ಗದಗ (ನ.20): ಕಬ್ಬಿನ ಹೋರಾಟದ ಬಳಿಕ ರಾಜ್ಯ ಸರ್ಕಾರಕ್ಕೆ ಮತ್ತೊಂದು ರೈತ ಹೋರಾಟದ ಬಿಸಿ ತಟ್ಟಿದೆ. ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಕ್ಕೆ ಒತ್ತಾಯಿಸಿ ಇಂದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕು ಬಂದ್ಗೆ ಕರೆ ನೀಡಲಾಗಿದೆ. ರೈತ ಸಂಘಟನೆಗಳಿಂದ ಈ ಬಂದ್ ಕರೆ ನೀಡಿದ್ದು, ಲಕ್ಷ್ಮೇಶ್ವರ ತಾಲೂಕಿನಾದ್ಯಂತ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈ ರಜೆ ಘೋಷಣೆ ಮಾಡಲು ಗದಗ ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ್ ಆದೇಶ ನೀಡಿದ್ದಾರೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಕಳೆದ ಐದು ದಿನಗಳಿಂದ ಅಹೋರಾತ್ರಿ ಸತ್ಯಾಗ್ರಹ ನಡೆಯುತ್ತಿದೆ. ರೈತರ ಹೋರಾಟಕ್ಕೆ ಸರ್ಕಾರ ಯಾವುದೇ ಪರಿಹಾರ ನೀಡದಿರುವುದರಿಂದ ರೈತರು ಸರ್ಕಾರದ ವಿರುದ್ಧ ಕೆಂಡಕಾರ್ತಿದ್ದಾರೆ. ಹೀಗಾಗಿ ಇಂದು ಲಕ್ಷ್ಮೇಶ್ವರ ತಾಲೂಕು ಬಂದ್ ಗೆ ಕರೆ ನೀಡಿದ್ದಾರೆ. ಈ ಬಂದ್ ನಲ್ಲಿ ವಿವಿಧ ಮಠಾಧೀಶರು ಭಾಗವಹಿಸುವ ಸಾಧ್ಯತೆಯಿದೆ. ಪ್ರತಿಭಟನೆಯಲ್ಲಿ ಐದು ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆಯಿದೆ.
ಬೇಡಿಕೆ ಈಡೇರುವವರೆಗೆ ಹೋರಾಟ ನಿಲ್ಲಿಸೋದಿಲ್ಲ
ರೈತರ ನಿರಂತರ ಹೋರಾಟಕ್ಕೆ ಮಣಿದ ಸಚಿವ ಎಚ್ ಕೆ ಪಾಟೀಲ್ ಪ್ರತಿಭಟನಾ ಸ್ಥಳಕ್ಕೆ ಬಂದು ರೈತರನ್ನು ಭೇಟಿಯಾಗಿ ಹೋರಾಟ ಕೈಬಿಡುವಂತೆ ಮನವಿ ಮಾಡಿದ್ದಾರೆ. ಆದ್ರೆ, ಬೇಡಿಕೆ ಈಡೇರುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ರೈತರು ಸ್ಪಷ್ಟಪಡಿಸಿದ್ದಾರೆ.


