ಬೆಂಗಳೂರು: ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರಿಗೆ ಸರ್ಕಾರಿ ನಿವಾಸ ಇನ್ನೂ ಸಿಕ್ಕಿಲ್ಲ. ಸರ್ಕಾರಿ ನಿವಾಸಕ್ಕೆ ಆರ್.ಅಶೋಕ್ ಮನವಿ ಮಾಡಿದರೂ ಸರ್ಕಾರ ಮಾತ್ರ ಈವರೆಗೂ ಯಾವುದೇ ಸ್ಪಂದನೆ ನೀಡಿಲ್ಲ. ಈ ಬಗ್ಗೆ 4 ಬಾರಿ ಪತ್ರ ಬರೆದರೂ ಸರ್ಕಾರಿ ನಿವಾಸ ನೀಡದೆ ಇರುವುದು ಚರ್ಚೆಗೆ ಗ್ರಾಸವಾಗಿದೆ.
ವಿಪಕ್ಷ ನಾಯಕನಾಗಿರುವ ನನಗೆ ಯಾವುದಾದರು ಒಂದು ಸರ್ಕಾರಿ ನಿವಾಸ ನೀಡಿ ಎಂದು ಆರ್ ಅಶೋಕ್ ಮನವಿ ಮಾಡಿದ್ದರು. ಈ ಬಗ್ಗೆ ಮುಖ್ಯ ಕಾರ್ಯದರ್ಶಿಗೆ ಪತ್ರದ ಮೂಲಕ ಮನವಿ ಮಾಡಿದ್ದರು. ರೇಸ್ ಕೋರ್ಸ್ ರಸ್ತೆಯಲ್ಲಿರುವ ನಿವಾಸ ಅಥವಾ ಕುಮಾರಕೃಪಾ ನಿವಾಸಕ್ಕೆ ಮನವಿ ಮಾಡಿದ್ದರು. ಆದರೆ, ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ ದು ಎಂದು ಅಶೋಕ ಅವರ ಆಪ್ತರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಚಿವರಿಗೆ ಆದ್ಯತೆಯ ಮೇಲೆ ಅಧಿಕೃತ ನಿವಾಸಗಳನ್ನು ನೀಡಲಾಗಿದೆ, ಆದರೆ ಪ್ರತಿಪಕ್ಷ ನಾಯಕನಿಗೆ ಸಂಬಂಧಿಸಿದಂತೆ ಮೂಲ ಶಿಷ್ಟಾಚಾರವನ್ನು ಅನುಸರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಇದು ರಾಜ್ಯ ಸರ್ಕಾರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ನವೆಂಬರ್‌ನಲ್ಲಿ ಮುಖ್ಯ ಕಾರ್ಯದರ್ಶಿಗೆ ಮತ್ತು ಈ ವರ್ಷದ ಫೆಬ್ರವರಿಯಲ್ಲಿ ಸಿಎಂಗೆ ಅಶೋಕ ಅವರು ಬರೆದ ಪತ್ರದಲ್ಲಿ ನಂ. 1 ಕುಮಾರಕೃಪಾ ಪೂರ್ವ ನಿವಾಸ, ನಂ. 1 ರೇಸ್ ವ್ಯೂವ್ ಕಾಟೇಜ್, ನಂ. 2 ರೇಸ್ ವ್ಯೂವ್ ಕಾಟೇಜ್ ಮೂರರಲ್ಲಿ ಒಂದು ನಿವಾಸಕ್ಕೆ ಆರ್ ಅಶೋಕ್ ಮನವಿ ಮಾಡಿದ್ದರು. ಆದರೆ, ಸರ್ಕಾರ ಇನ್ನೂ ಸ್ಪಂದಿಸಿಲ್ಲ ಎನ್ನಲಾಗಿದೆ.