ಅಥಣಿ : ರಾಷ್ಟ್ರಕವಿ ಕುವೆಂಪು ಅವರು ಕನ್ನಡ ನಾಡಿನ ಸಾರಸ್ವಲೋಕಕ್ಕೆ ನೀಡಿದ ಕೊಡುಗೆ ಅಪಾರವಾದದ್ದು.ಕನ್ನಡ ನಾಡಿಗೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟಿರುವ ಕೀರ್ತಿ ಇವರಿಗೆ ಸಲ್ಲುತ್ತದೆ. ಅವರು ನೀಡಿದ ವಿಶ್ವ ಮಾನವ ಸಂದೇಶವನ್ನು ಪ್ರತಿಯೊಬ್ಬರೂ ಪಾಲಿಸುವುದು ಇಂದಿನ ಅಗತ್ಯವಾಗಿದೆ ಎಂದು ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣಾಸಾಹೇಬ ತೆಲಸಂಗ ಹೇಳಿದರು.
ಅವರು ಪಟ್ಟಣದಲ್ಲಿ ಎಚ್ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಾಲಯದಲ್ಲಿ ರಾಷ್ಟ್ರಕವಿ ಕುವೆಂಪು ಅವರ 120 ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಮಾತನಾಡಿದರು. ಮನುಜಮತ ವಿಶ್ವಪಥ ಎಂಬ ಸಂದೇಶವನ್ನು ತಮ್ಮ ಸಾಹಿತ್ಯದ ಮೂಲಕ ನೀಡಿರುವ ಕುವೆಂಪು ಅವರು ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರು ರಚಿಸಿರುವ ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ ನಾಡಗೀತೆಯಾದರೆ ಉಳುವ ಯೋಗಿಯ ನೋಡಲ್ಲಿ ಎಂಬ ರೈತ ಗೀತೆ ಎಂದಿಗೂ ಮರೆಯಲು ಸಾಧ್ಯವಿಲ್ಲ. ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ಲಾಂಛನದ ಜೊತೆಗೆ ಸಮಾನ ಸ್ಥಾನದಲ್ಲಿ ಅವರ ಕುವೆಂಪು ಅವರ ಭಾವಚಿತ್ರ ಅಳವಡಿಸುವ ಮೂಲಕ ಗೌರವಿಸಲಾಗಿದೆ. ಅವರ ಜನ್ಮದಿನಾಚರಣೆಯನ್ನು ವಿಶ್ವಮಾನವ ದಿನಾಚರಣೆಯನ್ನಾಗಿ ಆಚರಿಸುವ ಮೂಲಕ ಅವರನ್ನು ಸ್ಮರಿಸುವುದು ನಮ್ಮೆಲ್ಲರಿಗೆ ಹೆಮ್ಮೆ. ಅವರು ಹೆಸರಿನಿಂದ ಪುಟ್ಟಪ್ಪ ಎನಿಸಿಕೊಂಡರು ಕನ್ನಡ ನಾಡಿಗೆ ದೊಡ್ಡಪ್ಪ ಎನಿಸಿಕೊಂಡಿದ್ದಾರೆ. ಅವರು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದಿದರೂ ಕೂಡ ಕನ್ನಡ ನಾಡು, ನುಡಿ, ಮತ್ತು ಸಂಸ್ಕೃತಿಯ ಬಗ್ಗೆ ಅಪಾರ ಪ್ರೀತಿ ಮತ್ತು ಅಭಿಮಾನ ಬೆಳೆಸಿಕೊಂಡಿದ್ದರು. ಅವರು ನಾಡು ನುಡಿಯ ಬಗ್ಗೆ ರಚಿಸಿದ ಗೀತೆಗಳು ಅವರಲ್ಲಿದ್ದ ಕನ್ನಡ ಪ್ರೇಮ ಎಷ್ಟು ಎಂಬುದನ್ನು ಸಾರುತ್ತಿವೆ ಎಂದು ಹೇಳಿದರು.
