ಬಳ್ಳಾರಿ,ಜು.೨೪: ಜೂ.೨೭ರಂದು ಬೆಂಗಳೂರಿನ ವಿಧಾನಸೌಧದಲ್ಲಿ ತುಂಗಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯು ನಡೆದಿದೆ. ಸಭೆಯಲ್ಲಿ ಬೇಸಿಗೆ ಬೆಳೆಗೆ ಬಲದಂಡೆಯ ಎಲ್ ಎಲ್ ಸಿ ಕಾಲುವೆಗೆ ಹಾಗೂ ಎಡದಂಡೆಯ ಎಲ್ ಬಿ ಎಂ ಸಿ ಕಾಲುವೆಗೆ ನೀರು ಬಿಡುವ ಮತ್ತು ಜಲಾಶಯದ ಗೇಟುಗಳ ಅಳವಡಿಕೆಯ ಸಮಯದ ಕುರಿತು ನಿರ್ಧರಿಸಲು, ಜುಲೈ ತಿಂಗಳ ಕೊನೆಯ ವಾರ ಅಥವಾ ಆಗಸ್ಟ್ ಮೊದಲನೇ ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ಕರೆದು ನೀರಾವರಿ ತಜ್ಞರೊಂದಿಗೆ ಚರ್ಚಿಸಿ, ಬೇಸಿಗೆ ಬೆಳೆಗೆ ನೀರು ಕೊಡುವ ನಿರ್ಧಾರವನ್ನು ತೆಗೆದುಕೊಳ್ಳೋಣ ಎಂದು ಸಭೆಯಲ್ಲಿ ತೀರ್ಮಾನವಾಗಿತ್ತು . ಸಭೆಯ ತೀರ್ಮಾನದಂತೆ ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಬಿ.ನಾಗೇಂದ್ರರವರನ್ನು ಭೇಟಿ ಮಾಡಿ, ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷ ಶಿವರಾಜ್ ತಂಗಡಿ ಅವರೊಂದಿಗೆ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಜಲಾಶಯದ ನೀರಾವರಿ ಸಲಹ ಸಮಿತಿ ಸಭೆ ಕರೆದು, ಬೇಸಿಗೆ ಬೆಳೆಗೆ ನೀರು ಕೊಡುವ ಕುರಿತು ಸೂಕ್ತ ನಿರ್ಣಯ ಕೈಗೊಳ್ಳಬೇಕೆಂದು ತುಂಗಭದ್ರಾ ರೈತ ಸಂಘದಿಂದ ಮನವಿ ಸಲ್ಲಿಸಿದೆ.