ಕೆಎಲ್ಇ ಆಸ್ಪತ್ರೆಯ ಪರ್ಟಿಲಿಟಿ ಸೆಂಟರ್ ಉದ್ಘಾಟಿಸಿ, ಶುಭ ಹಾರೈಸಿದ ಸಚಿವರು
ಬೆಳಗಾವಿ : ಡಾ.ಪ್ರಭಾಕರ ಕೊರೆಯವರಂತಹ ದೂರದೃಷ್ಟಿಯ ಮುತ್ಸದ್ದಿಯನ್ನು ಹೊಂದಿರುವ ನಮ್ಮ ಸಮಾಜ, ನಮ್ಮ ಜಿಲ್ಲೆ ಅದೃಷ್ಟಶಾಲಿ. ಅವರು ಸಮಾಜದ ದೊಡ್ಡ ಆಸ್ತಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಶಂಸಿಸಿದ್ದಾರೆ.
ಶುಕ್ರವಾರ ಕೆಎಲ್ಇಎಸ್ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಫರ್ಟಿಲಿಟಿ ಸೆಂಟರ್ ಉದ್ಘಾಟಿಸಿ ಅವರು ಮಾತನಾಡಿದರು. ಕೊರೆಯವರ ದೃರದೃಷ್ಟಿಯ ಫಲವಾಗಿ ಇಂದು ಸಂಸ್ಥೆ ಇಷ್ಟು ದೊಡ್ಡದಾಗಿ ಬೆಳೆದಿದೆ. ಉತ್ತರ ಕರ್ನಾಟಕ, ದಕ್ಷಿಣ ಮಹಾರಾಷ್ಟ್ರ, ಗೋವಾದ ಜೊತೆಗೆ ವಿದೇಶಗಳಿಂದ ಸಹ ಶಿಕ್ಷಣ ಮತ್ತು ಆರೋಗ್ಯ ಸೇವೆಗಾಗಿ ಬೆಳಗಾವಿಗೆ ಬರುತ್ತಿದ್ದಾರೆ. ಕೆಎಲ್ಇ ಸಂಸ್ಥೆಯ ಆಸ್ಪತ್ರೆಗೆ ಈ ರಾಷ್ಟ್ರದ ಎಲ್ಲ ಪ್ರಧಾನ ಮಂತ್ರಿಗಳು, ರಾಷ್ಟ್ರಪತಿಗಳು ಭೇಟಿ ನೀಡಿದ್ದಾರೆ ಎಂದರೆ ಸಂಸ್ಥೆ ಮತ್ತು ಕೊರೆಯವರ ಜಾಣ್ಮೆ, ತಾಖತ್ತು ತಿಳಿಯುತ್ತದೆ ಎಂದು ಹೇಳಿದರು.
ಸಾಮಾಜಿಕ ಬದ್ಧತೆ ಇಟ್ಟುಕೊಂಡು ರಾಜಕೀಯ ಮಾಡುವ ಮುತ್ಸದ್ದಿ ಕೊರೆಯವರು. ಅವರು ನಮ್ಮ ಪಕ್ಷದಲ್ಲಿದ್ದರೆ ಚೆನ್ನಾಗಿತ್ತು ಎಂದು ಎಲ್ಲ ಪಕ್ಷಗಳೂ ಅಂದುಕೊಳ್ಳುವಷ್ಟು ದೊಡ್ಡ ಆಸ್ತಿ ಅವರು. ಸಂಸ್ಥೆಯ ಎಲ್ಲ ಸಿಬ್ಬಂದಿಯ ಸಹಕಾರದಿಂದ ಸಂಸ್ಥೆ ಬೆಳೆದಿದೆಯಾದರೂ ಟೀಮ್ ಲೀಡರ್ ಶಕ್ತಿ ಬಹಳಷ್ಟು ಪ್ರಮುಖವಾಗುತ್ತದೆ. 41 ವರ್ಷದ ಹಿಂದೆ ಅವರು ಸಂಸ್ಥೆಯ ಚುಕ್ಕಾಣಿ ಹಿಡಿಯುವಾಗ 34 ಇದ್ದ ಅಂಗ ಸಂಸ್ಥೆಗಳ ಸಂಖ್ಯೆ ಈಗ 310ಕ್ಕೆ ಏರಿದೆ ಎಂದರೆ ಅವರ ಸಾಧನೆಯನ್ನು ಗಮನಿಸಬಹುದು ಎಂದು ಹೆಬ್ಬಾಳಕರ್ ಹೇಳಿದರು.
