ಕುಮಾರಸ್ವಾಮಿ ಲೇಔಟ್‌ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ

ಬೆಳಗಾವಿ, ಡಿ. 25.:- ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, ನಮ್ಮ ಕ್ಷೇತ್ರಕ್ಕೆ ಒಳ್ಳೆಯ ದಿನಗಳು ಬಂದಿವೆ. ಕ್ಷೇತ್ರದ ಎಲ್ಲಾ ಸಮುದಾಯದವರ ಏಳಿಗೆಗೆ ಶ್ರಮಿಸುತ್ತಿರುವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಕುಮಾರಸ್ವಾಮಿ ಲೇಔಟ್ ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಸಚಿವರು, ಸುಮಾರು 2 ಕೋಟಿ ರೂಪಾಯಿಗಳ ವೆಚ್ಚದ ರಸ್ತೆ ನಿರ್ಮಾಣ, ಫೇವರ್ಸ್ ಅಳವಡಿಕೆ, ಚರಂಡಿ ದುರಸ್ತಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಇಂದು ಚಾಲನೆ ನೀಡಲಾಗಿದೆ.
ಕ್ಷೇತ್ರದಲ್ಲಿರುವ ಪ್ರತಿಯೊಂದು ಸಮಾಜ, ಪ್ರತಿಯೊಬ್ಬ ನಾಗರಿಕರು ಜೊತೆಯಾಗಿ ಮುಂದೆ ಸಾಗಬೇಕು. ಎಲ್ಲ ಸಮುದಾಯದವರು ಬೆಳೆಯಬೇಕು. ಕುಮಾರಸ್ವಾಮಿ ಬಡಾವಣೆ ಮಾದರಿ ಬಡಾವಣೆಯಾಗಿ ಅಭಿವೃದ್ಧಿಯಾಗಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಭಾರತ ದೇಶದಲ್ಲಿ ನಾವೆಲ್ಲ ವಿವಿಧ ಸಂಸ್ಕೃತಿಯಿಂದ ಬೆಳೆದಿದ್ದೇವೆ. ಹಿರಿಯರಿಗೆ ಗೌರವ ಕೊಡುವ ಪದ್ದತಿಯನ್ನು ಹೊಂದಿದ್ದೇವೆ. ನಾವೆಲ್ಲರೂ ಪ್ರಗತಿಪರ ಚಿಂತನೆಯಲ್ಲಿ ಬೆಳೆದಿದ್ದೇವೆ. ಜನರ ಪ್ರತಿನಿಧಿಯಾಗಿ ಕ್ಷೇತ್ರವನ್ನು ಸುಧಾರಣೆ ಮಾಡುವುದೇ ನನ್ನ ಕನಸಾಗಿದೆ ಎಂದು ಹೇಳಿದರು.


