ಬಳ್ಳಾರಿ, ಮಾ.13: ಜಿಲ್ಲೆಯಾದ್ಯಂತ ಇಂದಿನಿಂದ 14 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಗರ್ಭಕಂಠದ ಕ್ಯಾನ್ಸರ್ ಬರುವುದನ್ನು ತಡೆಯಲು,ಹೂಮನ್ ಪ್ಯಾಪಿಲೋಮ ಎಂಬ ವೈರಸ್ (ಎಚ್.ಪಿ.ವಿ) ಲಸಿಕೆ ನೀಡುವ ವಿಶೇಷ ಅಭಿಯಾನಕ್ಕೆ ಇಂದು ಜಿಲ್ಲಾ ಆಸ್ಪತ್ರೆಯಲ್ಲಿ ಚಾಲನೆ ನೀಡಲಾಗಿದೆ.
ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಇದಕ್ಕೆ ಚಾಲನೆ ನೀಡಿ. ಈ ಲಸಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ತಪ್ಪು ಸುದ್ದಿಗಳನ್ನು ನಂಬ ಬೇಡಿ. ಇದನ್ನು ಎಲ್ಲಾ ರೀತಿ ಪ್ರಯೋಗ ಮಾಡಿ ಹಾಕಲಾಗುತ್ತಿದೆ. ಇತರೇ ಲಸಿಕೆ ಹಾಕಿಸಿಕೊಂಡಾಗ ಬರುವ ಒಂದಿಷ್ಟು ಜ್ವರ ಕೆಲವರಿಗೆ ಮಾತ್ರ ಬರಬಹುದು. ಯಾವುದೇ ಸೈಡ್ ಎಫೆಕ್ಟ್ ಇಲ್ಲ. ಎಲ್ಲರೂ ಹಾಕಿಸಿಕೊಳ್ಳಿ. ಈಗ ಭಾರತ ಸರ್ಕಾರದಿಂದ 14 ವರ್ಷದೊಳಗಿನ ಮಕ್ಕಳಿಗೆ ನೀಡುತ್ತಿದೆ. ಕೆಎಂಆರ್ ಸಿ ನಿಧಿಯಿಂದ ನಮ್ಮ ಜಿಲ್ಲೆಯಲ್ಲಿ 9 ವರ್ಷದಿಂದ 14 ವರ್ಷದೊಳಗಿನ ಮಕ್ಕಳಿಗೆ ಹಾಕಲು ಉದ್ದೇಶಿಸಿದೆ. ಇದನ್ನು ಒಂದು ಬಾರಿ ಮಾತ್ರ ಹಾಕಿಸುವುದು. ನಿಮ್ಮಹೆಸರಲ್ಲಿ ಇದು ಆಬ್ ಲೈನ್ ಪೋರ್ಟಲ್ ನಲ್ಲಿ ನೋಂದಣಿ ಆಗಿ ನಿಮಗೆ ಲಸಿಕೆ ಪ್ರಮಾಣ ಪತ್ರ ದೊರೆಯುತ್ತದೆಂದು ಹೇಳಿದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಮಾತನಾಡಿ ಜಿಲ್ಲೆಯಲ್ಲಿ ಈ ಲಸಿಕೆ ಹಾಕಲು 18 ಸಾವಿರ ಮಕ್ಕಳನ್ನು ಗುರುತಿಸಿದೆ, ಭಾರತ ಸರ್ಕಾರದಿಂದ 6 ಸಾವಿರ ಲಸಿಕೆ ಈಗಾಗಲೇ ಬಂದಿದ್ದು ಹಂತ ಹಂತವಾಗಿ ಬರಲಿದ್ದು ಈ ಅಭಿಯಾನ ಮೂರು ತಿಂಗಳ ನಡೆಯುತ್ತದೆಂದರು.
ಭಾರತೀಯ ಕುಟುಂಬ ಯೋಜನಾ ಸಂಘದ ವ್ಯವಸ್ಥಾಪಕಿ ಡಾ.ಜಯಲಕ್ಷ್ಮಿ ಮಾರುಕಟ್ಟೆಯಲ್ಲಿ ಈ ಹೆಚ್ ಪಿ ವಿ ಲಸಿಕೆ ಬೆಲೆ 4 ಸಾವಿರ ರೂ. ಇದನ್ನು ನಮ್ಮ ಸಂಸ್ಥೆಯಲ್ಲಿ ರಿಯಾಯಿತಿಯಿಂದ 1500 ರೂ ಗೆ ಈ ವರೆಗೆ 256 ಜನರಿಗೆ ನೀಡಿದೆ. ಈಗ ಸರ್ಕಾರ ಉಚಿತವಾಗಿ ನೀಡುತ್ತಿರುವುದು ಸಂತೋಷದ ಸಂಗತಿ ಎಲ್ಲರೂ ಇದರ ಸದುಪಯೋಗ ಪಡೆಯಬೇಕು ಎಂದರು.
ಲಸಿಕೆ ಪಡೆದ ಮಕ್ಕಳಾದ ನವ್ಯ ಮತ್ತು ನೇಹ ಸಂಜೆವಾಣಿಯೊಂದಿಗೆ ಮಾತನಾಡಿ ನಮ್ಮ ಸುರಕ್ಷತೆಗಾಗಿ ಲಸಿಕೆ ಪಡೆಯಲು ಸಂತೋಷವಾಗುತ್ತದೆ. ಎಲ್ಲಾ 14 ವರ್ಷದೊಳಗಿನ ಹೆಣ್ಣು ಮಕ್ಕಳು ಹಾಕಿಸಿಕೊಳ್ಳಬೇಕು. ಇದರಿಂದ ಏನೂ ಆಗಲ್ಲ. ನಾನು ಜಿಲ್ಲೆಯಲ್ಲಿ ಮೊದಲ ಲಸಿಕೆ ಪಡೆದಿದ್ದು ಸಂತೋಷವಾಯ್ತು ಎಂದು ಹೇಳಿದರು.
ಈ ವೇಳೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್.ಬಸಾರೆಡ್ಡಿ ಮೊದಲಾದವರು ಇದ್ದರು ಜಿಲ್ಲೆಯ ಎಲ್ಲಾ ತಾಲೂಕು, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಈ ಲಸಿಕೆ ಹಾಕಲಾಗುತ್ತದೆ. ಮಕ್ಕಳು ಪೋಷಕರೊಂದಿಗೆ ಆಗಮಿಸಿ ಹಾಕಿಸಿಕೊಳ್ಳಬೇಕಿದೆ.