ದಂಪತಿಗಳ ಮುಖದಲ್ಲಿ ನಗು ತರಿಸಲಿ
ಕೆಎಲ್ಇ ಆಸ್ಪತ್ರೆಯಲ್ಲಿ ಆರಂಭಿಸಿರುವ ನೂತನ ಅತ್ಯಾಧುನಿಕ ಫರ್ಟಿಲಿಟಿ ಸೆಂಟರ್ ನ್ನು ಸಂಪೂರ್ಣ ವೀಕ್ಷಿಸಿ, ಮಾಹಿತಿ ಪಡೆದ ಸಚಿವರು, ನೋವಿನಲ್ಲಿರುವ ದಂಪತಿಯ ಮುಖದಲ್ಲಿ ನಗು ತರಿಸುವ ಕೆಲಸವನ್ನು ಫರ್ಟಿಲಿಟಿ ಸೆಂಟರ್ ಮಾಡಲಿ ಎಂದು ಹಾರೈಸಿದರು.
ಹಿಂದಿನ ಕಾಲದಲ್ಲಿ ಮಕ್ಕಳಾಗದ ಹೆಣ್ಣು ಮಕ್ಕಳನ್ನು ದೂಷಿಸುವ ಅನಿಷ್ಟ ಪದ್ಧತಿ ಇತ್ತು. ಅದೊಂದು ಶಾಪ ಎಂದು ಪರಿಗಣಿಸುತ್ತಿದ್ದರು. ಆದರೆ ಇಂದು ಕಾಲ ಸಾಕಷ್ಟು ಬದಲಾಗಿದೆ. ವಿಜ್ಞಾನವೂ ಬೆಳೆದಿದೆ. ಹಾಗಾಗಿ ಯಾರೂ ಮಕ್ಕಳಿಲ್ಲ ಎಂದು ಕೊರಗಬೇಕಾದ ಸ್ಥಿತಿ ಇಲ್ಲ. ಇಲ್ಲಿ ಅತ್ಯಂತ ಪರಿಣಿತ ವೈದ್ಯರ ತಂಡ ಕೆಲಸ ಮಾಡುತ್ತಿರುವುದನ್ನು ತಿಳಿದು ಸಂತೋಷವಾಯಿತು. ಈ ಸೆಂಟರ್ ನ್ನು ಉದ್ಘಾಟಿಸುವ ಅವಕಾಶ ನನಗೆ ಸಿಕ್ಕಿದ್ದು ಬಹಳಷ್ಟು ಖುಷಿ ನೀಡಿದೆ ಎಂದು ಹೆಬ್ಬಾಳಕರ್ ಹೇಳಿದರು.
ಜನರಿಗಾಗಿ, ಜನಸೇವೆಗಾಗಿ ಕೆಎಲ್ಇ
ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿ, ಕೆಎಲ್ಇ ಸಂಸ್ಥೆ ದುಡ್ಡಿಗಾಗಿ ಎಂದೂ ಕೆಲಸ ಮಾಡುವುದಿಲ್ಲ. ಜನರಿಗಾಗಿ, ಜನಸೇವೆಗಾಗಿ ಇರುವ ಸಂಸ್ಥೆ ನಮ್ಮದು ಎಂದರು.
ಎಲ್ಲ ಕಡೆ ಫರ್ಟಿಲಿಟಿ ಸೆಂಟರ್ ಹಣ ಮಾಡುವ ದೊಡ್ಡ ಬಿಸಿನೆಸ್ ಆಗಿತ್ತು. ನಮ್ಮ ಸಂಸ್ಥಯಲ್ಲಿ ಆ ರೀತಿ ಆಗಬಾರದೆನ್ನುವ ಉದ್ದೇಶವಿಟ್ಟುಕೊಂಡು ಬಹಳಷ್ಟು ಎಚ್ಚರಿಕೆ ವಹಿಸಿ ಆರಂಭಿಸಲಾಗಿದೆ. ನಮ್ಮ ಸಂಸ್ಥೆ ಎಂದೂ ದುಡ್ಡಿಗೆ ಪ್ರಾಮುಖ್ಯತೆ ಕೊಡುವುದಿಲ್ಲ. ನಮ್ಮದು ಧರ್ಮಾರ್ಥ ಸಂಸ್ಥೆ. ಎಲ್ಲರ ಸಹಕಾರದಿಂದ, ಟೀಮ್ ವರ್ಕ್ ನಿಂದಾಗಿ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆದಿದೆ ಎಂದು ಅವರು ಹೇಳಿದರು.
