ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಆಕ್ರೋಶ:  ಲಕ್ಷ್ಮೀ ಹೆಬ್ಬಾಳ್ಕರ್ ಅಭಿಮಾನಿಗಳ ಬೃಹತ್ ಪ್ರತಿಭಟನೆ

Ravi Talawar
ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಆಕ್ರೋಶ:  ಲಕ್ಷ್ಮೀ ಹೆಬ್ಬಾಳ್ಕರ್ ಅಭಿಮಾನಿಗಳ ಬೃಹತ್ ಪ್ರತಿಭಟನೆ
WhatsApp Group Join Now
Telegram Group Join Now
 ಬೆಳಗಾವಿ: ವಿಧಾನ ಪರಿಷತ್ ನಲ್ಲಿ ಬಿಜೆಪಿ ಎಂಎಲ್ಸಿ ಸಿಟಿ ರವಿ ಅವರು, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ ಎಂಬ ಪ್ರಕರಣ ರಾಷ್ಟ್ರ ರಾಜಕಾರಣದಲ್ಲಿ ಸುದ್ದಿ ಮಾಡುತ್ತಿದ್ದು, ಇಂದು ಬೆಳಗಾವಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ ಬೆಂಬಲಿಗರು ಬೃಹತ್ ಪ್ರತಿಭಟನೆ ಮಾಡಿದ್ದಾರೆ.
ಬೆಳಗಾವಿ ನಗರದ ಸಿಪಿಎಡ್ ಮೈದಾನದಿಂದ ಸಹಸ್ರಾರು ಬೆಂಬಲಿಗರು ಮೆರವಣಿಗೆ ನಡೆಸಿ, ಸಿ‌.ಟಿ ರವಿ ಪರಿಷತ್ ಸ್ಥಾನದಿಂದ ವಜಾ ಮಾಡುವಂತೆ ಆಗ್ರಹಿಸಿದರು. ಮೆರವಣಿಗೆಯಲ್ಲಿ ಸಿಟಿ ರವಿ ಅಣಕು ಶವಯಾತ್ರೆ ನಡೆಸಿ ಪ್ರತಿಕೃತಿಗೆ ಸೀರೆ ಉಡಿಸಿ ಆಕ್ರೋಶ ಹೊರಹಾಕಿದರು. ಚನ್ನಮ್ಮ ವೃತ್ತದಲ್ಲಿ ಪ್ರತಿಕೃತಿ ಸುಟ್ಟು ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದು ಆಕ್ರೋಶ ಹೊರ ಹಾಕಿದರು.‌ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಸಿಟಿ ರವಿ ಬಹಿರಂಗ ಕ್ಷಮೆ ಕೇಳಬೇಕು ಎಂದು ಈ ವೇಳೆ ಹೋರಾಟಗಾರರು ಒತ್ತಾಯಿಸಿದರು
ಪ್ರತಿಭಟನೆಯಲ್ಲಿ ಶೋಕ ಸೂಚಿಸುವ ಹಾಡುಗಳನ್ನು ಹಾಕಿ ಸಿಟಿ ಸತ್ನಪ್ಪೊ ಸತ್ನೋ ಎಂದು ಬೊಬ್ಬೆ ಹೊಡೆದ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರು, ಬೆಳಗಾವಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರು ಹಾಗೂ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.‌ ಸಿ‌.ಟಿ.ರವಿ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಅಷ್ಟೇ ಅಲ್ಲ. ಇಡೀ ಸ್ತ್ರೀಕುಲಕ್ಕೆ ಅಪಮಾನ ಮಾಡಿದ್ದಾರೆ. ಸಿ.ಟಿ.ರವಿ ಕ್ಷಮೆಯಾಚಿಸಬೇಕು, ಅವರ ವಿಧಾನ ಪರಿಷತ್ ಸದಸ್ಯತ್ವ ರದ್ದು ಮಾಡಬೇಕೆಂದು ಅಭಿಮಾನಿಗಳು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲೆಯ ಎಲ್ಲೆಡೆಯಿಂದ ಹಾಗೂ ಬೇರೆ ಬೇರೆ ಜಿಲ್ಲೆಗಳಿಂದ ಸಹ ಬಹಳ ದೊಡ್ಡ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಒಂದು ಕ್ಷಣವೂ ವಿಧಾನ ಪರಿಷತ್ ಸದಸ್ಯರಾಗಿ ಮುಂದುವರಿಯುವ ಹಕ್ಕು ಸಿ.ಟಿ.ರವಿಗೆ ಇಲ್ಲ. ಅಂತವರನ್ನು ಬಿಜೆಪಿ ತಕ್ಷಣ ಹೊರಹಾಕಬೇಕು. ಮಾತೆತ್ತಿದರೆ ಭಾರತ್ ಮಾತಾಕಿ ಜೈ, ಜೈ ಶ್ರೀರಾಮ ಎನ್ನುವ ಬಿಜೆಪಿ ಸ್ತ್ರೀಯರಿಗೆ ಹೆಜ್ಜೆ ಹೆಜ್ಜಿಗೂ ಅವಮಾನ ಮಾಡುತ್ತಿದೆ ಎಂದು ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿಸಿದರು.
WhatsApp Group Join Now
Telegram Group Join Now
Share This Article