ವಿಜಯನಗರ (ಹೊಸಪೇಟೆ), ಮೇ.20 ವಸತಿ, ವಕ್ಫ್, ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಸಮರ್ಪಣೆ ಸಂಕಲ್ಪ ಕಾರ್ಯಕ್ರಮದಲ್ಲಿ ಪ್ರಾಸ್ತೌವಿಕವಾಗಿ ಮಾತನಾಡಿ, ಸಮರ್ಪಣಾ ಸಂಕಲ್ಪ ಸಮಾವೇಶಕ್ಕೆ ಅಂದಾಜು 1.5 ಲಕ್ಷ ಜನ ಸೇರುವ ನಿರೀಕ್ಷೆ ಇತ್ತು, ಆದರೆ ಇಂದು ಸುಮಾರು 3 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಸೇರಿರುವುದು ನಮ್ಮ ಸರ್ಕಾರದ ಸಾಧನೆ ಆಗಿದೆ. ಆಗಮಿಸಿದ ಎಲ್ಲಾ ಮಹಾಜನತೆಗೆ ಕೈಮುಗಿದು ನಮಸ್ಕಾರಗಳನ್ನು ತಿಳಿಸುತ್ತೇನೆ. ವಿಜಯನಗರ ಜಿಲ್ಲೆಗೆ ಅನೇಕ ಅಭಿವೃದ್ಧಿಗಳ ಬೇಡಿಕೆ ಇದೆ. 100 ಕೋಟಿ ವೆಚ್ಚದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಾಣ ಆಗಬೇಕಿದೆ. 40 ಕೋಟಿ ವೆಚ್ಚದಲ್ಲಿ ಉತ್ತಮ ವೈದ್ಯಕೀಯ ಸೇವೆಗೆ ಹೈಟೆಕ್ ಹಾಸ್ಪಿಟಲ್ ಆರಂಭಿಸಬೇಕಿದೆ. ಈಚೇಗೆ ತುಂಗಭದ್ರಾ ಜಲಾಶಯದ 19 ನೇ ಗೇಟ್ ದುರಸ್ಥಿಯಿಂದಾಗಿ ಬಹುದೊಡ್ಡ ಅನಾಹುತ ಸಂಭವಿಸಬೇಕಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿರ್ದೇಶನದಂತೆ ಶೀಘ್ರ ಕಾಮಗಾರಿ ಕೈಗೆತ್ತಿಕೊಂಡು ತಾತ್ಕಾಲಿಕ ಗೇಟ್ ಅಳವಡಿಸುವಲ್ಲಿ ಯಶಸ್ವಿಯಾಗಿದ್ದೇವೆ. ಶಾಶ್ವತ ಗೇಟ್ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಶೀಘ್ರ ಅನುದಾನ ನೀಡಬೇಕಿದೆ. ಈ ಭಾಗದ ರೈತರ ಬಹುದಿನದ ಬೇಡಿಕೆ ಸಕ್ಕರೆ ಕಾರ್ಖಾನೆ ಆರಂಭಿಸುವುದಾಗಿದೆ. ಈಗಾಗಲೇ ಮುಖ್ಯಮಂತ್ರಿಗಳ ಬಳಿ ಚರ್ಚಿಸಲಾಗಿದೆ. ಇನ್ನೆರಡು ತಿಂಗಳಲ್ಲಿ ಸಕ್ಕರೆ ಕಾರ್ಖಾನೆ ಸೂಕ್ತ ನಿವೇಶನ ಗುರುತಿಸಿ ಭೂಮಿಪೂಜೆ ನೆರವೇರಿಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭರವಸೆ ನೀಡಿದ್ದಾರೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸಹಕರಿಸಬೇಕಿದೆ ಎಂದರು.