ಬೆಳಗಾವಿ : ಲಕ್ಷಾಂತರ ರೈತರ ಜೀವನಾಡಿಯಾಗಿರುವ ಮಲಪ್ರಭಾ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ನೆರವು ಕೋರಿ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಶೀಘ್ರವೇ ಮುಖ್ಯಮಂತ್ರಿಗಳ ಬಳಿ ನಿಯೋಗ ಒಯ್ಯಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಹುಣಶಿಕಟ್ಟಿ ಗ್ರಾಮದಲ್ಲಿ, ಸಚಿವರಿಗೆ, ಶಾಸಕರಿಗೆ, ಡಿಸಿಸಿ ಬ್ಯಾಂಕ್ ನಿರ್ದೇಶಕರಿಗೆ ಹಾಗೂ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ನೂತನ ಆಡಳಿತ ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರಿಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಹಾಗೂ ಸತ್ಕಾರ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಖಾನೆ ಸಂಕಷ್ದಲ್ಲಿದೆ. ನಮ್ಮ ಮೇಲೆ ವಿಶ್ವಾಸವಿಟ್ಟು ರೈತರು ನಮ್ಮ ಪ್ಯಾನೆಲ್ ಗೆಲ್ಲಿಸಿದ್ದಾರೆ. ಸರಕಾರದಿಂದ ಸಾಧ್ಯವಾದ ಎಲ್ಲ ನೆರವು ಪಡೆದು ಕಾರ್ಖಾನೆಯನ್ನು ಅಭಿವೃದ್ಧಿಪಡಿಸಲಾಗುವುದು. ಇದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಈ ಭಾಗದ ಎಲ್ಲ ಶಾಸಕರು ಸೇರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು ಎಂದು ಅವರು ತಿಳಿಸಿದರು.
ಅಧಿಕಾರಿ ಸಿಕ್ಕಿದಾಗ ಜನರ ಕೆಲಸ ಮಾಡಿಕೊಡಬೇಕು. ಜನರ ವಿಶ್ವಾಸ ಗಳಿಸಬೇಕು. ಸಹಕಾರ ಕ್ಷೇತ್ರದಲ್ಲಿ ಪಕ್ಷ ಇಲ್ಲ. ನಾವೆಲ್ಲರೂ ಸೇರಿ ಪಕ್ಷಾತೀತವಾಗಿ ಕಾರ್ಖಾನೆಯನ್ನು ಉತ್ತುಂಗಕ್ಕೆ ಕೊಂಡೊಯ್ಯುವಕೆಲಸ ಮಾಡುತ್ತೇವೆ ಎಂದು ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಸಮಾರಂಭದಲ್ಲಿ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ, ಶಾಸಕರಾದ ಮಹಾಂತೇಶ್ ಕೌಜಲಗಿ, ವಿಶ್ವಾಸ್ ವೈದ್ಯ, ಆಸಿಫ್ ಸೇಠ್, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ನಾನಾಸಾಹೇಬ್ ಪಾಟೀಲ, ರಾಹುಲ್ ಜಾರಕಿಹೊಳಿ, ಸುನಿಲ ಹನಮಣ್ಣವರ್, ಶಂಕರ್ ಸದೆಪ್ಪ ಹೋಳಿ, ಲಕ್ಷ್ಮಿ ಹೋಳಿ, ದೀಪಾ ಹೋಳಿ ಬಸವರಾಜ ಶೇಗಾವಿ ಮುಂತಾದವರು ಉಪಸ್ಥಿತರಿದ್ದರು.