ಬೆಂಗಳೂರು, ಜೂನ್ 29: ಡಿಸಿಎಂ ಡಿಕೆ ಶಿವಕುಮಾರ್ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವಂತೆ ಸಿದ್ದರಾಮಯ್ಯನವರಲ್ಲಿ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಜಗದ್ಗುರು ಚಂದ್ರಶೇಖರನಾಥ ಸ್ವಾಮೀಜಿ ಬಹಿರಂಗವಾಗಿ ಮನವಿ ಮಾಡಿದ್ದು ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ.
ಈ ಮಧ್ಯೆ, ತಮ್ಮ ಹೇಳಿಕೆಯನ್ನು ಸಮರ್ಥಿಸಿ ‘ಟಿವಿ9’ ಜತೆ ಮಾತನಾಡಿರುವ ಸ್ವಾಮೀಜಿ, ಅಂದು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ನಾನು ಮಾತನಾಡಿದ್ದು ವೈಜ್ಞಾನಿಕವಾಗಿ ಅಷ್ಟೆ. ಸಿಎಂ ಹುದ್ದೆ ವಿಚಾರವಲ್ಲದೆ ಇನ್ನೂ ಮೂರು ಅಂಶಗಳನ್ನು ಪ್ರಸ್ತಾಪಿಸಿದ್ದೆ ಎಂದು ತಿಳಿಸಿದ್ದಾರೆ. ಅದರಲ್ಲಿ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಇಬ್ಭಾಗವಾಗಬೇಕು. ಹಾಗಾದರೆ ಮಾತ್ರ ಉತ್ತರ ಕರ್ನಾಟಕ ಅಭಿವೃದ್ಧಿ ಸಾಧ್ಯ ಎಂದಿರುವುದಾಗಿ ಸ್ವಾಮೀಜಿ ತಿಳಿಸಿದ್ದಾರೆ.
ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಆಡಿದ ಮಾತುಗಳಿಗೆ ಮತ್ತು ನಿಲುವಿಗೆ ಇಂದೂ ಸಹ ಬದ್ಧನಾಗಿದ್ದೇನೆ. ಕೆಂಪೇಗೌಡರ ಜಯಂತಿಯಂದು 3 ವಿಚಾರಗಳನ್ನು ಪ್ರಸ್ತಾಪ ಮಾಡಿದ್ದೆ. ಮೊದಲ ಅಂಶ ಬೆಂಗಳೂರು ವಿಭಜನೆಗೆ ಸಂಬಂಧಿಸಿದ್ದು. ಬೆಂಗಳೂರನ್ನು 3 ಅಥವಾ 5 ಭಾಗ ಮಾಡುವುದು ಬೇಡ ಎಂಬ ವಿಚಾರದ ಬಗ್ಗೆ ಮಾತನಾಡಿದ್ದೆ. ಕೆಂಪೇಗೌಡರೆಂದರೆ ಬೆಂಗಳೂರು, ಬೆಂಗಳೂರೆಂದರೆ ಕೆಂಪೇಗೌಡರು. ಆದ್ದರಿಂದ ಬೆಂಗಳೂರು ವಿಭಜನೆ ಮಾಡಿದರೆ ಕೆಂಪೇಗೌಡರ ಹೆಸರು ಹೋಗುತ್ತೆ. ಕೆಂಪೇಗೌಡ ಉಳಿಯಬೇಕಾದ್ರೆ ಬೆಂಗಳೂರು ಒಂದಾಗಿರಬೇಕು ಎಂದು ಹೇಳಿದ್ದೆ.
ಎರಡನೆಯೇ ಅಂಶವೆಂದರೆ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎರಡು ಭಾಗ ಆಗಲಿ ಎಂಬುದು. ಎರಡು ಭಾಗ ಆದಾಗ ಮಾತ್ರ ಉತ್ತರ ಕರ್ನಾಟಕ ಅಭಿವೃದ್ಧಿ ಸಾಧ್ಯ ಎಂದು ಅವರು ತಿಳಿಸಿದ್ದಾರೆ.