ವಿಮ್ಸ್ ಹಾಗೂ ಜಿಲ್ಲೆಯ ಎಲ್ಲ ಸರಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಆಗಮಿಸುವ ರೋಗಿಗಳಿಗೆ ಸೂಕ್ತ ಔಷಧೋಪಚಾರ ಹಾಗೂ ಅವರದೊಂದಿಗೆ ಆಗಮಿಸುವ ಪಾಲಕರ ಜೊತೆ ಸೌಜನ್ಯಯುತವಾಗಿ ವರ್ತಿಸಿ ಎರಡು ಇಲಾಖೆಗಳ ಮೂಲಕ ಗುಣಮಟ್ಟದ ಆರೋಗ್ಯ ಸೇವೆಗಳನ್ನು ನೀಡೊಣವೆಂದು ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರು ಡಾ ಟಿ ಗಂಗಾಧರಗೌಡ ತಿಳಿಸಿದರು.
ವಿಮ್ಸ್ ಆಡಳಿತ ಭವನದ ಸಭಾಂಗಣದಲ್ಲಿ ಬಳ್ಳಾರಿ ಜಿಲ್ಲೆಯ ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಜಂಟಿಯಾಗಿ ಹಮ್ಮಿಕೊಂಡ ಸಭೆಯಲ್ಲಿ ಮಾತನಾಡುತ್ತಾ, ಮುಖ್ಯವಾಗಿ ಗ್ರಾಮೀಣ ಭಾಗದಿಂದ ಹೆಚ್ಚಿನ ಚಿಕಿತ್ಸೆಗೆ ವಿಮ್ಸ್‌ಗೆ ರೋಗಿಗಳನ್ನು ಕಳುಹಿಸುವಾಗ ಅದರಲ್ಲೂ ಗರ್ಭಿಣಿಯರನ್ನು ಸಕಾಲದಲ್ಲಿ ಕಳುಹಿಸಲು ಅಥವಾ ಕುಟುಂಬದ ಸದಸ್ಯರು ಕರೆದು ಕೊಂಡು ಬರುವುದಕ್ಕೆ ಆಧ್ಯತೆ ನೀಡಲು ಮತ್ತು ಕುಟುಂಬದ ಸದಸ್ಯರಿಗೆ ಉಚಿತ ಆ್ಯಂಬ್ಯುಲೆನ್ಸ್‌ಗಾಗಿ 108ಕ್ಕೆ ಕರೆ ಮಾಡುವ ಕುರಿತು ಹಾಗೂ ಕಣ್ಣಿನ ಪೋರೆ ಶಸ್ತ್ರಚಿಕಿತ್ಸೆಯನ್ನು ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ, ಜಿಲ್ಲಾ ಆಸ್ಪತ್ರೆಯಲ್ಲಿ ಹಾಗೂ ವಿಮ್ಸ್ ನಲ್ಲಿ ಉಚಿತವಾಗಿ ಮಾಡುವ ಕುರಿತು ವ್ಯಾಪಕವಾಗಿ ಮಾಹಿತಿ ನೀಡೊಣ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಯಲ್ಲಾ ರಮೇಶಬಾಬು ಮಾತನಾಡಿ ಜಿಲ್ಲೆಯ 2 ಸಾರ್ವಜನಿಕ ಆಸ್ಪತ್ರೆ, 6 ಸಮುದಾಯ ಆರೋಗ್ಯ ಕೇಂದ್ರ, 29 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೆರಿಗೆಗೆ ಸುಸಜ್ಜಿತ ಸೌಲಭ್ಯ ಕಲ್ಪಿಸಲಾಗಿದ್ದು, ಗಂಭೀರವೆನಿಸುವ ಗರ್ಭಿಣಿಯರನ್ನು ಆಶಾ ಕಾಯಕರ್ತೆಯರೊಂದಿಗೆ ಜೊತೆ ಮಾಡಿ ಕಳುಹಿಸಲಾಗುತ್ತಿದ್ದು, ಪಾಲಕರು ಸಹ ಕೈ ಜೊಡಿಸಬೇಕು ಅಲ್ಲದೆ ಇಗಾಗಲೆ ಗರ್ಭಿಣಿಯರಿಗೆ ಹಾಗೂ ಶಿಶುಗಳಿಗೆ ತುರ್ತು ಚಿಕಿತ್ಸೆಯ ಅವಶ್ಯಕತೆಯಿದ್ದಲ್ಲಿ ಪ್ರತ್ಯೇಕ ವ್ಯಾಟ್ಸ್‌ಆಪ್ ಗ್ರುಫ್ ರಚಿಸಿ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದ್ದು, ಸಾರ್ವಜನಿಕರು ಸಹ ಮಗಳಿಗೆ 18 ವರ್ಷ ತುಂಬುವ ಪೂರ್ವದಲ್ಲಿ ಮದುವೆ ಮಾಡದಂತೆ ಮತ್ತು ಅದರಿಂದ ಆಗುವ ಅನಾನೂಕೂಲತೆ ಬಗ್ಗೆ ತಿಳಿಸಿ ಬಾಲ್ಯವಿವಾಹ ಮಾಡದಂತೆ ಕೈಜೋಡಿಸಲು ಜಾಗೃತಿಯನ್ನು ಆಸ್ಪತ್ರೆಯಲ್ಲೂ ಸಹ ಕೈಗೊಳ್ಳಲು ವಿನಂತಿಸಿದರು.
