ಜು.29 ರಿಂದ ಆ.14 ರ ವರೆಗೆ ಕುಷ್ಟರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನ

Ravi Talawar
ಜು.29 ರಿಂದ ಆ.14 ರ ವರೆಗೆ ಕುಷ್ಟರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನ
WhatsApp Group Join Now
Telegram Group Join Now

ಬಳ್ಳಾರಿ,ಜು.23 ಇದೇ ಜು.29 ರಿಂದ ಆ.14 ರ ವರೆಗೆ ಜಿಲ್ಲೆಯಲ್ಲಿ ನಡೆಯುವ ಕುಷ್ಟರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನವನ್ನು ಅಂತರ್ ಇಲಾಖೆ ಹಾಗೂ ಎನ್‍ಜಿಓಗಳ ಸಮನ್ವಯತೆಯಿಂದ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಸೂಚಿಸಿದರು.
ನಗರದ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಕುಷ್ಟರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನ ಕುರಿತ ಜಿಲ್ಲಾ ಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು.
ಕುಷ್ಟರೋಗ ಸಾಂಕ್ರಾಮಿಕ ರೋಗವಾಗಿದ್ದು, ಇದು ಮೈಕೋಬ್ಯಾಕ್ಟೀರಿಯಂ ಲೆಪ್ರೈ ಎಂಬ ರೋಗಾಣುವಿನಿಂದ ಬರುತ್ತದೆ. ಇದು ಚಿಕಿತ್ಸೆ ಪಡೆಯದೇ ಇರುವ ಕುಷ್ಟರೋಗಿಯು ಕೆಮ್ಮಿದಾಗ, ಸೀನಿದಾಗ ಬರುವ ತುಂತುರು ಹನಿಗಳು ಉಸಿರಾಡುವ ಗಾಳಿಯ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುವಂತಹ ರೋಗವಾಗಿದ್ದು, ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದರಿಂದ ಅಂಗವಿಕಲತೆಯಾಗುವುದನ್ನು ತಪ್ಪಿಸಬಹುದು ಎಂದು ಹೇಳಿದರು.
ಹೊಸದಾಗಿ ಕಂಡುಬರುವ ಕುಷ್ಟರೋಗ ಪ್ರಕರಣಗಳಿಗೆ ಉಂಟಾಗುವ ಅಂಗವಿಕಲತೆಯನ್ನು ಶೇಕಡವಾರು 10 ಲಕ್ಷ ಜನಸಂಖ್ಯೆಗೆ ಅನುಗುಣವಾಗಿ ಒಂದಕ್ಕಿಂತ ಕಡಿಮೆ ಮಾಡಲು ಮತ್ತು ಸುಪ್ತ ಕುಷ್ಟರೋಗ ಪ್ರಕರಣಗಳನ್ನು ಪ್ರಾರಂಭದ ಹಂತದಲ್ಲಿಯೇ ಪತ್ತೆ ಹಚ್ಚಲು ಜು.29 ರಿಂದ ಆ.14 ರ ವರೆಗೆ ನಡೆಯುವ ಕುಷ್ಟರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನವನ್ನು ಎನ್‍ಜಿಓ ಹಾಗೂ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಯಶಸ್ವಿಗೊಳಿಸಬೇಕು ಎಂದು ಅಧಿಕಾರಿ/ಸಿಬ್ಬಂದಿಗಳಿಗೆ ಕರೆ ನೀಡಿದರು.
ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪುರುಷ ಸ್ವಯಂ ಸೇವಕರು ಮನೆ-ಮನೆಗೆ ಭೇಟಿ ನೀಡಿ ಮನೆಯಲ್ಲಿರುವ 2 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರನ್ನು ತಪಾಸಣೆ ಮಾಡಿ ಕುಷ್ಟರೋಗದ ಬಗ್ಗೆ ಮಾಹಿತಿ ನೀಡಬೇಕು, ಶಂಕಿತ ಪ್ರಕರಣಗಳು ಕಂಡು ಬಂದಲ್ಲಿ ಅಂತಹವರನ್ನು ಸಾರ್ವಜನಿಕ ಆರೋಗ್ಯ ಕೇಂದ್ರಗಳ ತಜ್ಞ ವೈದ್ಯಾಧಿಕಾರಿಗಳ ಹತ್ತಿರ ರೆಫರಲ್ ಫಾರಂ ನೀಡಿ ತಪಾಸಣೆ ಮಾಡಿಸಿಕೊಳ್ಳಲು ಸಲಹೆ ಮಾಡಬೇಕು. ವೈದ್ಯಾಧಿಕಾರಿಗಳು ತಪಾಸಣೆ ಮಾಡಿ ಕುಷ್ಟರೋಗ ಎಂದು ದೃಢಪಡಿಸಿದ ಮೇಲೆ ಅಗತ್ಯ ಚಿಕಿತ್ಸೆ ನೀಡಬೇಕು ಎಂದು ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ಮಾತನಾಡಿ, ಕುಷ್ಟರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನ ಕಾರ್ಯಕ್ರಮವನ್ನು ಜಿಲ್ಲೆಯ ಬಳ್ಳಾರಿ, ಸಿರುಗುಪ್ಪ, ಸಂಡೂರು ತಾಲೂಕುಗಳಲ್ಲಿ ಹಮ್ಮಿಕೊಳ್ಳಲಾಗಿದ್ದು, ಒಟ್ಟು 2,15,390 ಮನೆಗಳ ತಪಾಸಣಾ ಸಮೀಕ್ಷೆ ಮಾಡುವ ಗುರಿ ಹೊಂದಲಾಗಿದೆ, ಈ ತಪಾಸಣಾ ಸಮೀಕ್ಷೆ ಮಾಡಲು 820 ತಂಡಗಳನ್ನು ರಚಿಸಲಾಗಿದ್ದು, ಒಂದು ತಂಡದಲ್ಲಿ ಆಶಾ ಕಾರ್ಯಕರ್ತೆಯರು ಅಥವಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪುರುಷ ಸ್ವಯಂಸೇವಕರು ಇರುತ್ತಾರೆ ಎಂದು ಸಭೆಗೆ ತಿಳಿಸಿದರು.
ಜಿಲ್ಲೆಯಲ್ಲಿರುವ ವಲಸೆ ಕಾರ್ಮಿಕರು ದುಡಿಯುವ ಪ್ರದೇಶಗಳಾದ ಇಟ್ಟಿಗೆ ಭಟ್ಟಿ, ಬಿಂಚೆ ಮಶಿನ್, ಸಿಮೆಂಟ್ ಬ್ರಿಕ್ಸ್, ರೈಸ್ ಮಿಲ್ ಇಂಡಸ್ಟ್ರಿಗಳು ಸೇರಿದಂತೆ ಇತರೆ 45 ಸ್ಥಳಗಳನ್ನು ಗುರುತಿಸಲಾಗಿದ್ದು, ಆರೋಗ್ಯ ಇಲಾಖೆಯ ತಂಡಗಳು ಭೇಟಿ ನೀಡಿ ತಪಾಸಣಾ ಸಮೀಕ್ಷೆ ಮಾಡಲಿದ್ದಾರೆ ಎಂದು ತಿಳಿಸಿದರು.
ಮಹಾತ್ಮ ಗಾಂಧೀಜಿಯವರು ಕಂಡ ಕನಸು “ಕುಷ್ಟರೋಗ ಮುಕ್ತ ಭಾರತ” ಮಾಡಲು ಆರೋಗ್ಯ ಇಲಾಖೆ ತಂಡಗಳು ತಪಾಸಣೆಗಾಗಿ ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ.ಕೆ.ಜಿ.ವೀರೇಂದ್ರ ಕುಮಾರ್, ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಹನುಮಂತಪ್ಪ, ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಿ.ಕೆ.ಮರಿಯಂಬಿ, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮಾಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ ಸೇರಿದಂತೆ ಎಲ್ಲಾ ತಾಲ್ಲೂಕು ಆರೋಗ್ಯಾಧಿಕಾರಿಗಳು, ಆಡಳಿತ ವೈದ್ಯಾಧಿಕಾರಿಗಳು, ಶುಶೂಷ್ರಕರು ಮತ್ತು ಆಶಾಕಾರ್ಯಕರ್ತೆಯರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article