ಮುಖೆ ಅತಿಥಿಗಳಾಗಿ ಆಗಮಿಸಿದ್ದ ಸಾಹಿತಿ ಡಾ. ಆರ್ ಎಸ್ ದೊಡ್ಡನಿಂಗಪ್ಪಗೋಳ ಮಾತನಾಡಿ ವಿಶ್ವದಲ್ಲಿ ಶಾಂತಿಯಿಂದ ನೆಲಿಸಬೇಕಾದರೆ ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ಜಗತ್ತಿಗೆ ಸಾರುವ ಜೊತೆಗೆ ಪ್ರತಿಯೊಬ್ಬರೂ ಪಾಲನೆ ಮಾಡಬೇಕಾದ ಅಗತ್ಯವಿದೆ. ಅವರು ನೀಡಿರುವ ಸಂದೇಶವನ್ನು ಅರ್ಥ ಮಾಡಿಕೊಂಡು ನಮ್ಮ ಜನಪ್ರತಿನಿಧಿಗಳು ಅನುಷ್ಠಾನಗೊಳಿಸಿದರೆ ನಮ್ಮ ನಾಡು ನಮ್ಮ ದೇಶ ಸರ್ವಜನಾಂಗದ ಶಾಂತಿಯ ತೋಟವಾಗುತ್ತದೆ. ಪ್ರಸ್ತುತ ಒಂದು ಧರ್ಮ, ಜಾತಿ ಹೆಸರಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಆತಂಕಕಾರಿಯಾಗಿವೆ. ಇಂತಹ ಆತಂಕಗಳು ದೂರವಾಗಿ ಜಾತಿ, ಧರ್ಮಗಳ ಗೊಡವೆ ಇಲ್ಲದೇ ಬದುಕು ಸಾಗಿಸಬೇಕು ಎಂಬುದೇ ಕುವೆಂಪು ಅವರ ಆಶಯವಾಗಿತ್ತು. ಅವರ ಜನ್ಮ ದಿನಾಚರಣೆಯನ್ನು ನಾವೆಲ್ಲರೂ ಆಚರಿಸುವ ಮೂಲಕ ಅವರು ನೀಡಿರುವ ವಿಶ್ವಮಾನವ ಸಂದೇಶ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸುವಂತೆ ಪ್ರತಿಯೊಬ್ಬರೂ ಅನುಸರಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಕರವೇ ತಾಲೂಕ ಘಟಕದ ಅಧ್ಯಕ್ಷ ಉದಯ ಮಾಕಾಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಇತ್ತೀಚಿಗೆ ಜರುಗಿದ ಗಡಿನಾಡು ಕನ್ನಡ ಉತ್ಸವ ಕಾರ್ಯಕ್ರಮಕ್ಕೆ ಸಹಾಯ ಸಹಕಾರ ನೀಡಿದ ಕನ್ನಡ ಸೇವಕರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಗನ್ನಾಥ ಬಾಮನೆ, ಅನಿಲ ಪಾಟೀಲ, ಕುಮಾರ ಬಡಿಗೇರ, ಸಿದ್ದು ಹಂಡಗಿ, ಶೋಭಾ ಮಾಳಿ, ವಿಜಯ ನೇಮಗೌಡ, ರಾಜು ತಂಗಡಿ, ಸತೀಶ ಯಲ್ಲಟ್ಟಿ, ರಾಜು ವಾಘಮಾರೆ, ಪರಶುರಾಮ ಕಾಂಬಳೆ, ಅನಿಲ ಒಡೆಯರ, ಹಣಮವ್ವ ದಂಡಗಿ, ಸುಕುಮಾರ ಮಾದರ, ಬಾಲಕೃಷ್ಣ ಗುಡದೆ, ಅನಿಲ ಭಜಂತ್ರಿ, ಮಲ್ಲು ನಡುವಿನಕೇರಿ, ಮುತ್ತುರಾಜ ಗೊಲ್ಲರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.