ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಂಗರಗಾದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಶ್ರೀ ಕಲ್ಮೇಶ್ವರ ದೇವಸ್ಥಾನದ ಸಮುದಾಯ ಭವನ ನಿರ್ಮಾಣದ ಕಾಮಗಾರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು.
ಹಂಗರಗಾ ಗ್ರಾಮ ಅಷ್ಟೇ ಅಲ್ಲ, ಇಡೀ ಕ್ಷೇತ್ರದಲ್ಲಿ ರಸ್ತೆ, ಚರಂಡಿ, ಶಾಲೆ ಕಟ್ಟಡ, ಶಾಲೆ ಕಂಪೌಂಡ್, ಮೈದಾನ, ದೇವಸ್ಥಾನಗಳ ನಿರ್ಮಾಣ, ವಿವಿಧ ಭವನಗಳ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಚುನಾವಣೆಯ ನಂತರ ಕೇವಲ ಅಭಿವೃದ್ಧಿ ರಾಜಕಾರಣ ಮಾಡುತ್ತಿದ್ದೇನೆ. ಯಾವುದೇ ತಾರತಮ್ಯವಿಲ್ಲದೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ನಿಮ್ಮ ಆಶಿರ್ವಾದದಿಂದ ಸಚಿವೆಯಾಗಿ ರಾಜ್ಯದ ಜನತೆಯ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಮುಂದಿನ ದಿನಗಳಲ್ಲೂ ನೀವೆಲ್ಲ ನನ್ನ ಜೊತೆಗಿದ್ದು ಬೆಂಬಲಿಸಬೇಕು. ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಜಾತಿ, ಧರ್ಮದ ಹೆಸರು ಹೇಳಿ ಬರುವವರನ್ನು ನಂಬಬೇಡಿ. ನಿಮ್ಮ ಕಷ್ಟ, ಸುಖದಲ್ಲಿ ನಮ್ಮ ಇಡೀ ಕುಟುಂಬ ನಿಮ್ಮ ಜೊತೆಗಿರುತ್ತದೆ. ಹಾಗಾಗಿ ನೀವು ಸಹ ನಮ್ಮ ಜೊತೆಗಿರಬೇಕು ಎಂದು ಸಚಿವರು ಮನವಿ ಮಾಡಿದರು.
ಈ ವೇಳೆ ಕಾಡಾ ಅಧ್ಯಕ್ಷ ಯುವರಾಜ ಕದಂ, ಮಾರುತಿ ಪಾರ್ಲೆಕರ್, ಬಾಳು ದೇಸೂರಕರ್, ಸುವರ್ಣ ಹೊಸಕೋಟಿ, ಬಾಳು ಪಾಟೀಲ, ವಿಷ್ಣು ಸೋನವಾಲ್ಕರ್, ಲಕ್ಷ್ಮೀ ಪಾಟೀಲ, ನಿವೃತ್ತಿ ತಳವಾರ, ಕವಿತಾ.ಎಸ್ ನಾಯಿಕ, ಗೋಪಾಲ ಘೋಡ್ಸೆ, ಯಲ್ಲಪ್ಪ ಶಾಹಾಪೂರಕರ, ಮೀನಾ ಘೋಡ್ಸೆ, ಭರಮಾ ಕುರುಂದವಾಡ, ಮೂನಪ್ಪ ಚಳವೇಟಕರ್, ಲಕ್ಷ್ಮೀ ಕಾಂಬಳೆ ಸೇರಿದಂತೆ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.