ಕೆಎಲ್ಇ ಸಂಸ್ಥೆಯ ಆಯುರ್ವೇದ ಆಸ್ಪತ್ರೆ ಅತ್ಯಂತ ದೊಡ್ಡದಾಗಿ ಬೆಳೆದಿದೆ. ವಿದೇಶಗಳಿಂದ ಸಹ ರೋಗಿಗಳು ಬಹಳ ದೊಡ್ಡ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಕೆಲವು ದೇಶಗಳಲ್ಲಿ ನಮ್ಮ ಸೆಂಟರ್ ಆರಂಭಿಸಲಾಗಿದೆ. ಆಯುರ್ವೇದಕ್ಕೆ ಪುನರ್ಜನ್ಮ ನೀಡಲು ಪ್ರಯತ್ನಿಸಲಾಗುತ್ತಿದೆ. ಹುಬ್ಬಳ್ಳಿಯಲ್ಲಿ 2 -3 ತಿಂಗಳಲ್ಲಿ ಅತ್ಯಾಧುನಿಕ ಆಸ್ಪತ್ರೆ ಆರಂಭಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಮೆಡಿಕಲ್ ಕಾಲೇಜು ಆರಂಭಿಸುವ ಯೋಚನೆ ಇದೆ. ಬೆಳಗಾವಿಯ ಸಿವಿಲ್ ಆಸ್ಪತ್ರೆಯನ್ನು ನಮಗೆ ವಹಿಸಿಕೊಟ್ಟರೆ ನಡೆಸಲು ಸಿದ್ಧ ಎಂದು ಕೋರೆ ತಿಳಿಸಿದರು.
ಮಹಾರಾಷ್ಟ್ರದಲ್ಲಿ ಕೆಎಲ್ಇ ವಿಶ್ವವಿದ್ಯಾಲಯ ಆರಂಭಿಸುವ ಪ್ರಯತ್ನ ನಡೆದಿದೆ. ಅಲ್ಲಿನ ಸಹಕಾರ ಜಾಗ ಸೇರಿದಂತೆ ಎಲ್ಲ ರೀತಿಯ ಸಹಕಾರ ನೀಡುತ್ತಿದೆ. ಕರ್ನಾಟಕದಲ್ಲೂ ಸರಕಾರದ ಜೊತೆ ಕೆಲಸ ಮಾಡಲು ನಾವು ಸಿದ್ಧರಿದ್ದೇವೆ ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಕೆ.ಎಲ್.ಇ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಮತ್ತು ರಿಸರ್ಚ್ ನ ಉಪ ಕುಲಪತಿಗಳಾದ ಡಾ. ನಿತಿನ್ ಗಂಗಾನೆ, ಕೆ.ಎಲ್.ಇ ಸಂಸ್ಥೆಯ ಜವಾಹರಲಾಲ್ ನೆಹರು ಮೆಡಿಕಲ್ ಕಾಲೇಜಿನ ಪ್ರಿನ್ಸಿಪಾಲ್ ಡಾ.ಎನ್.ಎಸ್.ಮಹಾಂತಶೆಟ್ಟಿ, ಮೆಡಿಕಲ್ ಡೈರೆಕ್ಟರ್ ಎಂ.ದಯಾನಂದ, ಡಾ.ವಿ.ಎಸ್.ಸಾಧುನವರ್, ಡಾ.ವಿಶ್ವನಾಥ್ ಪಾಟೀಲ, ಅಮರ್ ಬಾಗೇವಾಡಿ, ಡಾ.ರಾಜಶೇಖರ್, ಡಾ.ವಿ.ಡಿ.ಪಾಟೀಲ, ಡಾ.ಎಂ.ವಿ.ಜಾಲಿ, ಡಾ.ಮಾಧವ್ ಪ್ರಭು, ಡಾ.ನಂದೇಶ್ವರ್ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.