ವಿಜಯಪುರ : (ಡಿ.13) ಮಕ್ಕಳ ಮೇಲಿನ ಲೈಂಗಿಕ ಶೋಷಣೆ ವಿರೋಧಿಸಿ ಜಾಗೃತಿ ಮೂಡಿಸುವ ಉದ್ದೇಶದಿಂದ, ಗಾನಯೋಗಿ ಸಂಘದ ವತಿಯಿಂದ ವಿಜಯಪುರ ನಗರದ ಗಾಂಧಿ ಚೌಕ್‌ನ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಪೋಕ್ಸೋ ಕಾಯ್ದೆ ಹಾಗೂ ಮಕ್ಕಳ ಶೋಷಣೆ ವಿರೋಧಿ ಜಾಗೃತಿ ಅಭಿಯಾನದ ಅಂಗವಾಗಿ ಗೋಡೆಚಿತ್ರ ಹಾಗೂ ಜಾಗೃತಿ ಸಂದೇಶಗಳನ್ನು ಅಳವಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷರಾದ ಪ್ರಕಾಶ್ ಆರ್.ಕೆ., ಮಕ್ಕಳ ಮೇಲಿನ ಲೈಂಗಿಕ ಶೋಷಣೆ ತಡೆಯುವುದು ಕೇವಲ ಕಾನೂನುಬದ್ಧ ಕರ್ತವ್ಯವಲ್ಲ, ಸಮಾಜದ ಪ್ರತಿಯೊಬ್ಬರ ಮಾನವೀಯ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಮಕ್ಕಳಿಗೆ ತಮ್ಮ ಹಕ್ಕುಗಳ ಅರಿವು, ಧೈರ್ಯ, ಆತ್ಮರಕ್ಷಣೆ ಹಾಗೂ ಕಾನೂನು ಜ್ಞಾನ ನೀಡುವುದು ಇಂದಿನ ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಜಾಗೃತಿ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿನಿಯರಲ್ಲಿ ತಮ್ಮ ಮೇಲಿನ ಯಾವುದೇ ಶೋಷಣೆ ಅಥವಾ ಅನ್ಯಾಯದ ವಿರುದ್ಧ ಧೈರ್ಯವಾಗಿ ಧ್ವನಿ ಎತ್ತುವ ಮನೋಭಾವ ಬೆಳೆಸುವ ಪ್ರಯತ್ನ ಮಾಡಲಾಗಿದೆ. ಮಕ್ಕಳ ಸುರಕ್ಷತೆ ಹಾಗೂ ಶೋಷಣೆಯಿಂದ ಮುಕ್ತ ಸಮಾಜ ನಿರ್ಮಾಣದ ದಿಟ್ಟ ಹೆಜ್ಜೆಯಾಗಿ ಈ ಅಭಿಯಾನ ಕೈಗೊಳ್ಳಲಾಗಿದೆ ಎಂದು ಸಂಘದ ಸದಸ್ಯರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗಾನಯೋಗಿ ಸಂಘದ ಸದಸ್ಯರಾದ ಕಿರಣ್ ಶಿವಣ್ಣನವರ, ರಾಜಕುಮಾರ್ ಹೊಸಟ್ಟಿ, ರವಿ ರತ್ನಾಕರ್, ಸಚಿನ್ ವಾಲಿಕಾರ್, ಮಹೇಶ್ ಕುಂಬಾರ್, ಸಂತೋಷ್ ಚೌವ್ಹಾಣ್, ವಿಠ್ಠಲ್ ಗುರುವಿನ್, ವೀರೇಶ್ ಸೊನ್ನಲಗಿ, ವಿಕಾಸ್ ಕಂಬಾಗಿ, ಸಚಿನ್ ಚೌವ್ಹಾಣ್, ಬಾಬು, ಸಂದೀಪ್, ಪ್ರದೀಪ್, ಹರೀಶ್, ಡಿಜೆ ಸಾಗರ ಉಪಸ್ಥಿತರಿದ್ದರು.
ಸುರಕ್ಷಿತ ಭವಿಷ್ಯ ನಿರ್ಮಾಣಕ್ಕೆ ಜಾಗೃತಿಯೇ ಮೊದಲ ಹೆಜ್ಜೆ ಎಂಬ ಸಂದೇಶವನ್ನು ಈ ಕಾರ್ಯಕ್ರಮ ಸಾರಿತು.
ಮಕ್ಕಳ ಶೋಷಣೆ ವಿರುದ್ಧ ಜ್ವಾಲೆಯಾಗಿ ಎದ್ದೇಳೋಣ: ಗಾನಯೋಗಿ ಸಂಘದಿಂದ ಜಾಗೃತಿ ಅಭಿಯಾನ


