು ಕಂಡ ಎಲ್ಲ ಮಾಹಾಪುರುಷರು ತಮ್ಮ ಜೀವನದ ಪಾಠಗಳಿಂದ, ಜೀವನ ಸಂದೇಶಗಳಿಂದ ಮಹಾತ್ಮರಾಗಿದ್ದಾರೆ ಎಂದು ಹೇಳಿದರು.
ವಾಲ್ಮೀಕಿ ಅವರ ರಾಮಾಯಣ ಮಹಾಕಾವ್ಯವು ಸತ್ಯದ ದಾರಿ ಆಗಿದೆ. ನಮ್ಮ ಜೀವನಕ್ಕೆ ಬದುಕುವ ಮಾರ್ಗವಾಗಿದೆ. ಅದನ್ನು ಅರಿತು ನಡೆಯಬೇಕು. ಭಾರತ ಕಂಡ ಎಲ್ಲ ಮಹಾತ್ಮರ, ಮಹಾಪುರುಷರ ಬದುಕು ನಮಗೆ ಜೀವನ ಸಂದೇಶವಾಗಿದೆ ಎಂದು ಭುವನೇಶ ಪಾಟೀಲ ಅವರು ಹೇಳಿದರು.
ವೇದಿಕೆಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಉಪ ಪೆÇಲೀಸ್ ಆಯುಕ್ತ ಮಾನಿಂಗ ನಂದಗಾವಿ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಮುಖಂಡರಾದ ಎಂ.ಅರವಿಂದ, ಪರಮೇಶ ಕಾಳೆ, ಸುಶೀಲಾ ಚಲವಾದಿ, ಪರಮೇಶ ಕಟ್ಟಿಮನಿ, ಜಿಲ್ಲಾ ಹಾಗೂ ಉಪವಿಭಾಗ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸದಸ್ಯರು, ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿಗಳ ಜಾಗೃತ ಸಮಿತಿ ಸದಸ್ಯರು ಮತ್ತು ವಿವಿಧ ಮುಖಂಡರು ವೇದಿಕೆಯಲ್ಲಿ ಇದ್ದರು.
ಅಧಿಕಾರಿ ಸುರೇಶ ಗುಂಡಣ್ಣವರ ಅವರು ಸ್ವಾಗತಿಸಿದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ. ಶುಭ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ನಿರ್ದೇಶಕಿ ಎಂ.ಬಿ.ಸಣ್ಣೇರ ಅವರು ವಂದಿಸಿದರು. ಪ್ರವೀಣ ಮಸ್ಕಿ ಅವರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ವಾಲ್ಮೀಕಿ ಸಮುದಾಯದ ಸಾಧಕರನ್ನು ಮತ್ತು ಕಳೆದ ಸಾಲಿನಲ್ಲಿ ಎಸ್.ಎಸ್.ಎಲ್.ಸಿ., ಪಿಯುಸಿ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ, ಕ್ರೀಡಾಪಟುಗಳಿಗೆ ಮತ್ತು ಮಾಜಿ ಸೈನಿಕರಿಗೆ ಸನ್ಮಾನಿಸಿ, ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ವಾಲ್ಮೀಕಿ ಸಮುದಾಯದ ಪ್ರಮುಖರು, ಸಂಘಸಂಸ್ಥೆಗಳ ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು.
*ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಭವ್ಯ ಮೆರವಣಿಗೆ:* ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದ ಭವ್ಯ ಮೆರವಣಿಗೆಯು ಧಾರವಾಡ ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿ, ಕಲಾಭವನ ಆವರಣದಲ್ಲಿ ಮುಕ್ತಾಯಗೊಂಡಿತು.
ವಿಧಾನ ಪರಿಷತ್ ಸದಸ್ಯ ಎಫ್.ಎಚ್.ಜಕ್ಕಪ್ಪನವರ ಅವರು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾ ಚರಣೆ ಮಾಡಿ, ಮೆರವಣಿಗೆಗೆ ಚಾಲನೆ ನೀಡಿದರು.
ಪ್ರಭಾರ ಜಿಲ್ಲಾಧಿಕಾರಿ ಹಾಗೂ ಸಿಇಓ ಭುವನೇಶ ಪಾಟೀಲ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಸೇರಿದಂತೆ ವಿವಿಧ ಅಧಿಕಾರಿಗಳು, ವಾಲ್ಮೀಕಿ ಮತ್ತು ವಿವಿಧ ಸಮಾಜದ ಮುಖಂಡರು, ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.
ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಯುದ್ದಕ್ಕೂ ಸಂಚರಿಸಿ, ಭಾವಚಿತ್ರದ ಮೆರವಣಿಗೆಗೆ ಮೆರಗು ತಂದವು.