ಇದೆ ಸಂದರ್ಭದಲ್ಲಿ ಆಯುಷ್ಮಾನ್, ಭಾರತ್, ರಕ್ತದೊತ್ತಡ, ಸಕ್ಕರೆ ಕಾಯಿಲೆ ಚಿಕಿತ್ಸೆ, ಕುಟುಂಬ ಕಲ್ಯಾಣ ತಾತ್ಕಾಲಿಕ ವಿಧಾನಗಳು, ಕ್ಷಯರೋಗ, ಮಲೇರಿಯಾ, ಡೆಂಗ್ಯು ನಿಯಂತ್ರಣ, ಮಾನಸಿಕ ರೋಗ ನಿರ್ವಹಣೆ, ಆರೋಗ್ಯ ಶಿಕ್ಷಣ ಕುರಿತಂತೆ ಚರ್ಚಿಸಲಾಯಿತು. ವಿಮ್ಸ್ ಪ್ರಾಂಶುಪಾಲ ಡಾ ಎನ್ ಮಂಜುನಾಥ್, ವಿಭಾಗಗಳ ಮುಖ್ಯಸ್ಥರು, ಡಾ ಕೃಷ್ಣ, ಡಾ ದುರುಗಪ್ಪ, ಡಾ ವೀರೇಂದ್ರ ಕುಮಾರ, ಡಾ ಯೋಗೇಶ್, ಡಾ ಬಸವರಾಜ್, ಡಾ ವಿಶ್ವನಾಥ್, ಡಾ ಚಂದ್ರಶೇಖರ, ಕಾರ್ಯಕ್ರಮ ಅನುಷ್ಟಾನ ಅಧಿಕಾರಿಗಳು ಡಾ ಅಬ್ದುಲ್ಲಾ, ಡಾ ಮರಿಯಂಬಿ.ವಿ ಕೆ. ಡಾ ಪೂರ್ಣಿಮಾ ಕಟ್ಟಿಮನಿ, ವಿರೇಂದ್ರಕುಮಾರ, ಡಾ ಹನುಮಂತಪ್ಪ, ಟಿಬಿ ಸ್ಯಾನಿಟೊರಿಯಮ್‌ನ ಡಾ ಪಾಂಡುರಂಗ, ಡಾ ಗೌಥಮ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಬಿಎಮ್‌ಡಬ್ಲ್ಯು ಸಂತೋಷ್, ಸಾಸ್ಟ್ ಕೋ-ಆರ್ಡಿನಟರ್ ಡಾ ಮಯೂರಿ, ಡಿಎನ್‌ಓ ಗಿರೀಶ್, ಡಿಪಿಎಮ್, ವೆಂಕೋಬ ನಾಯ್ಕ್, ಡಿಎಎ ಬಸವರಾಜ್, ಇ- ಪ್ರೊಗ್ರಾಮರ್ ರಾಧಿಕಾ, ಡಿಪಿಸಿ ಅರ್ಚನಾ, ಅರುಣ್ ಕುಮಾರ, ಗೋಪಾಲ್, ವೀರಭದ್ರಪ್ಪ, ಹಾಜರಿದ್ದರು.