ಅಥಣಿ: ಗಣೇಶ ಚತುರ್ಥಿ ಹಾಗೂ ಇದ್ ಮೀಲಾದ ಹಬ್ಬಗಳನ್ನು ಶಾಂತಿಯುತವಾಗಿ ಮತ್ತು ಸೌಹಾರ್ದತೆಯಿಂದ ಆಚರಿಸುವ ಉದ್ದೇಶದಿಂದ, ಅಥಣಿ ಪೊಲೀಸ್ ಠಾಣೆ ಸಮುದಾಯ ಭವನದಲ್ಲಿ ಶಾಂತಿ ಪಾಲನಾ ಸಭೆ ಸೋಮವಾರ ದಂದು ಯಶಸ್ವಿಯಾಗಿ ನಡೆಯಿತು.
ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಿವೈಎಸ್ಪಿ ಪ್ರಶಾಂತ್ ಮುನ್ನೊಳಿ ಅವರು,
“ಎಲ್ಲಾ ಧರ್ಮಗಳ ಹಬ್ಬಗಳು ಶಾಂತಿಯ ಪಾಠ ನೀಡುವವು. ಹೀಗಾಗಿ ಯಾರೂ ಸಹ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಪ್ರತಿಯೊಬ್ಬ ಸಮುದಾಯದ ವ್ಯಕ್ತಿಯೂ ಜವಾಬ್ದಾರಿಯುತವಾಗಿ ವರ್ತಿಸಿ ಶಾಂತಿ ಸೌಹಾರ್ದತೆಯನ್ನು ಕಾಪಾಡಬೇಕು,ಎಂದು ಹೇಳಿದರು.
ಅವರು ಗಣೇಶ ಚತುರ್ಥಿ ವೇಳೆ, ಪ್ರತಿಯೊಂದು ಗಣಪತಿ ಮಂಟಪದಲ್ಲಿಯೂ ಮಂಡಳಿ ಸದಸ್ಯರು ಕಡ್ಡಾಯವಾಗಿ ಹಾಜರಿದ್ದು ನಿಗಾ ವಹಿಸಬೇಕು. ಧ್ವನಿವರ್ಧಕ ಉಪಕರಣಗಳು ಅಥವಾ ಡಿಜೆ ಬಳಸುವಂತಿಲ್ಲ. ಕಾನೂನುಬಾಹಿರ ಚಟುವಟಿಕೆ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಪ್ರತಿಯೊಂದು ಪೆಂಡಾಲ್‌ನಲ್ಲಿ ಸಿ.ಸಿ.ಟಿ.ವಿ ಅಳವಡಿಸುವುದು ಕಡ್ಡಾಯ, ಎಂದು ತಿಳಿಸಿದ್ದರೂ.
ಸಭೆಯಲ್ಲಿ ಪೌರ ಸೇವೆಗಳ ವ್ಯವಸ್ಥೆ, ವಾಹನ ದಟ್ಟಣೆ ನಿಯಂತ್ರಣ, ಸಂಚಾರ ವ್ಯವಸ್ಥೆ, ಬೆಳಕಿನ ವ್ಯವಸ್ಥೆ, ನೀರಿನ ಪೂರೈಕೆ ಕುರಿತು ವಿವಿಧ ಸಲಹೆಗಳು ಪ್ರಸ್ತಾಪವಾಗಿದ್ದು, ಅಧಿಕಾರಿಗಳು ಸೂಕ್ತ ಭರವಸೆ ನೀಡಿದರು.
ಈ ಸಭೆಯಲ್ಲಿ ಸಿಪಿಐ ಸಂತೋಷ್ ಹಳ್ಳೂರ, ಪಿಎಸ್ಸೈ ಗಿರಮಲಪ್ಪ ಉಪ್ಪಾರ, ಅಪರಾಧ ವಿಭಾಗದ ಪಿಎಸ್ಸೈ ಮಾಲಿಕಾರ್ಜುನ ತಳವಾರ್ ಸೇರಿದಂತೆ ಪಟ್ಟಣದ ಹಿರಿಯ ನಾಗರಿಕರು, ಸಾರ್ವಜನಿಕರು ಉಪಸ್ಥಿತರಿದ್ದರು.