ಬಳ್ಳಾರಿ, ಏ.30: ಬಳ್ಳಾರಿ ನಗರದ 3ನೇ ವಾರ್ಡಿನ ಬಂಡಿಮೋಟ್ ಬಳಿ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಅವರ ಪರ ಶಾಸಕ ಭರತ್ ರೆಡ್ಡಿ, ಪಾಲಿಕೆಯ ಸ್ಥಳೀಯ ಸದಸ್ಯ ಎಂ.ಪ್ರಭಂಜನ್ ಕುಮಾರ್ ಮೊದಲಾದವರು ಮತಯಾಚನೆ ಮಾಡಿದ್ದಾರೆ.
ತೆರೆದ ವಾಹನದಲ್ಲಿ ವಾರ್ಡಿಗೆ ಬಂದ ಮುಖಂಡರಿಗೆ ಬೃಹತ್ ಹೂಮಾಲೆ ಹಾಕುವ ಮೂಲಕ ಸ್ವಾಗತಿಸಿ ಪ್ರಚಾರ ಕಾರ್ಯಕ್ಕೆ ಅನುವು ಮಾಡಿಕೊಟ್ಟರು. ಶಾಸಕ ಭರತ್ ರೆಡ್ಡಿ ಜನತೆಯನ್ನು ಉದ್ದೇಶಿಸಿ ಮಾತನಾಡುತ್ತ. ಬಿಜೆಪಿಯವರು ಬಳ್ಳಾರಿಗೆ ನಾಲ್ಕು ಸಲ ಸಂಸದರಾಗಿದ್ದರು, ನಗರದಲ್ಲಿ ಶಾಸಕರಾಗಿದ್ದರು, ಆದರೆ ಅವರು ಏನೂ ಕೆಲಸ ಮಾಡಲಿಲ್ಲ. ಅವರು ಮತ ಕೇಳಲು ಬಂದಾಗ ನೀವು ಅವರನ್ನು ಪ್ರಶ್ನೆ ಮಾಡಬೇಕು ನೀವು ಬಳ್ಳಾರಿಗೆ ಮಾಡಿದ್ದೇನು ಎಂದರು.
ಬಳ್ಳಾರಿ ಜಿಲ್ಲೆಗೆ ಜಿಂದಾಲ್ ಫ್ಯಾಕ್ಟರಿ ತಂದದ್ದು ದಿ.ಪ್ರಧಾನಿ ಇಂದಿರಾ ಗಾಂಧಿ, ರಾಜ್ಯಕ್ಕೆ ವಿದ್ಯುತ್ ಪೂರೈಸುವ ಬಿಟಿಪಿಎಸ್ ಸ್ಥಾಪಿಸಿದ್ದು ಸೋನಿಯಾ ಗಾಂಧಿ, ಇವುಗಳಲ್ಲಿ ನಮ್ಮ ಜಿಲ್ಲೆಯ ಸಾವಿರಾರು ಯುವಕರಿಗೆ ಉದ್ಯೋಗ ಸಿಕ್ಕಿದೆ ಇಂತಹ ಕಾರ್ಯ ಬಿಜೆಪಿ ಮಾಡಿದಿಯಾ ಎಂದು ಕೇಳಿ ಎಂದರು.
ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿಯವರು ಕೀಳಾಗಿ ಮಾತನಾಡುತ್ತಾರೆ. ಬಿಟ್ಟಿ ಭಾಗ್ಯ ಎಂದು ಕರೆಯುತ್ತಾರೆ ಬಡವರನ್ನು ಅವಮಾನಿಸುವ ಈ ಬಿಜೆಪಿಯವರನ್ನು ನೀವು ಸೋಲಿಸಬೇಕೆಂದರು.
ನಗರದ ದುರ್ಗಮ್ಮ ದೇವಸ್ಥಾನದ ಅಭಿವೃದ್ಧಿ ಮಾಡಿದೆ. 12 ಮಸೀದಿಗಳಿಗೆ ಒಂದೂವರೆ ಕೋಟಿ ರೂ. ಅನುದಾನ ತಂದಿದೆ. ಬಡ ಮುಸ್ಲಿಂ ಯುವತಿಯರ ಮದುವೆಗೆ ಅನುಕೂಲ ಆಗಲಿ ಎಂದು ವಡ್ಡರಬಂಡೆಯಲ್ಲಿ 5 ಕೋಟಿ ರೂ. ಅನುದಾನದಲ್ಲಿ ಶಾದಿ ಮಹಲ್ ನಿರ್ಮಿಸಲಿದೆ. ಈವರೆಗೆ ನಗರಕ್ಕೆ 120 ಕೋಟಿ ರೂ. ಅನುದಾನ ಸರ್ಕಾರ ನೀಡಿದೆಂದು ಹೇಳಿದರು.
ಪಾಲಿಕೆ ಸದಸ್ಯ ಎಂ.ಪ್ರಭಂಜನಕುಮಾರ್ ಮಾತನಾಡಿ, ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಈ.ತುಕಾರಾಂ ಅವರಿಗೆ ಮತ ನೀಡುವ ಮೂಲಕ ನಮ್ಮ ಕೈ ಬಲಪಡಿಸಬೇಕು. ಅಲ್ಲದೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೆ ಬಂದರೆ ಒಂದು ಕುಟುಂಬದ ಓರ್ವ ಮಹಿಳೆಗೆ ವಾರ್ಷಿಕ ಒಂದು ಲಕ್ಷ ರೂ ನೀಡುವುದು ಸೇರಿದಂತೆ 25 ಗ್ಯಾರಂಟಿಗಳನ್ನು ಜಾರಿಗೆ ತರಲಿದೆ ಎಂದರು.
ಪಾಲಿಕೆಯ ಮಾಜಿ ಸದಸ್ಯ ವಿವೇಕ್ ಮುಂಡ್ಲೂರು, ವಿಷ್ಣು ಬೋಯಪಾಟಿ, ಪಾಲಿಕೆ ಸದಸ್ಯರಾದ ಮಿಂಚು ಶ್ರೀನಿವಾಸುಲು, ರಾಜೇಶ್ವರಿ ಸುಬ್ಬರಾಯುಡು, ಶೋಭಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಸೇನ್ ಪೀರಾಂ, ಮುಖಂಡ ಬಿಆರೆಲ್ ಶ್ರೀನಿವಾಸ್ ಮೊದಲಾದವರು ಇದ್ದರು.