ಹುತಾತ್ಮರ ಸೇವೆ ಗೌರವಿಸೋಣ: ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ

Ravi Talawar
ಹುತಾತ್ಮರ ಸೇವೆ ಗೌರವಿಸೋಣ: ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ
WhatsApp Group Join Now
Telegram Group Join Now
ಬಳ್ಳಾರಿ,ಅ.21: ದೇಶಕ್ಕಾಗಿ ದೇಶದ ರಕ್ಷಣೆಗಾಗಿ ವಿಧಿವಶರಾದ ಮತ್ತು ಸಾರ್ವಜನಿಕರ ನೆಮ್ಮದಿಗೆ ಕಾರಣರಾದ ಪೊಲೀಸರ ಹುತಾತ್ಮರ ಬಗ್ಗೆ ಗೌರವ ಭಾವನೆ ಹೊಂದಬೇಕು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಹೇಳಿದರು.
ಮಂಗಳವಾರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಏರ್ಪಡಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ದೇಶದ ಎಲ್ಲಾ ರಾಜ್ಯ ಮತ್ತು ಕೇಂದ್ರ, ಅರೆಸೇನಾ ಪಡೆಗಳಲ್ಲಿ ದೇಶದ ಆಂತರಿಕ ಭದ್ರತೆಗಾಗಿ ಸಮವಸ್ತ್ರಗಳ ಮೂಲಕ ಕರ್ತವ್ಯದಲ್ಲಿ ಹುತಾತ್ಮರಾದವರ ಸೇವೆಗೆ ನಮನ ಸಲ್ಲಿಸಬೇಕು ಎಂದು ಸ್ಮರಿಸಿದರು.
ಪೊಲೀಸರು ನನಗಿಂತ ನನ್ನ ಕರ್ತವ್ಯ ಮೇಲು ಎಂದು ಭಾವಿಸುತ್ತಾರೆ. ನಾವು ವ್ಯಕ್ತಿಯನ್ನು ಕಳೆದುಕೊಳ್ಳುವುದಿಲ್ಲ, ಬದಲಾಗಿ ಅಮೂಲ್ಯ ಜೀವವನ್ನು ಕಳೆದುಕೊಳ್ಳುತ್ತೇವೆ. ಸಮಾಜದ ಶಾಂತಿಯ ಬದುಕಿಗೆ ಪೊಲೀಸರ ಸೇವೆ ಅತ್ಯಂತ ಶ್ಲಾಘನೀಯವಾದದ್ದು. ಪೊಲೀಸರು ಕರ್ತವ್ಯದ ಒಂದು ಮಾನವ ಸಂಪನ್ಮೂಲ ಎಂದು ಹೇಳಿದರು.
ಬಳ್ಳಾರಿ ವಲಯ ಉಪ ಪೊಲೀಸ್ ಮಹಾ ನಿರೀಕ್ಷಕರಾದ ವರ್ತಿಕ ಕಟಿಯಾರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪೊಲೀಸ್ ಹುತಾತ್ಮರ ದಿನವನ್ನು ಪ್ರತಿ ವರ್ಷ ಅಕ್ಟೋಬರ್ 21 ರಂದು ಆಚರಿಸಲಾಗುತ್ತದೆ. ಈ ದಿನವನ್ನು ಪೊಲೀಸ್ ಸಂಸ್ಮರಣಾ ದಿನ ಎಂದೂ ಕರೆಯುತ್ತೇವೆ. 1958 ರಲ್ಲಿ ಲಡಾಖ್‌ನ ಹಾಟ್ ಸ್ಟ್ರಿಂಗ್ ನಲ್ಲಿ ಚೀನಾ ಸೈನಿಕರೊಂದಿಗಿನ ಘರ್ಷಣೆಯಲ್ಲಿ ಪ್ರಾಣತ್ಯಾಗ ಮಾಡಿದ 10 ಪೊಲೀಸ್ ಅಧಿಕಾರಿಗಳನ್ನು ಗೌರವಿಸಲು 1960 ರ ಅಕ್ಟೋಬರ್ 21 ರಂದು, ವೀರ ಪೊಲೀಸರ ತ್ಯಾಗವನ್ನು ಗೌರವಿಸಲು ಪೊಲೀಸ್ ಸಂಸ್ಮರಣಾ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ ಅವರು ಮಾತನಾಡಿ, ಪೊಲೀಸರ ತ್ಯಾಗ ಮತ್ತು ರಾಷ್ಟ್ರೀಯ ಭದ್ರತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ಎಲ್ಲರೂ ಕೈಜೋಡಿಸಬೇಕು. ದೇಶದಲ್ಲಿ 191 ಪೊಲೀಸರು ಮತ್ತು ಕರ್ನಾಟಕದಲ್ಲಿ 8 ಜನ ಪೊಲೀಸರು ಹುತಾತ್ಮರಾಗಿದ್ದರೆ ಎಂದು ಹೇಳಿದರು.
ಇದಕ್ಕೂ ಮೊದಲು ಆರ್‌ಪಿಎಫ್ ಕಮಾಂಡರ್ ಸಿಕೀಂದ್ರ ಅವರು ಪೊಲೀಸ್ ತುಕಡಿಗಳಿಂದ ವಂದನೆ ಸ್ವೀಕರಿಸಿದರು. ನಂತರ ಪಥ ಸಂಚಲನ ಮೂಲಕ ಹುತಾತ್ಮರ ಶಾಂತಿಗಾಗಿ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಆ ಬಳಿಕ ಧ್ವಜವನ್ನು ಅರ್ಧಕ್ಕೆ ಇಳಿಸಿ ಏರಿಸಲಾಯಿತು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೆ.ಪಿ.ರವಿಕುಮಾರ್, ಎಸ್.ನವೀನ್ ‌ಕುಮಾರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ವರ್ಗ ಕುಟುಂಬ ವರ್ಗದವರು, ಸಾರ್ವಜನಿಕರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article